ಪಾವಗಡ [ಸೆ.20]:  ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಗ್ರಾಮವಾಸ್ತವ್ಯದ ಮಾದರಿಯಲ್ಲೇ, ಸರ್ಕಾರಿ ಶಾಲೆಗಳಲ್ಲಿನ ವಾಸ್ತವ ಪರಿಸ್ಥಿತಿ ಅರಿಯಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶಕುಮಾರ್‌ ಪ್ರಾರಂಭಿಸಲುದ್ದೇಶಿಸಿರುವ ಶಾಲಾ ವಾಸ್ತವ್ಯಕ್ಕೆ ಗುರುವಾರ ಚಾಲನೆ ದೊರೆತಿದೆ. ತುಮಕೂರು ಜಿಲ್ಲೆಯ ಗಡಿನಾಡು ಪಾವಗಡ ತಾಲೂಕಿನ ಎನ್‌.ಅಚ್ಮಮ್ಮನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಚಿವರು ಪ್ರಥಮ ಬಾರಿಗೆ ಶಾಲಾ ವಾಸ್ತವ್ಯ ಮಾಡಿದರು.

ಬುಧವಾರವಷ್ಟೇ ಶಾಲಾ ವಾಸ್ತವ್ಯದ ಬಗ್ಗೆ ಮಾಹಿತಿ ನೀಡಿದ್ದ ಸಚಿವ ಸುರೇಶ್‌ ಕುಮಾರ್‌ ಅವರು ಗುರುವಾರ ರಾತ್ರಿ 7.30ಕ್ಕೆ ಗ್ರಾಮಕ್ಕೆ ಆಗಮಿಸಿದರು. ಈ ವೇಳೆ ಅವರನ್ನು ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಪೂರ್ಣಕುಂಭದ ಮೂಲಕ ಸ್ವಾಗತಿಸಿದರು. ಬಳಿಕ ಶಾಲಾ ವಠಾರದಲ್ಲಿ ಹಮ್ಮಿಕೊಂಡಿದ್ದ ವೇದಿಕೆಯಲ್ಲಿ ಶಾಲಾ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿದ ಸಚಿವರು ನೇರವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ತಿರುಮಣಿ, ವಳ್ಳೂರು, ವೆಂಕಟಮ್ಮನಹಳ್ಳಿ, ರಾಯಚರ್ಲು ಮುಂತಾದ ಗ್ರಾಮಗಳ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಆಗಮಿಸಿ ಸಚಿವರ ಬಳಿ ತಮ್ಮ ಅಹವಾಲು ಹೇಳಿಕೊಂಡರು. ಈ ವೇಳೆ ಹಳ್ಳಿಗಳಲ್ಲಿನ ಶಿಕ್ಷಕರ ಸಮಸ್ಯೆ, ಹಾಸ್ಟೆಲ್‌ ಅಗತ್ಯತೆಗಳಿಂದ ಹಿಡಿದು ಆಂಗ್ಲ ಮಾಧ್ಯಮದಿಂದಾಗಿ ಭವಿಷ್ಯದಲ್ಲಿ ಕನ್ನಡ ಭಾಷೆ ಮೇಲೆ ಉಂಟಾಗಬಲ್ಲ ಪರಿಣಾಮದಂತಹ ಗಂಭೀರ ವಿಚಾರಗಳ ಬಗ್ಗೆಯೂ ಸಚಿವರೆಡೆಗೆ ಪ್ರಶ್ನೆಗಳು ತೂರಿ ಬಂದವು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹಳ್ಳಿಗಳಲ್ಲಿ ಸಾರಿಗೆ ಸಮಸ್ಯೆ:  ಸಚಿವರೊಂದಿಗಿನ ಸಂವಾದದ ವೇಳೆ ಕೆಲ ವಿದ್ಯಾರ್ಥಿಗಳು ರಸ್ತೆ ಹಾಗೂ ಸಾರಿಗೆ ವ್ಯವಸ್ಥೆ ಇಲ್ಲದೆ 4-5 ಕಿ.ಮೀ. ದೂರದಲ್ಲಿರುವ ಶಾಲೆಗಳಿಗೆ ಬರಲು ಕಷ್ಟವಾಗುತ್ತಿದೆ ಎಂದು ತಮ್ಮ ಅಹವಾಲು ಹೇಳಿಕೊಂಡರು. ಗಡಿಪ್ರದೇಶ ಅಚ್ಚಮ್ಮನಹಳ್ಳಿ ಶಾಲೆಯಲ್ಲಿರುವ ಶಿಕ್ಷಕರ ಕೊರತೆ ಬಗ್ಗೆಯೂ ಮಕ್ಕಳು ಸಚಿವರ ಗಮನ ಸೆಳೆದರು. ಮತ್ತೂ ಕೆಲ ಮಕ್ಕಳಂತೂ ರಸ್ತೆ ಹಾಗೂ ಸಾರಿಗೆ ಇಲ್ಲದೆ ಶಾಲೆಗೆ ಹೋಗಲು ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡರು.

ವಿದ್ಯಾರ್ಥಿನಿ ನಿಲಯಕ್ಕೆ ಬೇಡಿಕೆ:  7ನೇ ತರಗತಿಯ ಪವನ್‌ ಕುಮಾರ್‌ ಎಂಬ ವಿದ್ಯಾರ್ಥಿ 2019ನೇ ಸಾಲಿನಿಂದ ಕೆಲವು ಶಾಲೆಗಳಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಪ್ರಾರಂಭವಾಗಿದ್ದು ಅಂತಹ ಶಾಲೆಗಳಲ್ಲಿ ಕನ್ನಡ ಮಾಧ್ಯಮಕ್ಕೆ ವಿದ್ಯಾರ್ಥಿಗಳು ದಾಖಲಾಗದಿದ್ದರೆ ಕನ್ನಡ ಮಾಧ್ಯಮ ಮತ್ತು ಕನ್ನಡ ಭಾಷೆಯ ಗತಿ ಏನು ಎಂದು ಪ್ರಶ್ನಿಸಿದ. ಹಾಗೆಯೇ ನಮ್ಮ ಊರಿನಲ್ಲಿ ಬಾಲಕರ ವಿದ್ಯಾರ್ಥಿ ನಿಲಯ ಮಾತ್ರವಿದೆ. ಬಾಲಕಿಯರ ವಿದ್ಯಾರ್ಥಿನಿಲಯ ಇಲ್ಲ. ಬಾಲಕಿಯರ ವಿದ್ಯಾರ್ಥಿನಿಲಯವಿದ್ದಲ್ಲಿ ದೂರ ದೂರುಗಳಿಂದ ನಮ್ಮ ಶಾಲೆಗೆ ಬರುವ ವಿದ್ಯಾರ್ಥನಿಯರಿಗೆ ಅನುಕೂಲವಾಗುತ್ತದೆ. ಆದ್ದರಿಂದ ಬಾಲಕಿಯರ ವಿದ್ಯಾರ್ಥಿ ನಿಲಯವನ್ನು ನಮ್ಮೂರಿಗೆ ಮಂಜೂರು ಮಾಡಿಸಿಕೊಡುವಿರಾ ಎಂದು ಪ್ರಶ್ನೆ ಮಾಡಿದರು.

ಹಿಂದಿ ಶಿಕ್ಷಕರಿಲ್ಲ:  ಮತ್ತೆ ಕೆಲವರು 6ನೇ ತರಗತಿಯಿಂದ ಹಿಂದಿ ವಿಷಯ ಕಡ್ಡಾಯವಾಗಿದ್ದು ಕೆಲವು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇದುವರೆಗೂ ಹಿಂದಿ ವಿಷಯ ಶಿಕ್ಷಕರ ನೇಮಕವಾಗಿಲ್ಲ. ಈ ಶಾಲೆಗಳಲ್ಲಿ ಹಿಂದಿ ವಿಷಯವನ್ನು ಯಾರು ಬೋಧಿಸಬೇಕು ಎಂದು ಸಚಿವರಿಗೆ ಪ್ರಶ್ನೆಗಳ ಸುರಿಮಳೆ ಮಾಡಿದರು. ಇನ್ನು ಕೆಲ ವಿದ್ಯಾರ್ಥಿಗಳಂತೂ ಸಚಿವರಿಗೆ ನಿಮ್ಮ ಇಷ್ಟವಾದ ಶಿಕ್ಷಕರು ಯಾರು? ಏಕೆ ಎಂದು ಪ್ರಶ್ನೆ ಮಾಡಿದರು. ಹಾಗೆಯೇ ಸಹಪಠ್ಯ ಚಟುವಟಿಕೆಯಲ್ಲಿ ನಿಮಗಿಷ್ಟವಾದ ಚಟುವಟಿಕೆ ಯಾವುದು ಎಂದು ಪ್ರಶ್ನಿಸಿದರೆ ನೀವು ಯಾವ ರೀತಿಯ ವ್ಯಕ್ತಿಗಳಿಂದ ಪ್ರಭಾವಿತರಾಗಿದ್ದೀರಾ ಎಂದು ಪ್ರಶ್ನೆ ಮಾಡಿದರು.

ವಿದ್ಯಾರ್ಥಿಗಳ ಪ್ರಶ್ನೆಗೆ ಶಿಕ್ಷಕರು, ಪೋಷಕರು ಚಪ್ಪಾಳೆ ತಟ್ಟಿದರೆ, ಸಚಿವರು ಮಂದಸ್ಮಿತರಾದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಿದ್ಯಾರ್ಥಿಗಳ ಪ್ರಶ್ನೆಗಳನ್ನು ಆಲಿಸಿ ಅವರ ಸಮಸ್ಯೆಗಳನ್ನು ನೀಗಿಸುವ ಭರವಸೆಯನ್ನು ಸಚಿವರು ನೀಡಿದರು. ಬಳಿಕ ಭೋಜನ ಸ್ವೀಕರಿಸಿದ ಸಚಿವರು ತಡರಾತ್ರಿ ಶಾಲೆಯಲ್ಲಿ ನಿದ್ರಿಸಿದರು.