ನವದೆಹಲಿ[ಜು.22]: ಲೋಕಸಭೆ ಚುನಾವಣೆಯಲ್ಲಿನ ಹೀನಾಯ ಸೋಲಿಗೆ ವಿದ್ಯುನ್ಮಾನ ಮತಯಂತ್ರಗಳೇ ಕಾರಣ ಎಂಬ ತೀರ್ಮಾನಕ್ಕೆ ಬಂದಿರುವ ಕಾಂಗ್ರೆಸ್‌, ಈ ಸಂಬಂಧ ವಿಪಕ್ಷಗಳ ಜತೆಗೂಡಿ ಹೋರಾಟ ನಡೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುತ್ತಿದೆ. ಸಂಸತ್ತಿನ ಬಜೆಟ್‌ ಅಧಿವೇಶನ ಮುಗಿಯುತ್ತಿದ್ದಂತೆ ವಿಪಕ್ಷಗಳ ಸಭೆಯೊಂದನ್ನು ಆಯೋಜಿಸುವ ನಿರೀಕ್ಷೆ ಇದೆ.

ವಿದ್ಯುನ್ಮಾನ ಮತಯಂತ್ರಗಳ ಬದಲಿಗೆ ಈ ಹಿಂದೆ ಇದ್ದಂತೆ ಬ್ಯಾಲಟ್‌ ಪೇಪರ್‌ ವ್ಯವಸ್ಥೆ ಜಾರಿಗೆ ತರಬೇಕು ಎಂಬ ಬೇಡಿಕೆಯನ್ನು ದೊಡ್ಡದಾಗಿ ಮಂಡಿಸುವಂತೆ ಕಾಂಗ್ರೆಸ್ಸಿನ ಕೆಲ ನಾಯಕರ ಗುಂಪು ಈಗಾಗಲೇ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅಧ್ಯಕ್ಷ ಸ್ಥಾನ ತ್ಯಜಿಸಿರುವ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ಮನವಿ ಇಟ್ಟಿದೆ. ತಳಮಟ್ಟದಿಂದ ಸಂಗ್ರಹಿಸಿರುವ ಅಭಿಪ್ರಾಯದ ಆಧಾರದಲ್ಲಿ ಮತಯಂತ್ರಗಳನ್ನು ತಿರುಚಬಹುದಾಗಿದೆ ಎಂಬ ನಿಲುವಿಗೆ ಕಾಂಗ್ರೆಸ್‌ ಬಂದಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ದೈನಿಕವೊಂದು ವರದಿ ಮಾಡಿದೆ.

ಬ್ಯಾಲಟ್‌ ಪೇಪರ್‌ ವ್ಯವಸ್ಥೆಯನ್ನು ಮರುಜಾರಿಗೆ ತರಬೇಕೆಂಬ ವಿವಿಧ ಪಕ್ಷಗಳ ಬೇಡಿಕೆಯನ್ನು ಈಗಾಗಲೇ ಚುನಾವಣಾ ಆಯೋಗ ತಳ್ಳಿ ಹಾಕಿದೆ. ಮತ್ತೆ ಆ ಬೇಡಿಕೆಯನ್ನು ತಿರಸ್ಕರಿಸಿದರೆ ಮಹಾರಾಷ್ಟ್ರ, ಜಾರ್ಖಂಡ್‌ ಹಾಗೂ ಹರಾರ‍ಯಣ ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸಬೇಕು ಎಂಬ ಪ್ರಚಂಡ ಒತ್ತಡ ಕಾಂಗ್ರೆಸ್ಸಿನೊಳಗೆ ಇದೆ. ಆದರೆ ಅಂತಹ ತೀರ್ಮಾನ ತೆಗೆದುಕೊಳ್ಳುವ ಮುನ್ನ ಇತರೆ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪಕ್ಷ ಉದ್ದೇಶಿಸಿದೆ. ಪ್ರತಿಪಕ್ಷಗಳನ್ನೆಲ್ಲಾ ಒಗ್ಗೂಡಿಸಿ ಆಯೋಗದ ಮೇಲೆ ಒತ್ತಡ ಹೇರುವ ನಿಲುವಿಗೆ ಬಂದಿದೆ ಎಂದು ನಾಯಕರನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.