Asianet Suvarna News Asianet Suvarna News

ರಾತ್ರಿ ವಾಟ್ಸಪ್ ಮೂಲಕ ಮತದಾರರ ನಿದ್ದೆ ಕಸಿಯುವಂತಿಲ್ಲ: ಚುನಾವಣಾ ಆಯೋಗ!

ಸಾಮಾಜಿಕ ಮಾಧ್ಯಮಗಳ ಮೂಲಕ ಮತದಾನಕ್ಕೆ ಆಗ್ರಹ! ಅಭ್ಯರ್ಥಿಗಳಿಗೆ ಹಲವು ಷರತ್ತುಗಳನ್ನು ವಿಧಿಸಿದ ಚುನಾವಣಾ ಆಯೋಗ! ರಾತ್ರಿ ವೇಳೆ ವಾಟ್ಸಪ್, ಫೊನ್ ಕಾಲ್ ಮಾಡಿ ಪೀಡಿಸುವಂತಿಲ್ಲ ಅಭ್ಯರ್ಥಿಗಳು! ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಕಿರಿಕಿರಿ ಮಾಡುವಂತಿಲ್ಲ! ಮಾಧ್ಯಮಗಳಿಗೂ ಕೆಲವು ಮಾರ್ಗಸೂಚಿ ಪಾಲನೆಗೆ ಆಯೋಗದ ಆದೇಶ

 

Election Commission tells candidates not to call or whatsapp at night
Author
Bengaluru, First Published Oct 12, 2018, 2:39 PM IST | Last Updated Oct 12, 2018, 2:39 PM IST

ನವದೆಹಲಿ(ಅ.12): ಸಾಮಾಜಿಕ ಮಾಧ್ಯಮಗಳ ಮೂಲಕ ರಾಜಕೀಯ ಮುಖಂಡರು ಮತ್ತು ಪಕ್ಷಗಳು ಮತದಾರರನ್ನು ತಲುಪುವ ಪ್ರಯತ್ನಕ್ಕೆ ಚುನಾವಣಾ ಆಯೋಗ ಬ್ರೇಕ್ ಹಾಕಿದೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ರಾಜಕೀಯ ಸಂದೇಶಗಳು ಜನರ ಖಾಸಗಿತನಕ್ಕೆ ತೊಂದರೆಯಾಗಬಾರದು ಎಂದು ಆಯೋಗ ಎಚ್ಚರಿಕೆ ನೀಡಿದೆ.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವವರೆಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಯಾವುದೇ ರಾಜಕೀಯ ಪಕ್ಷಗಳಾಗಲಿ, ಅಭ್ಯರ್ಥಿಗಳಾಗಲಿ ಮತದಾರರಿಗೆ ಕರೆ ಮಾಡುವುದು, ಸಂದೇಶ ಕಳುಹಿಸುವುದು, ವಾಟ್ಸಾಪ್ ಮಾಡುವುದು ಇತ್ಯಾದಿಗಳನ್ನು ಮಾಡಬಾರದು ಎಂದು ಸ್ಪಷ್ಟ ಸೂಚನೆ ನೀಡಿದೆ.

ನಾಗರಿಕರ ಖಾಸಗಿತನವನ್ನು ಗೌರವಿಸಿ ಅವರ ಜೀವನಕ್ಕೆ ತೊಂದರೆ ನೀಡಬಾರದು ಎಂದು ಚುನಾವಣಾ ಆಯೋಗ ತಿಳಿಸಿದೆ. ಮತದಾರರ ಮನೆ ಮನೆಗೆ ತೆರಳುವುದು ಮತ್ತು ಧ್ವನಿವರ್ಧಕಗಳ ಬಳಕೆಯನ್ನು ಕೂಡ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಬಳಸುವುದಕ್ಕೆ ಆಯೋಗ ನಿಷೇಧ ಹೇರಿದೆ.

ಸುದ್ದಿ ಮಾಧ್ಯಮಗಳು ರಾಜಕೀಯ ನಾಯಕರ ರೊಚ್ಚಿನ ಭಾಷಣಗಳನ್ನು ಅಥವಾ ಇತರ ಜಿಗುಪ್ಸೆ ಹುಟ್ಟಿಸುವ ರಾಜಕೀಯ ನಾಯಕರ ಮಾತುಗಳನ್ನು ಬಿತ್ತರಿಸಬಾರದು, ಇದರಿಂದ ಸಮಾಜದಲ್ಲಿ ಹಿಂಸೆ ಉಂಟಾಗಿ ಸಾರ್ವಜನಿಕರ ಶಾಂತಿಯುತ ಜೀವನಕ್ಕ ಧಕ್ಕೆಯುಂಟಾಗಬಹುದು, ಗಲಾಟೆ ಏಳುವ ಸಾಧ್ಯತೆಯಿದೆ ಎಂದು ಆಯೋಗ ಎಚ್ಚರಿಕೆ ನೀಡಿದೆ.

ಜನರಲ್ಲಿ ದ್ವೇಷ, ಶತ್ರುಭಾವನೆ ಹುಟ್ಟಿಸುವ ಭಾಷಣಗಳನ್ನು ಸುದ್ದಿ ಮಾಧ್ಯಮಗಳು ಕಡ್ಡಾಯವಾಗಿ ಪ್ರಸಾರ ಮಾಡಬಾರದು, ಜಾತಿ, ಧರ್ಮ, ಪಂಥ, ಸಮುದಾಯ, ನಿರ್ದಿಷ್ಟ ಜನಾಂಗ, ಭಾಷೆಗಳ ಆಧಾರದ ಮೇಲೆ ಚುನಾವಣಾ ಪ್ರಕ್ರಿಯೆ ಸಂದರ್ಭದಲ್ಲಿ ಜನರ ಭಾವನೆಗಳನ್ನು ಪ್ರಚೋದಿಸುವ ಸುದ್ದಿಗಳನ್ನು ಕಡ್ಡಾಯವಾಗಿ ಪ್ರಸಾರ ಮಾಡದಂತೆ ಆಯೋಗ ಸುದ್ದಿ ಮಾಧ್ಯಮಗಳಿಗೆ ತಾಕೀತು ಮಾಡಿದೆ.

ಇದೇ ವೇಳೆ ಚುನಾವಣೋತ್ತರ ಫಲಿತಾಂಶಗಳು, ವಿಶ್ಲೇಷಣೆಗಳು, ಚರ್ಚೆಗಳು, ದೃಶ್ಯಗಳು ಮತ್ತು ಯಾರದ್ದಾದರೂ ಅಭಿಪ್ರಾಯಗಳು ಆಯೋಗ ಹೊರಡಿಸಿದ ಮಾರ್ಗಸೂಚಿಯ ಒಳಗೆಯೇ ಇರಬೇಕು ಎಂದು ಸ್ಪಷ್ಟವಾಗಿ ಹೇಳಿದೆ.

Latest Videos
Follow Us:
Download App:
  • android
  • ios