Asianet Suvarna News Asianet Suvarna News

ಮತದಾರರ ಪಟ್ಟಿಗೆ ಹೆಸರು ಸೇರಿಸಲು ವಿಶೇಷ ಕ್ಯಾಂಪ್

ಮತದಾನದ ಪ್ರಮಾಣ ಹೆಚ್ಚಿಸಲು 23, 24, ಮಾ. 3,4ರಂದು ವಿಶೇಷ ಕ್ಯಾಂಪ್‌ | ಈ ಜ.1ಕ್ಕೆ 18 ವರ್ಷ ತುಂಬಿದ ಯುವಜನರಿಗೆ ಹೆಸರು ನೋಂದಣಿಗೆ ಅವಕಾಶ |  ಮತದಾರರ ಪಟ್ಟಿಯಲ್ಲಿನ ತಪ್ಪು ಸರಿಪಡಿಸಿಕೊಳ್ಳಲೂ ಅವಕಾಶ: ಮುಖ್ಯ ಚುನಾವಣಾಧಿಕಾರಿ

Election Commission special camps Feb 23,24 for enrollment of voters
Author
Bengaluru, First Published Feb 22, 2019, 11:56 AM IST

ಬೆಂಗಳೂರು (ಫೆ. 22):  ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಮತದಾರರ ಪಟ್ಟಿಗೆ ಹೆಸರು ನೋಂದಣಿಗಾಗಿ ಚುನಾವಣಾ ಆಯೋಗ ಇದೇ ತಿಂಗಳ 23, 24 ಮತ್ತು ಮಾ.3,4 ರಂದು ಮಿಂಚಿನ ನೋಂದಣಿ ವಿಶೇಷ ಕ್ಯಾಂಪ್‌ ಆಯೋಜಿಸಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದ್ದಾರೆ.

2019 ರ ಜ.1ಕ್ಕೆ 18 ವರ್ಷ ತುಂಬಿದ ಯುವಕ, ಯುವತಿಯರು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಕಾರ್ಯ ನಡೆಯುತ್ತಿದ್ದು, ಖಾಸಗಿ ಕಂಪನಿ ಸೇರಿ ಹಲವು ಸಂಸ್ಥೆಗಳಿಗೆ ಶನಿವಾರ ಮತ್ತು ಭಾನುವಾರ ರಜೆ ಇರುವ ಕಾರಣ ಫೆ.23, 24ರಂದು ಮಿಂಚಿನ ನೋಂದಣಿ ಹೆಸರಲ್ಲಿ ವಿಶೇಷ ಕ್ಯಾಂಪ್‌ ಆಯೋಜಿಸಲಾಗಿದೆ. ಅಲ್ಲದೆ, ಮಾ.3, 4ರಂದು ಸಹ ಮತ್ತೊಮ್ಮೆ ವಿಶೇಷ ಕ್ಯಾಂಪ್‌ಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ತಪ್ಪು ಸರಿಪಡಿಸಿಕೊಳ್ಳಲೂ ಅವಕಾಶ:

ಕೇವಲ ಹೆಸರು ನೋಂದಣಿ ಮಾತ್ರವಲ್ಲದೆ, ಮತದಾರರ ಪಟ್ಟಿಯಲ್ಲಿನ ಸಣ್ಣಪುಟ್ಟತಪ್ಪುಗಳನ್ನು ಸಹ ಸರಿಪಡಿಸಿಕೊಳ್ಳಬಹುದು. ರಾಜ್ಯದಲ್ಲಿ 58 ಸಾವಿರ ಬೂತ್‌ಗಳನ್ನು ನಿರ್ಮಿಸಲಾಗಿದೆ. ಪ್ರತಿ ಮತದಾನ ಕೇಂದ್ರದಲ್ಲಿ ಬೂತ್‌ಮಟ್ಟದ ಅಧಿಕಾರಿಗಳು ಅಂತಿಮ ಮತದಾರರ ಪಟ್ಟಿಗಳೊಂದಿಗೆ ಹಾಜರಿರುವರು.

ಮತದಾನ ಕೇಂದ್ರಗಳಿಗೆ ಸಾರ್ವಜನಿಕರು ಭೇಟಿ ನೀಡಿ ಮತದಾರರ ಪಟ್ಟಿಯಲ್ಲಿ ಹೆಸರಿರುವ ಬಗ್ಗೆ ಪರಿಶೀಲನೆ ನಡೆಸಿಕೊಳ್ಳಬೇಕು. ಚುನನಾವಣಾ ದಿನಾಂಕದಂದು ಪರದಾಟ ನಡೆಸುವುದಕ್ಕಿಂತ ಈಗಲೇ ಸರಿಪಡಿಸಿಕೊಳ್ಳುವುದು ಉತ್ತಮ. ಹೆಸರು ಹುಟ್ಟಿದ ದಿನಾಂಕ, ಭಾವಚಿತ್ರಗಳಲ್ಲಿ ತಪ್ಪುಗಳಿದ್ದರೆ ಅವುಗಳನ್ನು ಸರಿಪಡಿಸಿಕೊಳ್ಳಬೇಕು ಎಂದರು.

ಪಕ್ಷಗಳ ಏಜೆಂಟರ ಉಪಸ್ಥಿತಿ:

ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ವಿಶೇಷ ಕ್ಯಾಂಪ್‌ಗಳ ದಿನದಂದು ಬೂತ್‌ ಮಟ್ಟದ ಏಜೆಂಟರುಗಳನ್ನು ಕ್ಯಾಂಪ್‌ಗಳಿಗೆ ನಿಯೋಜಿಸುವ ಬಗ್ಗೆ ಕೋರಲಾಗಿದೆ. ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ಬೂತ್‌ ಮಟ್ಟದ ಏಜೆಂಟರು ಬೂತ್‌ ಮಟ್ಟದ ಅಧಿಕಾರಿಗಳೊಂದಿಗೆ ಮತಗಟ್ಟೆಯಲ್ಲಿ ಇದ್ದು ಸಹಕರಿಸಬೇಕು.

ರಾಜಕೀಯ ಪಕ್ಷಗಳು 26432 ಬೂತ್‌ ಮಟ್ಟದ ಏಜೆಂಟರನ್ನು ನಿಯೋಜಿಸಿದ್ದಾರೆ. ಈ ಪೈಕಿ ಕಾಂಗ್ರೆಸ್‌ 9497, ಬಿಜೆಪಿ 14060 ಮತ್ತು ಜೆಡಿಎಸ್‌ 1038 ಮತ್ತು ಬಿಎಸ್‌ಪಿ 958 ಏಜೆಂಟ್‌ಗಳನ್ನು ನಿಯೋಜಿಸಿದೆ ಎಂದು ವಿವರಿಸಿದರು.

ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲಿಸಲು ಮತದಾರರು ನಮ್ಮ ಅಂತರ್ಜಾಲಕ್ಕೆ ಈವರೆಗೆ 7.45 ಲಕ್ಷ ಜನ ಭೇಟಿ ನೀಡಿದ್ದಾರೆ. ಬಿಬಿಎಂಪಿ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಆಯೋಗದ ಅಂತರ್ಜಾಲಕ್ಕೆ ಭೇಟಿ ನೀಡಿದ್ದಾರೆ. ಗ್ರಾಮೀಣ ಮತದಾರರ ಪ್ರಯೋಜನಕ್ಕಾಗಿ ಮತದಾರ ವಿವರಗಳ ಪರಿಶೀಲನೆ ಮತ್ತು ಮಾಹಿತಿ ಕೇಂದ್ರಗಳನ್ನು ಎಲ್ಲಾ ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿದೆ ಎಂದರು.

ಮತದಾರರ ಸಹಾಯವಾಣಿ

ಮತದಾರರ ಅನುಕೂಲಕ್ಕಾಗಿ ಚುನಾವಣಾ ಆಯೋಗ ರಾಜ್ಯ ಮತ್ತು ಜಿಲ್ಲಾ ಮತದಾರ ಸಹಾಯವಾಣಿ ಆರಂಭಿಸಿದ್ದು, ಮತದಾರರು ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆಗಳಿದ್ದರೆ ಪರಿಹರಿಸಿಕೊಳ್ಳಬಹುದು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಹೇಳಿದ್ದಾರೆ.

ರಾಜ್ಯ ಮತದಾರರ ಸಹಾಯವಾಣಿ ಸಂಖ್ಯೆ1800-4255-1950, ಜಿಲ್ಲಾ ಮತದಾರರ ಸಹಾಯವಾಣಿ ಸಂಖ್ಯೆ 1950 (ಜಿಲ್ಲೆಯ ಒಳಗಿನಿಂದ ಮಾಡುವ ಕರೆಗಳಿಗೆ) ಮತ್ತು ಎಸ್‌ಟಿಡಿ ಹಾಗೂ 1950 (ಜಿಲ್ಲೆ ಹೊರಗಿನಿಂದ ಕರೆ ಮಾಡುವ ಕರೆಗಳಿಗೆ) ಆಗಿದೆ. ಬೆಳಗ್ಗೆ 9ರಿಂದ ರಾತ್ರಿ 9ರ ವರೆಗೆ ಎಲ್ಲಾ ದಿನಗಳಂದು ಮತದಾರರ ಸಹಾಯವಾಣಿ 
ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿ ಯಾವುದೇ ರೀತಿಯ ಮಾಹಿತಿಗಾಗಿ ಸಲಹೆ-ಸೂಚನೆಗಳನ್ನು ನೀಡಲು ಮತ್ತು ದೂರುಗಳನ್ನು ಸಲ್ಲಿಸಲು ಸಂಬಂಧಿಸಿದ ಸಹಾಯವಾಣಿ ಸಂಪರ್ಕಿಸಬಹುದು ಎಂದರು.

5.03 ಕೋಟಿ ಮತದಾರರು

ಜ.16ರಂದು ಪ್ರಕಟಿಸಲಾದ ಅಂತಿಮ ಮತದಾರರ ಪಟ್ಟಿಯ ಪ್ರಕಾರ ರಾಜ್ಯದಲ್ಲಿ 5.03 ಕೋಟಿ ಮತದಾರರಿದ್ದು, ಈ ಪೈಕಿ 2.54 ಕೋಟಿ ಪುರುಷ, 2.48 ಕೋಟಿ ಮಹಿಳಾ ಮತ್ತು 28996 ಇತರೆ ಮತದಾರರಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದ್ದಾರೆ.

ಒಟ್ಟಾರೆ 18-19 ವರ್ಷದೊಳಗಿನ ಮತದಾರರ ಸಂಖ್ಯೆ 7.21 ಲಕ್ಷವಿದೆ. ಸೇವಾ ಮತದಾರರಿಗೆ ಸಂಬಂಧಿಸಿ ಅಂತಿಮ ಮತದಾರರ ಪಟ್ಟಿಯನ್ನು ಶುಕ್ರವಾರದಂದು ಪ್ರಕಟಿಸಲಾಗುವುದು. ಈವರೆಗೆ 39,351 ಸೇವಾ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. ಮತದಾರರ ಪಟ್ಟಿಗಳ ಪರಿಷ್ಕರಣೆಗಾಗಿ ತಪ್ಪುಗಳನ್ನು ಸರಿಪಡಿಸಿಕೊಳ್ಳಲು 17.45 ಲಕ್ಷ ಅರ್ಜಿಗಳು ಸ್ವೀಕೃತವಾಗಿವೆ.

ಇದರಲ್ಲಿ ಸೇರ್ಪಡೆಗಾಗಿ 754829 ಅರ್ಜಿಗಳು ಬಂದಿದ್ದು, 721653 ಅರ್ಜಿಗಳು ಅಂಗೀಕೃತಗೊಂಡಿವೆ. ಹೆಸರು ತೆಗೆದು ಹಾಕಲು 759277 ಅರ್ಜಿಗಳು ಸ್ವೀಕೃತಿಯಾಗಿದ್ದು, 752901 ಅರ್ಜಿಗಳನ್ನು ಅಂಗೀಕರಿಸಲಾಗಿದೆ. ತಿದ್ದುಪಡಿಗಾಗಿ 231376 ಸ್ವೀಕೃತಗೊಂಡಿದ್ದು, 225306 ಅಂಗೀಕರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮತದಾರರ ಪಟ್ಟಿಯಲ್ಲಿ ನೋಂದಾಯಿಸದ ಒಟ್ಟು 6.35 ಲಕ್ಷ ಅರ್ಹ ಮತದಾರರನ್ನು ನೊಂದಾಯಿಸಿಕೊಳ್ಳಲಾಗಿದೆ. ಸದ್ಯಕ್ಕೆ ಮತದಾರರ ಪಟ್ಟಿಯಲ್ಲಿ 7.12 ಲಕ್ಷ ಯುವ ಮತದಾರರಿದ್ದಾರೆ. 7.52 ಲಕ್ಷ ಮತದಾರರನ್ನು ಕೈ ಬಿಡಲಾಗಿದ್ದು, ಇದರಲ್ಲಿ 4.72 ಲಕ್ಷ ಸ್ಥಳಾಂತರಗೊಂಡಿದ್ದು, 1.95 ಲಕ್ಷ ಮೃತ ಹೊಂದಿದ್ದಾರೆ.

80010 ಪುನಾರವರ್ತನೆಗೊಂಡ ಮತದಾರರನ್ನು ಗುರುತಿಸಿ ಕೈ ಬಿಡಲಾಗಿದೆ. 3.82 ಲಕ್ಷ ವಿಕಲಚೇತನ ಮತದಾರರನ್ನು ನೋಂದಾಯಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ಫೆ.20 ರವರೆಗೆ ಹಂಚಿಕೆ ಮಾಡಲು 9,31,484 ಹೊಸ ಎಪಿಕ್‌ ಕಾರ್ಡ್‌ಗಳನ್ನು ಸಿದ್ಧಪಡಿಸಲಾಗಿದೆ. ಜ.25ರಂದು ರಾಷ್ಟ್ರೀಯ ಮತದಾರರ ದಿನಾಚರಣೆಯಂದು 6,97,184 ಕಾರ್ಡ್‌ಗಳನ್ನು ಹಂಚಲಾಗಿದೆ. ಉಳಿದ ಕಾರ್ಡ್‌ಗಳನ್ನು ಮಿಂಚಿನ ನೋಂದಣಿ ನಡೆಯುವ ವಿಶೇಷ ಕ್ಯಾಂಪ್‌ಗಳಲ್ಲಿ ವಿತರಿಸಲಾಗುವುದು ಎಂದು ಹೇಳಿದರು.

Follow Us:
Download App:
  • android
  • ios