ನ.8ರಂದು ಪ್ರಧಾನಿ ನರೇಂದ್ರ ಮೋದಿ ರೂ. 500, 1 ಸಾವಿರ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವ ಘೋಷಣೆ ಮಾಡುವ 2 ತಿಂಗಳ ಮುಂಚೆಯೇ ಸರ್ಕಾರ ಆಯೋಗದ ಪ್ರಸ್ತಾಪಕ್ಕೆ ತಿರಸ್ಕಾರ ಸೂಚಿಸಿತ್ತು.

ನವದೆಹಲಿ(ನ.21): ಯಾವುದೇ ನಿಗದಿತ ಕ್ಷೇತ್ರದಲ್ಲಿ ಮತದಾರರಿಗೆ ಹಣ ಹಂಚುವ ಬಗ್ಗೆ ಪ್ರಬಲ ಸಾಕ್ಷ್ಯಾಧಾರ ಸಿಕ್ಕಲ್ಲಿ ಅಲ್ಲಿಯ ಚುನಾವಣೆ ರದ್ದು ಮಾಡಬೇಕು. ಇಂಥ ಕ್ರಮ ಕೈಗೊಳ್ಳಲು ಕಾನೂನಿನ ಅನ್ವಯ ಶಾಶ್ವತ ಸ್ಥಾನಮಾನ ನೀಡಬೇಕೆಂದು ಕೇಂದ್ರ ಚುನಾವಣಾ ಆಯೋಗ ಸಲ್ಲಿಸಿದ್ದ ಪ್ರಸ್ತಾಪವನ್ನು ಕೇಂದ್ರ ಕಾನೂನು ಸಚಿವಾಲಯ ತಿರಸ್ಕರಿಸಿದೆ.

ಈ ಬಗ್ಗೆ ಜೂ.6ರಂದು ಆಯೋಗ ಕೇಂದ್ರಕ್ಕೆ ಪತ್ರ ಬರೆದು, ಇಂಥ ಕ್ರಮಕ್ಕಾಗಿ 1951ರ ಜನ ಪ್ರತಿನಿಧಿ ಕಾಯ್ದೆಯ ಸೆಕ್ಷನ್ 58ಎಗೆ ತಿದ್ದುಪಡಿ ತರಬೇಕೆಂದು ಸಲಹೆ ಮಾಡಿತ್ತು. ಆದರೆ ಸೆ.26ರಂದು ಕೇಂದ್ರ ಸರ್ಕಾರ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ಮತಗಟ್ಟೆ ವಶ ಮತ್ತು ಹಣ ಹಂಚುವಿಕೆಯನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ ಎಂದು ‘ದ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ನ.8ರಂದು ಪ್ರಧಾನಿ ನರೇಂದ್ರ ಮೋದಿ ರೂ. 500, 1 ಸಾವಿರ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವ ಘೋಷಣೆ ಮಾಡುವ 2 ತಿಂಗಳ ಮುಂಚೆಯೇ ಸರ್ಕಾರ ಆಯೋಗದ ಪ್ರಸ್ತಾಪಕ್ಕೆ ತಿರಸ್ಕಾರ ಸೂಚಿಸಿತ್ತು.

‘‘ಮತದಾರರಿಗೆ ಹಣ ಹಂಚುವ ಮತ್ತು ಮತಗಟ್ಟೆ ವಶಪಡಿಸಿಕೊಳ್ಳುವುದನ್ನು ಹೋಲಿಕೆ ಮಾಡಲಾಗದು. ಹಣ ಹಂಚುವ ಆರೋಪಗಳ ಬಗ್ಗೆ ತನಿಖೆ ನಡೆಸಿ ಸಾಬೀತು ಮಾಡಬೇಕಾಗುತ್ತದೆ. ಈ ಹಿಂದೆಯೂ ಕೂಡ ಆಯೋಗ ಇಂಥ ಪ್ರಕರಣಗಳನ್ನು ಸಂವಿಧಾನದ 324 ವಿ ಪ್ರಕಾರ ನಿಭಾಯಿಸುತ್ತಿತ್ತು. ಹೀಗಾಗಿ, ಹಾಲಿ ಸ್ಥಿತಿಯೇ ಇರಲಿ,’’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಚುನಾವಣಾ ಆಯೋಗ ಈ ಪತ್ರದಿಂದ ತೃಪ್ತಿಗೊಳ್ಳದೆ, ಮತ್ತೊಮ್ಮೆ ಕೇಂದ್ರಕ್ಕೆ ಮನವಿ ಮಾಡಲು ಮುಂದಾಗಿದೆ ಎಂದು ಹೇಳಲಾಗಿದೆ.