ಬೆಂಗಳೂರು :  ಚುನಾವಣಾ ಆಯೋಗದಿಂದ ನೀಡಲಾಗಿರುವ ಮತದಾರರ ಗುರುತಿನ ಚೀಟಿಯನ್ನು ಕುಟುಂಬಸ್ಥರಲ್ಲದವರಿಗೆ ನೀಡುವುದು ಮತ್ತು ಪಡೆಯುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುನಾಥ ಪ್ರಸಾದ್ ತಿಳಿಸಿದರು. ಬಿಬಿಎಂಪಿ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳ ಚುನಾವಣೆ ಸಿದ್ಧತೆಗಳ ಕುರಿತು ಸುದ್ಧಿಗೋಷ್ಠಿ ನಡೆಸಿದ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆ ವೇಳೆ ಭಾರಿ ಪ್ರಮಾಣದಲ್ಲಿ ಗುರುತಿನ ಚೀಟಿ ಸಂಗ್ರಹಣೆ ಪತ್ತೆಯಾಗಿತ್ತು. 

ಆ ರೀತಿ ಮತ್ತೊಬ್ಬರ ಗುರುತಿನ ಚೀಟಿ ಸಂಗ್ರಹಣೆ ಮಾಡುವುದು ಬೇರೆಯವರ ಗುರುತಿನ ಚೀಟಿ ನೀಡುವುದು ಅಪರಾಧವಾಗಿದೆ. ಈ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುವುದು. ಆಮಿಷವೊಡ್ಡುವುದು, ಮತದಾರರ ಮೇಲೆ ಒತ್ತಡ ಹೇರುವುದು, ಕುಟುಂಬ ಸದಸ್ಯರಲ್ಲದ ಮತದಾರರ ಗುರುತಿನ ಚೀಟಿ ಸಂಗ್ರಹಿಸುವವರ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ದಾಖ ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. 

ಪಾಲಿಕೆಯ ಅಧಿಕಾರಿಗಳು ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ತೆರಳಿ ಮತದಾರರ ಮನಸ್ಥಿತಿಯನ್ನು ಅರಿಯಲಿದ್ದು, ಯಾರಾದರೂ ಒತ್ತಡ ಹಾಕುತ್ತಿದ್ದರೆಯೇ ಎಂಬ ಮಾಹಿತಿ ಕಲೆ ಹಾಕಲಿದ್ದಾರೆ. ಮಾಹಿತಿಯನ್ನು ಸಂಗ್ರಹಿಸಿದ ನಂತರ ಅದನ್ನು ಗೌಪ್ಯವಾಗಿಡಲಾಗುವುದು. ಆದರೆ, ಮತದಾರರಿಗೆ ಯಾರು ಒತ್ತಡ ಹಾಕಿದ್ದಾರೋ ಅಂತಹವರ ವಿರುದ್ಧ ಕ್ರಮಕೈಗೊಳ್ಳುವುದು ಖಚಿತ ಎಂದು ತಿಳಿಸಿದರು. 

ಪಾಲಿಕೆಯ ವ್ಯಾಪ್ತಿಯ ಬೆಂಗಳೂರು ಕೇಂದ್ರ, ಉತ್ತರ ಮತ್ತು ದಕ್ಷಿಣ ಮೂರೂ ಲೋಕಸಭಾ ಕ್ಷೇತ್ರಗಳಲ್ಲಿ 8,515 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಜತೆಗೆ ಪ್ರತಿ 10-12 ಮತಗಟ್ಟೆಗಳಿಗೆ ಒಂದು ಸೆಕ್ಟರ್ ನಿರ್ಮಿಸಿದ್ದು, ಪ್ರತಿಯೊಂದು ಸೆಕ್ಟರ್‌ಗೆ ಒಬ್ಬರು ಅಧಿಕಾರಿಯನ್ನು ನೇಮಿಸಿ ಮ್ಯಾಜಿಸ್ಟ್ರೇಟ್ ಅಧಿಕಾರ ನೀಡಲಾಗುವುದು. ಅವರೊಂದಿಗೆ ಪೊಲೀಸ್ ಅಧಿಕಾರಿಗಳು ಇರಲಿದ್ದು, ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು. ಚುನಾವಣೆಯ ಹಿನ್ನೆಲೆಯಲ್ಲಿ ಮೂರು ಕ್ಷೇತ್ರಗಳಿಗೆ ತಲಾ 18 ವಾಯು ವಿಚಕ್ಷಣ ದಳ, ಸ್ಥಿತ ಕಣ್ಗಾವಲು ತಂಡ ಹಾಗೂ ವೀಡಿಯೋ ಕಣ್ಗಾವಲು ತಂಡಗಳನ್ನು ನೇಮಿಸಲಾಗಿದೆ. ಜತೆಗೆ ಆರು ವಿವಿಟಿ ತಂಡಗಳನ್ನು ರಚಿಸಿದ್ದು, ಒಟ್ಟು 410 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

 ಗೈರು ಮತದಾರರ ಪರಿಶೀಲನೆ: ಈಗಾಗಲೇ ಮತದಾರರ ಪಟ್ಟಿ ಪರಿಷ್ಕರಣೆ ಆರಂಭವಾಗಿದ್ದು, ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಮೃತಪಟ್ಟಿರುವ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಿದ್ದಾರೆ. ಅದರಂತೆ ಚುನಾವಣೆಗೆ ಮೊದಲು ಮತ್ತೊಮ್ಮೆ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ಮತದಾರರ ಮಾಹಿತಿ ಕಲೆಹಾಕಲಿದ್ದು, ಮೃತಪಟ್ಟ ಮತದಾರರ ಹೆಸರಿನ ಮುಂದೆ ‘ಡಿ’ ಎಂದು, ಸ್ಥಳಾಂತರಗೊಂಡಿದ್ದರೆ ‘ಎಸ್’ ಹಾಗೂ ಮತದಾನದಲ್ಲಿ ಹಲವು ಬಾರಿ ಗೈರಾಗಿದ್ದರೆ ‘ಎ’ ಎಂದು ಬರೆಯಲಿದ್ದಾರೆ.

 ಅದನ್ನು ಆಧಾರಿಸಿ ಮತ ದಾನ ಸಂದರ್ಭದಲ್ಲಿ ಈ ಸಂಕೇತವಿರುವ ಮತದಾರರನ್ನು ಚುನಾವಣಾಧಿಕಾರಿಗಳು ಎರಡೆರಡು ಬಾರಿ ಪರಿಶೀಲಿಸುತ್ತಾರೆ ಎಂದು ಹೇಳಿದರು. 51 ಸಾವಿರ ಸಿಬ್ಬಂದಿ ನಿಯೋಜನೆ: ಮೇಲ್ಕಂಡ ೩ ಕ್ಷೇತ್ರಗಳಲ್ಲಿ ಚುನಾವಣೆಗೆ ಒಟ್ಟು 51 ಸಾವಿರ ಸಿಬ್ಬಂದಿ ನೇಮಿಸಿಕೊಂಡಿದ್ದು, ಈಗಾಗಲೇ ಅವರಿಗೆ ತರಬೇತಿ ನೀಡುವ ಕಾರ್ಯ ಆರಂಭಿಸಲಾಗಿದೆ. ಕಳೆದ ಬಾರಿ ವಿವಿಪ್ಯಾಟ್ ಯಂತ್ರ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ವೀಕ್ಷಿಸಲು ಹೆಚ್ಚುವರಿಯಾಗಿ ಒಬ್ಬರು ಸಿಬ್ಬಂದಿ ನೇಮಿಸಿದ್ದರಿಂದ ಒಟ್ಟು 65 ಸಾವಿರ ಸಿಬ್ಬಂದಿ ನೇಮಿಸಿಕೊಳ್ಳಲಾಗಿತ್ತು. ಆದರೆ, ಈ ಬಾರಿ ಮತಗಟ್ಟೆ ಚುನಾವಣಾಧಿಕಾರಿಯೇ ಅದರ ಉಸ್ತುವಾರಿ ವಹಿಸಿಕೊಳ್ಳಬೇಕಿರುವುದರಿಂದ ಸಿಬ್ಬಂದಿ ಕಡಿಮೆಯಾಗಿದೆ. ಮತ ಯಂತ್ರ(ಇವಿಎಂ) ಹಾಗೂ ವಿವಿಪ್ಯಾಟ್‌ಗಳ ಪ್ರಾತ್ಯಕ್ಷಿಕೆಯನ್ನು ನಗರದ ಪ್ರಮುಖ ಉದ್ಯಾನಗಳು, ಮಾಲ್‌ಗಳು ಹಾಗೂ ಕಾಲೇಜುಗಳಲ್ಲಿ ಏರ್ಪಡಿಸಲಾಗುವುದು ಎಂದು ತಿಳಿಸಿದೆ.