ವಿಧಾನಸಭೆಯ ನೂತನ ಸಭಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಪಕ್ಷದಿಂದ ರಮೇಶ್‌ ಕುಮಾರ್‌ ಹಾಗೂ ಬಿಜೆಪಿಯಿಂದ ಎಸ್‌. ಸುರೇಶ್‌ ಕುಮಾರ್‌ ನಾಮಪತ್ರ ಸಲ್ಲಿಸುವ ಮೂಲಕ ಚುನಾವಣಾ ಸಮರ ವಿಧಾನಸಭೆಯಲ್ಲೂ ಮುಂದುವರೆದಿದೆ.

ಬೆಂಗಳೂರು : ವಿಧಾನಸಭೆಯ ನೂತನ ಸಭಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಪಕ್ಷದಿಂದ ರಮೇಶ್‌ ಕುಮಾರ್‌ ಹಾಗೂ ಬಿಜೆಪಿಯಿಂದ ಎಸ್‌. ಸುರೇಶ್‌ ಕುಮಾರ್‌ ನಾಮಪತ್ರ ಸಲ್ಲಿಸುವ ಮೂಲಕ ಚುನಾವಣಾ ಸಮರ ವಿಧಾನಸಭೆಯಲ್ಲೂ ಮುಂದುವರೆದಿದೆ.

ಕಾಂಗ್ರೆಸ್‌-ಜೆಡಿಎಸ್‌ ಬಹುಮತ ಹೊಂದಿದ್ದು ಸುಲಭವಾಗಿ ರಮೇಶಕುಮಾರ್‌ ಆಯ್ಕೆಯಾಗಲಿದ್ದರೂ, ಕಾಂಗ್ರೆಸ್‌ ಪಕ್ಷದಲ್ಲಿ ನಾನಾ ಕಾರಣಗಳಿಂದ ಅಸಮಾಧಾನಗೊಂಡಿರುವ ಶಾಸಕರು ನೆರವಾಗಬಹುದೆಂಬ ಲೆಕ್ಕಾಚಾರದಿಂದ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಕೂಟ 118 ಶಾಸಕರ ಬಲ ಹೊಂದಿದ್ದರೆ, ಬಿಜೆಪಿ 104 ಶಾಸಕರನ್ನು ಹೊಂದಿದೆ.

ಶುಕ್ರವಾರ ಮಧ್ಯಾಹ್ನ 12.15ಕ್ಕೆ ವಿಧಾನಸಭೆಯ ಒಂದು ದಿನದ ವಿಶೇಷ ಅಧಿವೇಶನ ಆರಂಭವಾಗಲಿದ್ದು, ಮೊದಲಿಗೆ ಸ್ಪೀಕರ್‌ ಚುನಾವಣೆ ನಡೆಯಲಿದೆ. ಒಂದು ವೇಳೆ ಸುರೇಶ್‌ಕುಮಾರ್‌ ಅವರೇನಾದರೂ ನಾಮಪತ್ರ ವಾಪಸ್‌ ಪಡೆದಲ್ಲಿ ಮಾತ್ರ ಅವಿರೋಧವಾಗಿ ಆಯ್ಕೆಯಾಗುತ್ತದೆ. ಇಲ್ಲದಿದ್ದರೆ ಚುನಾವಣೆ ನಡೆಯಲಿದೆ.

ವಾಪಸ್‌ ಪಡೆಯುವ ವಿಶ್ವಾಸವಿದೆ- ಸಿದ್ದು: ಶುಕ್ರವಾರ ನಡೆಯಲಿರುವ ಸಭಾಧ್ಯಕ್ಷರ ಚುನಾವಣೆಗೆ ಕಾಂಗ್ರೆಸ್‌-ಜೆಡಿಎಸ್‌ ಪರ ಅಭ್ಯರ್ಥಿಯಾಗಿ ರಮೇಶಕುಮಾರ್‌ ಗುರುವಾರ ನಾಮಪತ್ರ ವಿಧಾನಸಭೆಯ ಕಾರ್ಯದರ್ಶಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ರಮೇಶಕುಮಾರ್‌ ಆಯ್ಕೆಯಾಗುವುದು ಖಚಿತ. ಬಿಜೆಪಿಯವರು ಕೇವಲ ವಿರೋಧಕ್ಕಾಗಿ ನಾಮಪತ್ರ ಸಲ್ಲಿಸಿದ್ದು, ನಾಳೆ ನಾಮಪತ್ರ ವಾಪಸ್‌ ಪಡೆಯುವ ವಿಶ್ವಾಸವಿದೆ ಎಂದರು.

ರಮೇಶಕುಮಾರ್‌ ಈ ಹಿಂದೆ ಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವವಿದೆ. ಕಾನೂನಿನ ಜ್ಞಾನ, ನಿಯಮಾವಳಿಗಳನ್ನು ಬಲ್ಲವರಾಗಿದ್ದಾರೆ ಎಂದರು. ಐದು ವರ್ಷಗಳ ಕಾಲ ಸಭಾಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುವ ವಿಶ್ವಾಸವಿದೆ ಎಂದರು. ಚುನಾವಣೆ ನಂತರ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ಮಾತಿಗೆ ಹೆಚ್ಚಿನ ಮಹತ್ವ ಕೊಡಬೇಕಿಲ್ಲ , ರಾಜಕೀಯಕ್ಕಾಗಿ ಏನೆಲ್ಲ ಮಾತನಾಡುತ್ತಿದ್ದಾರೆ ಎಂದ ಅವರು, ಸಭಾಧ್ಯಕ್ಷರ ಆಯ್ಕೆ ನಂತರ ಸಂಪುಟ ವಿಸ್ತರಣೆ ಬಗ್ಗೆ ನಿರ್ಧರಿಸಲಾಗುವುದು

ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌, ಕಾರ್ಯಾಧ್ಯಕ್ಷ ಎಸ್‌.ಆರ್‌. ಪಾಟೀಲ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಕೆ.ಎಚ್‌. ಮುನಿಯಪ್ಪ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು. ಗೆಲ್ಲುವ ವಿಶ್ವಾಸ-ಸುರೇಶ್‌: ಬಿಜೆಪಿ ಅಭ್ಯರ್ಥಿಯಾಗಿ ಎಸ್‌. ಸುರೇಶಕುಮಾರ್‌ ಸಹ ನಾಮಪತ್ರ ಸಲ್ಲಿಸಿದರು. ಶಾಸಕರಾದ ಡಾ. ಅಶ್ವಥ್‌ ನಾರಾಯಣ, ಸುನೀಲ್‌ಕುಮಾರ್‌ ಜೊತೆ ಆಗಮಿಸಿ ವಿಧಾನಸಭೆ ಕಾರ್ಯದರ್ಶಿ ಎಸ್‌. ಮೂರ್ತಿ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಕ್ಷದ ಆದೇಶದಂತೆ ನಾಮಪತ್ರ ಸಲ್ಲಿಸಿದ್ದೇನೆ. ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ. ನಾಳೆಯವರೆಗೂ ಕಾಯಿರಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು.