ಏಪ್ರಿಲ್‌ ಮೊದಲ ವಾರ ಚುನಾವಣೆ ಘೋಷಣೆ?

First Published 24, Mar 2018, 8:04 AM IST
Election Date may announce in April 1 st Week
Highlights

ರಾಜ್ಯ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಬರುವ ಏಪ್ರಿಲ್‌ ಮೊದಲ ವಾರದಲ್ಲಿ ಹೊರಬೀಳುವ ಸಾಧ್ಯತೆಯಿದೆ.

ಬೆಂಗಳೂರು (ಮಾ.24):  ರಾಜ್ಯ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಬರುವ ಏಪ್ರಿಲ್‌ ಮೊದಲ ವಾರದಲ್ಲಿ ಹೊರಬೀಳುವ ಸಾಧ್ಯತೆಯಿದೆ.

ಚುನಾವಣಾ ವೇಳಾಪಟ್ಟಿಇನ್ನು ಎರಡು ಮೂರು ದಿನಗಳಲ್ಲಿ ಘೋಷಣೆಯಾಗಲಿದೆ ಎಂಬ ವದಂತಿ ದಟ್ಟವಾಗಿ ಹಬ್ಬಿತ್ತು. ಆದರೆ, ಇದನ್ನು ಬಲವಾಗಿ ಅಲ್ಲಗಳೆದಿರುವ ಚುನಾವಣಾ ಆಯೋಗದ ಮೂಲಗಳು ಏಪ್ರಿಲ್‌ ಮೊದಲ ವಾರದಲ್ಲಿ ಪ್ರಕಟಿಸುವ ಸಂಭವವಿದೆ ಎಂದು ಸ್ಪಷ್ಟಪಡಿಸಿವೆ.

ಇದೇ ತಿಂಗಳ 27 ಮತ್ತು 28ರಂದು ಎರಡು ದಿನಗಳ ಕಾಲ ಕೇಂದ್ರ ಚುನಾವಣಾ ಆಯೋಗದ ಉಪ ಚುನಾವಣಾಧಿಕಾರಿ ಉಮೇಶ್‌ ಸಿನ್ಹಾ ನೇತೃತ್ವದ ತಂಡ ಚುನಾವಣಾ ಸಿದ್ಧತೆಗಳ ಪರಿಶೀಲನೆಗಾಗಿ ಬೆಂಗಳೂರಿಗೆÜ ಆಗಮಿಸಲಿದೆ.

ಸಿನ್ಹಾ ಅವರು ಎರಡು ದಿನಗಳ ಕಾಲ ಕಳೆದ ಬಾರಿಯಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಸೇರಿದಂತೆ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಚುನಾವಣೆಯ ಸಿದ್ಧತೆ ಕುರಿತು ವಿಸ್ತೃತ ಸಮಾಲೋಚನೆ ನಡೆಸಲಿದ್ದಾರೆ. ಸಿದ್ಧತೆಯ ಕೊನೆಯ ಹಂತದಲ್ಲಿ ಏನೇನು ಆಗಿದೆ ಮತ್ತು ಏನೇನು ಬಾಕಿ ಉಳಿದಿದೆ ಎಂಬುದರ ಸಂಪೂರ್ಣ ಮಾಹಿತಿ ಪಡೆದುಕೊಂಡು ದೆಹಲಿಗೆ ವಾಪಸಾಗುವ ಅವರು ಮುಖ್ಯ ಚುನಾವಣಾ ಅಯುಕ್ತರಿಗೆ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.

ನಂತರ ಏಪ್ರಿಲ್‌ ಮೊದಲ ವಾರದಲ್ಲಿ ಕೇಂದ್ರ ಚುನಾವಣಾ ಆಯುಕ್ತರ ನೇತೃತ್ವದ ತಂಡ ಬೆಂಗಳೂರಿಗೆ ಆಗಮಿಸಿ ಅಂತಿಮ ಹಂತದ ಪರಿಶೀಲನೆ ಮತ್ತು ಸಮಾಲೋಚನಾ ಸಭೆಗಳನ್ನು ನಡೆಸಲಿದೆ. ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸಾಧ್ಯವಾದರೆ ಆಗಲೇ ಬೆಂಗಳೂರಿನಲ್ಲಿ ಚುನಾವಣಾ ವೇಳಾಪಟ್ಟಿಘೋಷಿಸುವ ಸಂಭವವಿದೆ. ಇಲ್ಲದಿದ್ದರೆ ದೆಹಲಿಗೆ ವಾಪಸಾಗಿ ಅಲ್ಲಿ ಪತ್ರಿಕಾಗೋಷ್ಠಿ ನಡೆಸಿ ವೇಳಾಪಟ್ಟಿಪ್ರಕಟಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇದುವರೆಗೂ ಎಷ್ಟುಹಂತಗಳಲ್ಲಿ ಚುನಾವಣೆ ನಡೆಯುತ್ತದೆ ಎನ್ನುವುದು ನಿಗದಿಯಾಗಿಲ್ಲ. ಮುಖ್ಯ ಚುನಾವಣಾ ಆಯುಕ್ತರು ಬೆಂಗಳೂರಿಗೆ ಆಗಮಿಸಿ ಪರಿಶೀಲನೆ ನಡೆಸಿ, ಸಿದ್ಧತೆ ಮತ್ತು ಭದ್ರತೆಯ ಖಾತರಿ ಪಡೆದುಕೊಂಡ ನಂತರವೇ ಎಷ್ಟುಹಂತಗಳಲ್ಲಿ ಚುನಾವಣೆ ನಡೆಸಬೇಕು ಎಂಬುದರ ತೀರ್ಮಾನ ಕೈಗೊಳ್ಳಲಿದ್ದಾರೆ. ಒಂದೇ ಹಂತದ ಚುನಾವಣೆಗೆ ಬೇಕಾದ ಸಿಬ್ಬಂದಿ ಮತ್ತು ಭದ್ರತೆ ನೀಡುವುದಕ್ಕೆ ಸಾಧ್ಯವಾದಲ್ಲಿ ಅದಕ್ಕೂ ಸಿದ್ಧರಾಗಬಹುದು. ಅದರಲ್ಲಿ ತುಸು ಅನುಮಾನ ಬಂದರೂ ‘ರಿಸ್ಕ್‌’ ತೆಗೆದುಕೊಳ್ಳದೆ ಎರಡು ಹಂತದ ಚುನಾವಣೆ ನಡೆಸಲಾಗುವುದು. ಬಹುತೇಕ ಮೇ ಎರಡನೇ ವಾರ ಚುನಾವಣೆ ನಡೆಯಬಹುದು ಎನ್ನಲಾಗಿದೆ.

ಈ ನಡುವೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್‌ ನೇತೃತ್ವದ ಅಧಿಕಾರಿಗಳ ತಂಡ ಚುನಾವಣೆಗೆ ಬೇಕಾದ ಸಿದ್ಧತೆಗಳ ಬಗ್ಗೆ ಸತತ ಪರಿಶೀಲನೆ ಮತ್ತು ಉಸ್ತುವಾರಿಯಲ್ಲಿ ನಿರತರಾಗಿದೆ.

loader