ಕುಮಾರ್ ಬಂಗಾರಪ್ಪನವರು ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಆಗಮಿಸಿದ್ದಾರೆ. ಬಂಗಾರಪ್ಪನವರ ಪುತ್ರರಾದ ಕುಮಾರ್ ಬಂಗಾರಪ್ಪ ಕೂಡ ಸೊರಬ ಕ್ಷೇತ್ರದವರೇ. ಈಗ ಸೊರಬ ಕ್ಷೇತ್ರಕ್ಕೆ ಇಬ್ಬರು ಪ್ರಬಲ ಬಿಜೆಪಿ ಅಭ್ಯರ್ಥಿಗಳು ಆಕಾಂಕ್ಷಿಗಳಾಗಿದ್ದಾರೆಂದಾಯಿತು. ಈ ವಿಚಾರವೇ ಬಿಜೆಪಿಗೆ ತಲೆನೋವಾಗಿರುವುದು. ಇವರಿಬ್ಬರಲ್ಲಿ ಯಾರಿಗೆ ಸೊರಬ ಕ್ಷೇತ್ರದ ಟಿಕೆಟ್ ಕೊಡುವುದು ಎಂಬ ಸಂದಿಗ್ಧತೆಯಲ್ಲಿ ಬಿಜೆಪಿ ಸಿಲುಕಿದೆ.

ಬೆಂಗಳೂರು(ಆ. 17): ಅತ್ಯಾಚಾರ ಪ್ರಕರಣದಲ್ಲಿ ಹರತಾಳು ಹಾಲಪ್ಪನವರು ಖುಲಾಸೆಯಾಗಿದ್ದಾರೆ. ಪ್ರಕರಣದಲ್ಲಿ ಸರಿಯಾದ ಸಾಕ್ಷ್ಯಾಧಾರವಿಲ್ಲದಿದ್ದರಿಂದ ಶಿವಮೊಗ್ಗ ಜಿಲ್ಲಾ ನ್ಯಾಯಾಲಯವು ಹಾಲಪ್ಪರನ್ನು ಆರೋಪಮುಕ್ತಗೊಳಸಿ ತೀರ್ಪು ನೀಡಿದೆ. ಕೋರ್ಟ್ ತೀರ್ಪು ಬರುತ್ತಿದ್ದಂತೆಯೇ ಹಾಲಪ್ಪನವರು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರಿಗೆ ಫೋನ್ ಮಾಡಿ ಮೊದಲು ವಿಷಯ ತಿಳಿಸಿದ್ದಾರೆ. ತಮ್ಮ ನಾಯಕರೊಬ್ಬರು ಕಳಂಕದಿಂದ ಮುಕ್ತರಾದರೆ ಯಾವುದೇ ಪಕ್ಷಕ್ಕಾದರೂ ರಿಲೀಫ್ ಆಗಲೇಬೇಕು. ಆದರೆ, ಬಿಜೆಪಿಯ ಮುಖಂಡರಿಗೆ ಸಣ್ಣದೊಂದು ತಲೆನೋವು ಶುರುವಾಗಿದೆ. ಅದಕ್ಕೆ ಕಾರಣ ‘ಸೊರಬ’ ಕ್ಷೇತ್ರ.

ಹರತಾಳು ಹಾಲಪ್ಪನವರು ಸೊರಬ ಕ್ಷೇತ್ರದವರೇ. ದಿವಂಗತ ಬಂಗಾರಪ್ಪನವರ ಗರಡಿಯಲ್ಲಿ ಪಳಗಿದವರೇ. ಸೊರಬ ಕ್ಷೇತ್ರದಲ್ಲಿ ಸಾಕಷ್ಟು ಜನಬೆಂಬಲ ಹೊಂದಿದವರು. ಈ ಪ್ರಕರಣ ನಡೆದ ಬಳಿಕ ಹಾಲಪ್ಪನವರ ರಾಜಕೀಯ ಜೀವನ ಸಹಜವಾಗಿಯೇ ಕುಂಠಿತವಾಯಿತು. ಏಳು ವರ್ಷಗಳ ಬಳಿಕ ಅವರು ಪುಟಿದೆದ್ದಿದ್ದಾರೆ.

ಇದೇ ವೇಳೆ, ಕುಮಾರ್ ಬಂಗಾರಪ್ಪನವರು ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಆಗಮಿಸಿದ್ದಾರೆ. ಬಂಗಾರಪ್ಪನವರ ಪುತ್ರರಾದ ಕುಮಾರ್ ಬಂಗಾರಪ್ಪ ಕೂಡ ಸೊರಬ ಕ್ಷೇತ್ರದವರೇ. ಈಗ ಸೊರಬ ಕ್ಷೇತ್ರಕ್ಕೆ ಇಬ್ಬರು ಪ್ರಬಲ ಬಿಜೆಪಿ ಅಭ್ಯರ್ಥಿಗಳು ಆಕಾಂಕ್ಷಿಗಳಾಗಿದ್ದಾರೆಂದಾಯಿತು. ಈ ವಿಚಾರವೇ ಬಿಜೆಪಿಗೆ ತಲೆನೋವಾಗಿರುವುದು. ಇವರಿಬ್ಬರಲ್ಲಿ ಯಾರಿಗೆ ಸೊರಬ ಕ್ಷೇತ್ರದ ಟಿಕೆಟ್ ಕೊಡುವುದು ಎಂಬ ಸಂದಿಗ್ಧತೆಯಲ್ಲಿ ಬಿಜೆಪಿ ಸಿಲುಕಿದೆ.

ಹಾಲಪ್ಪ ಕೇಸ್’ನಲ್ಲಿ ಕೋರ್ಟ್ ತೀರ್ಪು ಬಂದ ಬಳಿಕ ಸುವರ್ಣನ್ಯೂಸ್ ಜೊತೆ ಮಾತನಾಡಿದ ಕುಮಾರ್ ಬಂಗಾರಪ್ಪ, ತಾವು ಸೊರಬ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂಬುದನ್ನು ಒಪ್ಪಿಕೊಂಡರು. ಒಬ್ಬ ರಾಜಕೀಯ ವ್ಯಕ್ತಿಯಾಗಿ ತಾನು ಸಹಜವಾಗಿಯೇ ಟಿಕೆಟ್ ಅಕಾಂಕ್ಷಿಯಾಗಿದ್ದೇನೆ. ಆದರೆ, ಯಾರಿಗೆ ಟಿಕೆಟ್ ಕೊಡಬೇಕೆಂಬುದನ್ನು ಪಕ್ಷದ ಹಿರಿಯರು ನಿರ್ಧರಿಸುತ್ತಾರೆ. ತಾನು ಆ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ ಎಂದು ಕುಮಾರ್ ಬಂಗಾರಪ್ಪ ಹೇಳಿದರು.