ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪ ಸಮರ ಮುಕ್ತಾಯವಾಗಿದೆ.ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೂ ಈ ಚುನಾವಣೆಯ ಫಲಿತಾಂಶ ಪ್ರಮುಖವಾಗಿದೆ. ಏಪ್ರಿಲ್ 13 ರಂದು ಹೊರಬೀಳುವ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.
ಮೈಸೂರು(ಎ.10): ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪ ಸಮರ ಮುಕ್ತಾಯವಾಗಿದೆ.ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೂ ಈ ಚುನಾವಣೆಯ ಫಲಿತಾಂಶ ಪ್ರಮುಖವಾಗಿದೆ. ಏಪ್ರಿಲ್ 13 ರಂದು ಹೊರಬೀಳುವ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.
ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಗುಂಡ್ಲುಪೇಟೆ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರಗಳಲ್ಲಿನ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದೆ. ನಂಜನಗೂಡಿನಲ್ಲಿ ನಿನ್ನ ಸಂಜೆ 5ರ ವೇಳೆಗೆ ಶೇ 76.84ರಷ್ಟು ಮತ ಚಲಾವಣೆಯಾಗಿದ್ದರೆ, ಗುಂಡ್ಲುಪೇಟೆಯಲ್ಲಿ ಶೇ 78 ಮತ ಚಲಾವಣೆಯಾಗಿದೆ. ಬಿಸಿಲಿನ ಬೇಗೆಯಿಂದಾಗಿ ಮತದಾನ ಪ್ರಕ್ರಿಯೆ ಮಧ್ಯಾಹ್ನ ಮಂದಗತಿಯಲ್ಲಿ ಸಾಗಿತ್ತು. ಆದರೆ ಸಂಜೆ ವೇಳೆಗೆ ಮತ್ತೆ ಜನ ಸಾಲುಗಟ್ಟಿ ಮತಗಟ್ಟೆಗಳಲ್ಲಿ ನಿಂತು ಮತದಾನ ಮಾಡಿದರು.
ಸಾಮಾನ್ಯ ಚುನಾವಣೆಗಳಲ್ಲಿ ನಡೆಯುವಂತೆಯೇ ಪ್ರಸ್ತುತ ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಕೆಲ ಅಹಿತಕರ ಘಟನೆಗಳು ನಡೆದವು. ಎರಡೂ ಕ್ಷೇತ್ರಗಳಲ್ಲಿ ಕೆಲವೆಡೆ ಕಾರ್ಯಕರ್ತರ ನಡುವೆ ಜಟಾಪಟಿ, ಗುಂಪು ಚದುರಿಸಲು ನಡೆದ ಲಘು ಲಾಠಿ ಪ್ರಹಾರ ಹೊರತುಪಡಿಸಿ ಮತದಾನ ಬಹುತೇಕ ಶಾಂತಿಯುತವಾಗಿತ್ತು.
ಮಾಜಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ಅವರ ಅಕಾಲಿಕ ನಿಧನದಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ಗುಂಡ್ಲುಪೇಟೆಯಲ್ಲಿ ಮತದಾನ ನಡೆದರೆ, ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದ್ದರಿಂದ ನಂಜನಗೂಡಿನಲ್ಲಿ ಚುನಾವಣೆ ನಡೆಯಿತು.
ಏ.13ರಂದು ಮತಗಳ ಎಣಿಕೆ ನಡೆಯಲಿದ್ದು, ಅಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಈ ಫಲಿತಾಂಶದ ಮೇಲೆ ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದ್ದರೆ , ಬಿಜೆಪಿ ಪಾಳಯದಲ್ಲೂ ಸಾಕಷ್ಟು ಬದಲಾವನೆಯಾಗುವ ಸಾಧ್ಯತೆಯಿದೆ.
