ಮೂಲಗಳ ಪ್ರಕಾರವಾಗಿ ಸೋಮವಾರ ದೆಹಲಿಯ ಇಡಿ ಅಧಿಕಾರಿಗಳು ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದ್ದು, ಅದೇ ದಿನ ಡಿ.ಕೆ. ಶಿವಕುಮಾರ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ ಎನ್ನಲಾಗಿದೆ. 

ಬೆಂಗಳೂರು :  ದೆಹಲಿ ನಿವಾಸದಲ್ಲಿ ಐದು ಕೋಟಿ ರು. ಹಣ ಪತ್ತೆ ಹಿನ್ನೆಲೆಯಲ್ಲಿ ಡಿ. ಕೆ. ಶಿವಕುಮಾರ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿ, ಅವರನ್ನು ಬಂಧಿಸಲು ಕೇಂದ್ರ ಸರ್ಕಾರದ ಅಧೀನದ ಜಾರಿ ನಿರ್ದೇಶನಾಲಯ (ಇ.ಡಿ.) ಸಜ್ಜಾಗಿದೆ ಎಂಬ ವದಂತಿ ಶನಿವಾರ ದಟ್ಟವಾಗಿದ್ದು, ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿತ್ತು.

‘ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ದೆಹಲಿಯ ಫ್ಲ್ಯಾಟ್‌ವೊಂದರಲ್ಲಿ ಡಿ.ಕೆ. ಶಿವಕುಮಾರ್‌ ಅವರಿಗೆ ಸಂಬಂಧಿಸಿದ ಸುಮಾರು 5 ಕೋಟಿ ರು. ಅಕ್ರಮ ಹಣ ಪತ್ತೆಯಾಗಿತ್ತು. ಈ ಸಂಬಂಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜಾರಿ ನಿರ್ದೇಶನಾಲಯಕ್ಕೆ ದೂರು ವರ್ಗಾಯಿಸಿದ್ದಾರೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಡಿ.ಕೆ. ಶಿವಕುಮಾರ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲು ಸಿದ್ಧತೆ ಮಾಡಿಕೊಂಡಿದ್ದು, ಸದ್ಯದಲ್ಲೇ ಬಂಧನ ಮಾಡಲು ಮುಂದಾಗಲಿದ್ದಾರೆ’ ಎಂಬ ವದಂತಿ ದಟ್ಟವಾಗಿತ್ತು.

‘ಹೀಗಾಗಿಯೇ ಡಿ.ಕೆ. ಶಿವಕುಮಾರ್‌ ಸಹೋದರ ಡಿ.ಕೆ. ಸುರೇಶ್‌ ಅವರು ಶನಿವಾರ ತರಾತುರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳು ಹಾಗೂ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಜಾರಿ ನಿರ್ದೇಶನಾಲಯ ಹಾಗೂ ಐಟಿ ಇಲಾಖೆ ದುರುಪಯೋಗಪಡಿಸಿಕೊಂಡು ಡಿ.ಕೆ. ಶಿವಕುಮಾರ್‌ ಹಾಗೂ ತನ್ನನ್ನು ಬಂಧಿಸಲು ಮುಂದಾಗುತ್ತಿದೆ ಎಂಬ ಬಗ್ಗೆ ಆತಂಕ ವ್ಯಕ್ತಪಡಿಸಿದರು’ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ, ‘ಸೋಮವಾರ ದೆಹಲಿಯ ಇಡಿ ಅಧಿಕಾರಿಗಳು ಬೆಂಗಳೂರಿಗೆ ಬರುವ ಸಾಧ್ಯತೆ ಇದ್ದು, ಅದೇ ದಿನ ಡಿ.ಕೆ. ಶಿವಕುಮಾರ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ.’

ಏನಿದು 5 ಕೋಟಿ ರು. ಪ್ರಕರಣ?:

ಗುಜರಾತ್‌ ರಾಜ್ಯಸಭಾ ಚುನಾವಣೆ ವೇಳೆ ಗುಜರಾತ್‌ನ ಶಾಸಕರನ್ನು ಡಿ.ಕೆ. ಶಿವಕುಮಾರ್‌ ಅವರು ರಾಮನಗರದ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಆತಿಥ್ಯ ಕಲ್ಪಿಸುವ ಮೂಲಕ ಬಿಜೆಪಿಯವರು ಸಂಪರ್ಕ ಸಾಧಿಸಿದಂತೆ ತಡೆದಿದ್ದರು. ಇದೇ ವೇಳೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ರೆಸಾರ್ಟ್‌ನ ಡಿ.ಕೆ. ಶಿವಕುಮಾರ್‌ ಕೊಠಡಿ ಸೇರಿದಂತೆ ವಿವಿದೆಡೆ ದಾಳಿ ನಡೆಸಿದ್ದರು. ಇದರ ಮುಂದುವರೆದ ಭಾಗವೆಂಬಂತೆ ದೆಹಲಿಯಲ್ಲಿ ಮತ್ತೊಮ್ಮೆ ದಾಳಿ ನಡೆಸಿ ಡಿ.ಕೆ. ಶಿವಕುಮಾರ್‌ ಸಂಬಂಧಿಕರಿಂದ ಹಣ ವಶಕ್ಕೆ ಪಡೆದಿದ್ದರು ಎಂದು ಹೇಳಲಾಗಿದೆ.

ಈ ವೇಳೆ ಪತ್ತೆಯಾಗಿದ್ದ 5 ಕೋಟಿ ರು.ಗೆ ಅಗತ್ಯ ಮಾಹಿತಿ ಒದಗಿಸಿಲ್ಲ. ಹೀಗಾಗಿ ಈ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಯು ಜಾರಿ ನಿರ್ದೇಶನಾಲಯಕ್ಕೆ ವರ್ಗಾಯಿಸಿದೆ. ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ಜಾರಿ ನಿರ್ದೇಶನಾಲಯ ಎಫ್‌ಐಆರ್‌ ದಾಖಲಿಸಿ ವಶಕ್ಕೆ ಪಡೆಯಲು ಮುಂದಾಗಿದೆ ಎಂಬ ವದಂತಿ ಹಬ್ಬಿದೆ.

ಜಾರಿ ನಿರ್ದೇಶನಾಲಯವು ನನ್ನ ವಿರುದ್ಧ ಏಕೆ ಎಫ್‌ಐಆರ್‌ ದಾಖಲು ಮಾಡುತ್ತಾರೆ ಎಂಬುದು ಗೊತ್ತಿಲ್ಲ. ತೆರಿಗೆ ಇಲಾಖೆಯಿಂದ ಜಾರಿ ನಿರ್ದೇಶನಾಲಯಕ್ಕೆ ಶಿಫಾರಸು ಮಾಡಿರುವುದಾಗಲಿ ಅಥವಾ ಎಫ್‌ಐಆರ್‌ ದಾಖಲು ಮಾಡುವ ಬಗ್ಗೆಯಾಗಲಿ ಅಧಿಕೃತವಾಗಿ ನನಗೆ ಯಾವ ದಾಖಲೆಗಳು, ಮಾಹಿತಿ ಕೂಡ ಅಧಿಕಾರಿಗಳು ಕೊಟ್ಟಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಎಲ್ಲವನ್ನೂ ಶಾಂತವಾಗಿ ಎದುರಿಸುತ್ತೇನೆ.

- ಡಿ.ಕೆ. ಶಿವಕುಮಾರ್‌, ಜಲಸಂಪನ್ಮೂಲ ಸಚಿವ