ಅಭ್ಯರ್ಥಿಗೆ ವಿದ್ಯಾರ್ಹತೆ ಇಲ್ಲದಿದ್ದರೂ, ಕೊಟ್ಟ ಮಾಹಿತಿ ಸರಿ ಇರಬೇಕು ಎನ್ನುತ್ತಿದೆ ಕೋರ್ಟ್ ಆದೇಶ
ನವದೆಹಲಿ: ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು, ತಾವು ಸಲ್ಲಿಸುವ ನಾಮಪತ್ರದಲ್ಲಿ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಸತ್ಯಾಂಶವನ್ನು ಉಲ್ಲೇಖಿಸಬೇಕೆಂಬುದು ನಿಯಮ. ಅದರಲ್ಲೇನಾದರೂ ತಪ್ಪು ಕಂಡು ಬಂದರೆ, ಅವರ ಸ್ಥಾನವೇ ರದ್ದಾಗುವ ಸಾಧ್ಯತೆಗಳಿವೆ. ಹೌದು. ಮಣಿಪುರದ ಕಾಂಗ್ರೆಸ್ ಶಾಸಕ ತಾವು ಸಲ್ಲಿಸಿದ್ದ ನಾಮಪತ್ರದಲ್ಲಿ ವಿದ್ರ್ಯಾಹತೆಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿದ್ದರಿಂದ ಅವರು ಸ್ಥಾನವನ್ನೇ ಕಳೆದುಕೊಳ್ಳುವಂತಾಗಿದೆ.
ಮಣಿಪುರದ ಕಾಂಗ್ರೆಸ್ ಶಾಸಕ ಮರೆಂಬಾಮ್ ಪೃಥ್ವಿರಾಜ್ ತಮ್ಮ ನಾಮಪತ್ರದಲ್ಲಿ ವಿದ್ಯಾರ್ಹತೆ ಎಂಬಿಎ ಎಂದು ಉಲ್ಲೇಖಿಸಿದ್ದರು. 2004ರಲ್ಲಿ ಮೈಸೂರು ವಿವಿಯಿಂದ ಪದವಿ ಪಡೆದಿದ್ದೆ ಎಂದು ಹೇಳಿಕೊಂಡಿದ್ದರು. ಆದರೆ, ಅದು ಸುಳ್ಳು ಎಂದು ಹೇಳಲಾಯಿತು.ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಅವರ ಸ್ಥಾನಕ್ಕೆ ಕುತ್ತು ಎದುರಾಗಿತ್ತು. ಹೀಗಾಗಿ ಕೋರ್ಟ್ ಮೊರೆ ಹೋಗಿದ್ದ ಶಾಸಕ ‘‘ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಪರ ವಕೀಲ ಮತ್ತು ಏಜೆಂಟ್‌ನಿಂದಾಗಿ ಮಾಹಿತಿಯಲ್ಲಿ ತಪ್ಪಾಗಿದೆ ಹೀಗಾಗಿ ತಮ್ಮ ಆಯ್ಕೆ ರದ್ದು ಮಾಡಬಾರದು,'' ಎಂದು ಕೋರಿದ್ದರು.
ಇತ್ತೀಚೆಗೆ ಕೇಳಿಬಂದ ಎರಡು ನಕಲಿ ಅಂಕಪಟ್ಟಿ ವಿವಾದ
1) ಆಪ್ ಶಾಸಕ ಸುರೇಂದರ್: ದೆಹಲಿ ಕಂಟೋನ್ಮೆಂಟ್ ಕ್ಷೇತ್ರದ ಆಪ್ ಶಾಸಕ ಸುರೇಂದರ್ ಸಿಂಗ್ ವಿರುದ್ಧ ಕೂಡ ನಕಲಿ ಪದವಿ ಪಡೆದ ಆರೋಪ ಕೇಳಿ ಬಂದಿದೆ. ಹರ್ಯಾಣದಲ್ಲಿ ಸರ್ಕಾರಿ ಉದ್ಯೋಗ ಪಡೆದುಕೊಳ್ಳಲು 2012ರಲ್ಲಿ ನಕಲಿ ಅಂಕಪಟ್ಟಿನೀಡಿದ್ದಾರೆ ಎಂದು ಬಿಜೆಪಿ ನಾಯಕ ಕರಣ್ ಸಿಂಗ್ ತನ್ವರ್ ಎಂಬುವರು ಜಜ್ಝರ್ ಠಾಣೆಯಲ್ಲಿ ಆ.2ರಂದು ದೂರು ನೀಡಿದ್ದರು.
2) ಕೇಂದ್ರ ಸಚಿವೆ ಸ್ಮೃತಿ: ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ನಕಲಿ ಪದವಿ ಪ್ರಮಾಣ ಪತ್ರ ನೀಡಿದ ಆರೋಪ ಎದುರಿಸುತ್ತಿದ್ದಾರೆ. 2004 ಮತ್ತು 2014ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವೇಳೆ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ನಕಲಿ ಪ್ರಮಾಣ ಪತ್ರವನ್ನು ನಾಮಪತ್ರ ಜತೆ ನೀಡಿದ್ದರೆಂದು ಆರೋಪಿಸಲಾಗಿತ್ತು. ಪ್ರಕರಣದ ವಿಚಾರಣೆ ಇನ್ನೂ ಮುಗಿದಿಲ್ಲ.
(ಕೃಪೆ: ಕನ್ನಡಪ್ರಭ)
