ಕುಡಿವ ನೀರಿಗೂ ತಟ್ಟಿದೆ ಚುನಾವಣಾ ನೀತಿ ಸಂಹಿತೆ ಬಿಸಿ

First Published 8, Apr 2018, 11:19 AM IST
Election Code Of Cunduct
Highlights

ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಚಿಕ್ಕಬಳ್ಳಾಪುರ ನಗರದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಚುನಾವಣಾ ದಿನಾಂಕ ಪ್ರಕಟವಾಗುತ್ತಿದ್ದಂತೆ ಇಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಬೀಗ ಜಡಿಯಲಾಗಿದೆ. ಶಾಸಕರ ಭಾವಚಿತ್ರಗಳಿವೆ ಎನ್ನುವ ಕಾರಣಕ್ಕೆ ಚುನಾವಣಾ ಆಯೋಗದ ಈ ಕ್ರಮ ಸಮರ್ಥನೀಯವಾಗಿದ್ದರೂ ಶುದ್ಧಕುಡಿಯುವ ನೀರಿಗೆ ಪರ್ಯಾಯ ಮೂಲವಿಲ್ಲದೆ ಜಿಲ್ಲೆಯ ಜನ ಪರದಾಡುವಂತಾಗಿದೆ.

ಬೆಂಗಳೂರು : ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಚಿಕ್ಕಬಳ್ಳಾಪುರ ನಗರದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಚುನಾವಣಾ ದಿನಾಂಕ ಪ್ರಕಟವಾಗುತ್ತಿದ್ದಂತೆ ಇಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಬೀಗ ಜಡಿಯಲಾಗಿದೆ. ಶಾಸಕರ ಭಾವಚಿತ್ರಗಳಿವೆ ಎನ್ನುವ ಕಾರಣಕ್ಕೆ ಚುನಾವಣಾ ಆಯೋಗದ ಈ ಕ್ರಮ ಸಮರ್ಥನೀಯವಾಗಿದ್ದರೂ ಶುದ್ಧಕುಡಿಯುವ ನೀರಿಗೆ ಪರ್ಯಾಯ ಮೂಲವಿಲ್ಲದೆ ಜಿಲ್ಲೆಯ ಜನ ಪರದಾಡುವಂತಾಗಿದೆ.

ಬೇಕಿದ್ದರೆ ಶಾಸಕರ ಭಾವಚಿತ್ರವನ್ನಷ್ಟೇ ಮುಚ್ಚಿ, ಶುದ್ಧ ಕುಡಿಯುವ ನೀರು ಪೂರೈಕೆ ನಿಲ್ಲಿಸಬೇಡಿ ಎಂದು ಒತ್ತಾಯಿಸುತ್ತಿದ್ದಾರೆ. ಹೇಳಿ ಕೇಳಿ ಚಿಕ್ಕಬಳ್ಳಾಪುರ ಬರದ ನಾಡೆಂದೇ ಪ್ರಸಿದ್ಧಿ. ಮಳೆಯ ಕೊರತೆಯಿಂದ ಅತಿಯಾಗಿ ಕೊಳವೆ ಬಾವಿಗಳನ್ನು ಕೊರೆದ ಪರಿಣಾಮ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. 1,500 ಅಡಿ ಆಳಕ್ಕೆ ಕೊರೆದರೂ ಇಲ್ಲಿ ನೀರು ಸಿಗುವುದು ಕಷ್ಟ. ಒಂದು ವೇಳೆ ಸಿಕ್ಕರೂ ಅದು ಕ್ಲೋರಿನ್, ಫ್ಲೋರೈಡ್ ಸೇರಿದಂತೆ ಹಲವು ವಿಷಯುಕ್ತ ಲವಣಾಂಶಗಳು ಈ ನೀರಿನಲ್ಲಿ ಅಪಾಯದ ಮಟ್ಟಕ್ಕಿಂತ ಹೆಚ್ಚೇ ಇವೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಪ್ರತಿ ಹಳ್ಳಿಯಲ್ಲೂ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಿದೆ. ಆದರೆ ಸರ್ಕಾರದಿಂದ ಸ್ಥಾಪಿಸಲಾದ ಶುದ್ಧ ನೀರಿನ ಘಟಕಗಳು ಕೇವಲ ಗ್ರಾಮೀಣ ಪ್ರದೇಶಕ್ಕೆ ಮಾತ್ರ ಸೀಮಿತ ಎಂಬ ಆರೋಪಕ್ಕೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಖಾಸಗಿ ಟ್ರಸ್ಟ್‌ವೊಂದರ ಮೂಲಕ ನಗರದ ವಿವಿಧ ವಾರ್ಡ್‌ಗಳಲ್ಲೂ ಶುದ್ಧ ನೀರಿನ ಘಟಕಗಳನ್ನು ಆರಂಭಿಸಲಾಗಿತ್ತು. ನಗರದ ಜನರಿಗೂ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿತ್ತು.

ಆದರೆ, ಶಾಸಕರೊಬ್ಬರ ಭಾವಚಿತ್ರ ಇರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಈಗ ನಿಯಮದಂತೆ ಈ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಬೀಗಜಡಿದಿದ್ದಾರೆ. ಚುನಾವಣಾ ಆಯೋಗವೇನೋ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತವಾಗಿ ಈ ಕ್ರಮ ಕೈಗೊಂಡಿದೆ. ಆಯೋಗದ ಈ ಕ್ರಮ ಸ್ತುತ್ಯರ್ಹವಾಗಿದ್ದರೂ ನಗರದ ನಾನಾ ವಾರ್ಡುಗಳ ಜನ ಶುದ್ಧ ಕುಡಿಯುವ ನೀರಿಗೆ ಪರ‌್ಯಾಯ ವ್ಯವಸ್ಥೆ ಇಲ್ಲದೆ ಕಂಗಾಲಾಗಿದ್ದಾರೆ. ಮತ್ತೆ ಫ್ಲೋರೈಡ್ ಯುಕ್ತ ನೀರನ್ನೇ ಕುಡಿದು ಅನಾರೋಗ್ಯಕ್ಕೆ ತುತ್ತಾಗಬೇಕಾದ ಪರಿಸ್ಥಿತಿಗೆ ಸಿಲುಕಿದ್ದಾರೆ.

loader