ಕಾಂಗ್ರೆಸ್ ನಾಯಕ ಗುಲಾಂ ನಬಿ ನೇತೃತ್ವದ ಪ್ರತಿಪಕ್ಷಗಳ ನಿಯೋಗ ಜ.5ರಂದು ಮುಖ್ಯ ಚುನಾವಣಾ ಆಯುಕ್ತ ನಸೀಂ ಜೈದಿ ಅವರನ್ನು ಭೇಟಿಯಾಗಿ ಕೇಂದ್ರದ ನಿರ್ಧಾರದ ವಿರುದ್ಧ ದೂರು ನೀಡಿದ್ದವು.

ನವದೆಹಲಿ(ಜ.07): ಮುಂದಿನ ತಿಂಗಳ 1ರಂದೇ ಬಜೆಟ್ ಮಂಡಿಸುವುದು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಚುನಾವಣಾ ಆಯೋಗ ಸ್ಪಂದಿಸಿದೆ. ಈ ಬಗ್ಗೆ ಜ.10ರ ಒಳಗಾಗಿ ಉತ್ತರಿಸುವಂತೆ ಕೇಂದ್ರ ಸಂಪುಟ ಕಾರ್ಯದರ್ಶಿ ಪ್ರದೀಪ್ ಕುಮಾರ್ ಸಿನ್ಹಾಗೆ ಆಯೋಗ ಸೂಚಿಸಿದೆ ಎಂದು ‘ದ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಫೆ.1ರಂದು ಬಜೆಟ್ ಮಂಡಿಸುವುದು ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್, ಎಸ್ಪಿ, ಟಿಎಂಸಿ ಸೇರಿದಂತೆ 16 ಪ್ರತಿಪಕ್ಷಗಳು ಮುಖ್ಯ ಚುನಾವಣಾ ಆಯುಕ್ತ, ರಾಷ್ಟ್ರಪತಿಗೆ ಪತ್ರ ಬರೆದು ದೂರು ನೀಡಿದ್ದವು. ಯಾವ ಕಾರಣಕ್ಕಾಗಿ ಮುಂಗಡ ಪತ್ರ ಮಂಡನೆಯನ್ನು ಫೆ.1ರಂದೇ ಮಾಡಬೇಕೆಂದು ನಿರ್ಧರಿಸಲಾಯಿತು ಎಂದು ಪತ್ರದಲ್ಲಿ ಕೇಳಲಾಗಿದೆ.

ಕೇಂದ್ರ ಸಂಪುಟ ಕಾರ್ಯದರ್ಶಿಗೆ ಪ್ರತಿಪಕ್ಷಗಳು ಎತ್ತಿರುವ ಆಕ್ಷೇಪದ ಪತ್ರವನ್ನು ಶುಕ್ರವಾರ ಹಸ್ತಾಂತರಿಸಲಾಗಿದೆ. ಅದನ್ನು ಸ್ಪೀಕರಿಸಿರುವ ಪ್ರದೀಪ್ ಕುಮಾರ್ ಸಿನ್ಹಾ ಸಂಸದೀಯ ವ್ಯವಹಾರಗಳ ಸಚಿವಾಲಯವನ್ನು ಸಂಪರ್ಕಿಸಿ ಉತ್ತರ ನೀಡಲಿದ್ದಾರೆ. ನಿಯಮಾನುಸಾರವೇ ಬಜೆಟ್ ಅನ್ನು ಫೆ.1ರಂದು ಮಂಡಿಸಲು ನಿರ್ಧರಿಸಲಾಗಿದೆ. ಈ ನಿರ್ಧಾರದಲ್ಲಿ ಯಾವುದೇ ಲೋಪ ಉಂಟಾಗಿಲ್ಲ ಎಂಬ ಅಂಶವನ್ನೇ ಚುನಾವಣಾ ಆಯೋಗಕ್ಕೆ ನೀಡುವ ಉತ್ತರದಲ್ಲಿ ಪ್ರಸ್ತಾಪಿಸುವ ಸಾಧ್ಯತೆಗಳೇ ಇವೆ.

ಕಾಂಗ್ರೆಸ್ ನಾಯಕ ಗುಲಾಂ ನಬಿ ನೇತೃತ್ವದ ಪ್ರತಿಪಕ್ಷಗಳ ನಿಯೋಗ ಜ.5ರಂದು ಮುಖ್ಯ ಚುನಾವಣಾ ಆಯುಕ್ತ ನಸೀಂ ಜೈದಿ ಅವರನ್ನು ಭೇಟಿಯಾಗಿ ಕೇಂದ್ರದ ನಿರ್ಧಾರದ ವಿರುದ್ಧ ದೂರು ನೀಡಿದ್ದವು.