ಚುನಾವಣಾ ಆಯೋಗವು ಇದೀಗ ರಾಜಕೀಯ ಪಕ್ಷಗಳಿಗೆ ಬಿಗ್ ಬ್ರೇಕ್ ಹಾಕಲು ಪ್ಲಾನ್ ಮಾಡುತ್ತಿದೆ. ಹೆಚ್ಚು ವೆಚ್ಚಕ್ಕೆ ಕಡಿವಾಣ ಹಾಕಲು ಮಹತ್ವದ ಹೆಜ್ಜೆ ಇಡುತ್ತಿದೆ.
ನವದೆಹಲಿ: ಚುನಾವಣೆಗಳ ಸಂದರ್ಭದಲ್ಲಿ ಹಣದ ಹೊಳೆಯನ್ನೇ ಹರಿಸುವ ರಾಜಕೀಯ ಪಕ್ಷಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರೀಯ ಚುನಾವಣಾ ಆಯೋಗ ಮಹತ್ವದ ಹೆಜ್ಜೆ ಇಟ್ಟಿದೆ. 2019ರ ಲೋಕಸಭೆ ಚುನಾವಣೆಗೂ ಮುನ್ನ ಚುನಾವಣಾ ಸುಧಾರಣೆಯೊಂದನ್ನು ಜಾರಿಗೆ ತರಲು ತುದಿಗಾಲಿನಲ್ಲಿ ನಿಂತಿರುವ ಆಯೋಗ, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಗೆ ವೆಚ್ಚ ಮಿತಿ ಹೇರುವ ಸಂಬಂಧ ಪ್ರಸ್ತಾವವೊಂದನ್ನು ಸಿದ್ಧಪಡಿಸಿದೆ.
ಆ.27ರಂದು ಚುನಾವಣಾ ಆಯೋಗ ರಾಜಕೀಯ ಪಕ್ಷಗಳ ಸಭೆಯನ್ನು ಆಯೋಜಿಸಿದ್ದು, ಅಲ್ಲಿ ಈ ವಿಚಾರ ಚರ್ಚೆಗೆ ಬರಲಿದೆ. ಚುನಾವಣೆಗಳ ಸಂದರ್ಭದಲ್ಲಿ ಪ್ರತಿ ಅಭ್ಯರ್ಥಿಗೂ ವೆಚ್ಚ ಮಿತಿ ಇರುತ್ತದೆ. ಸ್ಪರ್ಧಿಸುವ ಅಭ್ಯರ್ಥಿಗಳ ಸಂಖ್ಯೆಯನ್ನು ಅವರ ವೆಚ್ಚ ಮಿತಿ ಜತೆ ಗುಣಿಸಿ ಅದರಿಂದ ಬರುವ ಮೊತ್ತವನ್ನು ರಾಜಕೀಯ ಪಕ್ಷಗಳು ಮಾಡಬಹುದಾದ ಗರಿಷ್ಠ ವೆಚ್ಚವೆಂದು ನಿಗದಿಪಡಿಸಬೇಕು ಎಂಬುದು ಆಯೋಗದ ಬಯಕೆ. ಇದಕ್ಕೆ ಅಭ್ಯರ್ಥಿ ವೆಚ್ಚದ ಅರ್ಧ ಅಥವಾ ಪೂರ್ಣ ಮೊತ್ತವನ್ನು ಬೇಕಾದರೂ ಪರಿಗಣಿಸಬಹುದು ಎಂದು ಹೇಳಿದೆ.
ಈ ಸಂಬಂಧ ಕಾನೂನು ಸಚಿವಾಲಯಕ್ಕೆ ಚುನಾವಣಾ ಆಯೋಗ ಸಲಹೆ ಮಾಡಿದ್ದು, 1961ರ ಚುನಾವಣೆ ಆಯೋಜನೆ ನಿಯಮಗಳ ಪೈಕಿ ನಿಯಮ 90 ಹಾಗೂ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಪ್ರಬಲವಾಗಿ ವಾದ ಮಂಡಿಸಿದೆ.
ಚುನಾವಣೆಗಳಲ್ಲಿ ಅಭ್ಯರ್ಥಿಗಳಿಗೆ ವೆಚ್ಚ ಮಿತಿ ಇದೆಯಾದರೂ, ಅವರನ್ನು ಕಣಕ್ಕೆ ಇಳಿಸುವ ಅಭ್ಯರ್ಥಿಗಳು ಹಣದ ಹೊಳೆ ಹರಿಸುತ್ತಿವೆ. ಚುನಾವಣಾ ಆಯೋಗದ ಈ ಪ್ರಸ್ತಾವ ಜಾರಿಗೆ ಬಂದರೆ ಅದಕ್ಕೆಲ್ಲಾ ಕಡಿವಾಣ ಬೀಳುವ ನಿರೀಕ್ಷೆ ಇದೆ.
