ನವದೆಹಲಿ [ಸೆ.12]:  ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ.)ದಿಂದ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಕಳೆದ 8 ದಿನಗಳಿಂದ ವಿಚಾರಣೆ ಎದುರಿಸುತ್ತಿದ್ದು, ಗುರುವಾರದಂದು ಅವರ ಪುತ್ರಿ ಐಶ್ವರ್ಯ ಅವರ ವಿಚಾರಣೆಯೂ ನಡೆಯಲಿದೆ.

ಐಶ್ವರ್ಯ ಅವರ ಹೆಸರಲ್ಲಿ ಒಟ್ಟು .108 ಕೋಟಿ ಮೊತ್ತದ ಆಸ್ತಿ, ವ್ಯವಹಾರಗಳಿದ್ದು ಈ ಬಗ್ಗೆ ಅನುಮಾನ ಹೊಂದಿರುವ ಇ.ಡಿ. ಇವುಗಳ ಮೂಲಗಳ ಬಗ್ಗೆ ವಿಚಾರಣೆ ನಡೆಸಲಿದೆ. ಗುರುವಾರ ಮಧ್ಯಾಹ್ನದ ಬಳಿಕ ಐಶ್ವರ್ಯ ಅವರು ಇ.ಡಿ. ವಿಚಾರಣೆಗೆ ಹಾಜರಾಗಲಿದ್ದಾರೆ. ಇದೇ ಮೊದಲ ಬಾರಿ ಇ.ಡಿ.ವಿಚಾರಣೆಗೆ ಹಾಜರಾಗುತ್ತಿರುವ ಅವರು, ತೃಪ್ತಿಕರ ಉತ್ತರ ನೀಡದೇ ಹೋದರೆ ಇನ್ನೂ ಅನೇಕ ದಿನಗಳ ಕಾಲ ವಿಚಾರಣೆ ಎದುರಿಸಬೇಕಾಗಬಹುದು. ಡಿ.ಕೆ.ಶಿವಕುಮಾರ್‌ ಮತ್ತು ಐಶ್ವರ್ಯ ಅವರನ್ನು ಮುಖಾಮುಖಿಯನ್ನಾಗಿಸಿ ವಿಚಾರಣೆ ನಡೆಸುವ ಸಾಧ್ಯತೆಯೂ ಇದೆ. ಬುಧವಾರ ಬೆಳಗ್ಗೆ 9.30ಕ್ಕೆ ಡಿ.ಕೆ.ಶಿವಕುಮಾರ್‌ ಇ.ಡಿ. ವಿಚಾರಣೆಗೆ ಹಾಜರಾಗಿದ್ದರು. ಇದೇ ವೇಳೆ ಡಿಕೆಶಿ ಆಪ್ತ ಸಚಿನ್‌ ನಾರಾಯಣ್‌ ಅವರ ವಿಚಾರಣೆಯೂ ನಡೆಯಿತು.

ಐಶ್ವರ್ಯ ವಿಶ್ವಾಸದಲ್ಲಿದ್ದಾರೆ:  ಐಶ್ವರ್ಯ ಅವರು ಗುರುವಾರ ಬೆಳಗ್ಗೆ ದೆಹಲಿಗೆ ಬರಲಿದ್ದು ವಿಚಾರಣೆ ಎದುರಿಸಲು ಸಿದ್ಧರಾಗಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ಅವರ ಸಹೋದರ, ಸಂಸದ ಡಿ.ಕೆ.ಸುರೇಶ್‌ ತಿಳಿಸಿದ್ದಾರೆ. ನಾನೇ ವಿಚಾರಣೆ ಎದುರಿಸುತ್ತೇನೆ ಎಂದು ಐಶ್ವರ್ಯ ಹೇಳಿದ್ದಾಳೆ. ಐಶ್ವರ್ಯ ತುಂಬು ವಿಶ್ವಾಸದಲ್ಲಿದ್ದಾರೆ. ಡಿ.ಕೆ.ಶಿವಕುಮಾರ್‌ ಯಾಕೆ ಬರ್ತಿಯಾ ಅಂತ ಕೇಳಿದ್ದರು. ಆದರೆ ನಾನೇ ವಿಚಾರಣೆಗೆ ಬಂದು ಉತ್ತರ ಕೊಡುತ್ತೇನೆ ಎಂದು ಆಕೆ ಹೇಳಿದ್ದಾರೆ. ವಿಚಾರಣೆ ಎದುರಿಸುವ ಧೈರ್ಯ ಅವರಿಗೆ ಇದೆ ಎಂದು ಡಿ.ಕೆ.ಸುರೇಶ್‌ ಹೇಳಿದ್ದಾರೆ.

ಬುಧವಾರ ಸಂಜೆ 6 ಗಂಟೆಗೆ ಡಿ.ಕೆ.ಶಿವಕುಮಾರ್‌ ಅವರನ್ನು ಅವರ ಸೋದರ ಡಿ.ಕೆ.ಸುರೇಶ್‌ ಮತ್ತು ವಕೀಲರು ಭೇಟಿಯಾಗಿ ಮಾತುಕತೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್‌, ಪ್ರತಿಭಟನೆ ಶಾಂತಿಯುತವಾಗಿರಲಿ ಎಂದು ಡಿ.ಕೆ.ಶಿವಕುಮಾರ್‌ ಮನವಿ ಮಾಡಿಕೊಂಡಿದ್ದರು. ಅದರಂತೆ ಶಾಂತಿಯುತ ಪ್ರತಿಭಟನೆ ನಡೆಸಿದ್ದಕ್ಕಾಗಿ ಡಿ.ಕೆ.ಶಿವಕುಮಾರ್‌ ಅವರು ಕಾಂಗ್ರೆಸ್‌ ಕಾರ್ಯಕರ್ತರಿಗೆ, ಒಕ್ಕಲಿಗ ಸಂಘ ಸಂಸ್ಥೆಗಳಿಗೆ, ಜೆಡಿಎಸ್‌ ಕಾರ್ಯಕರ್ತರಿಗೆ, ಡಿ.ಕೆ.ಶಿವಕುಮಾರ್‌ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ನಿರೀಕ್ಷೆಗೂ ಮೀರಿ ಪ್ರತಿಭಟನೆಯಲ್ಲಿ ಜನ ಸೇರಿದ್ದರು. ವೈಯಕ್ತಿಕವಾಗಿ ಹಾಗೂ ನನ್ನ ಕುಟುಂಬದ ಪರವಾಗಿ ಎಲ್ಲರಿಗೂ ಧನ್ಯವಾದ. ಈ ಜನರ ಈ ಬೆಂಬಲ ಡಿ.ಕೆ.ಶಿವಕುಮಾರ್‌ ಅವರ ಆತ್ಮ ವಿಶ್ವಾಸವನ್ನು ಮತ್ತಷ್ಟುಹೆಚ್ಚಿಸಿದೆ ಎಂದು ಸುರೇಶ್‌ ಹೇಳಿದರು.

ಡಿ.ಕೆ.ಶಿವಕುಮಾರ್‌ ಅವರ ತಾಯಿ ಮತ್ತು ಕುಟುಂಬಸ್ಥರ ಹೆಸರಲ್ಲಿ ಇರುವ ಆಸ್ತಿ ಬೇನಾಮಿ ಅಂತಾದರೆ ಇನ್ನುಳಿದ ಮುಖಂಡರ ಕುಟುಂಬಸ್ಥರ ಹೆಸರಲ್ಲೂ ಆಸ್ತಿ ಇದೆ. ಅದನ್ನೂ ಪ್ರಶ್ನಿಸಬೇಕಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಕುಟುಂಬದವರು ಕುಟುಂಬಸ್ಥರಿಗೆ ಸಹಾಯ ಮಾಡುತ್ತಾರೆ. ತಾಯಿ-ಮಗ, ತಂದೆ-ಮಗ, ಅಣ್ಣ-ತಮ್ಮ, ಅಕ್ಕ-ತಂಗಿ ಹೀಗೆ ಅವರ ಆಸ್ತಿಗಳನ್ನು ಪ್ರಶ್ನಿಸತೊಡಗಿದರೆ ಹೇಗೆ? ನಾಳೆ ನಿಮ್ಮ ತಂದೆ-ತಾಯಿಗಳ ಹೆಸರಿನಲ್ಲಿನ ಅಸ್ತಿಯನ್ನು ಪ್ರಶ್ನಿಸಲು ಶುರುಮಾಡುತ್ತಾರೆ. ಇದು ಡಿ.ಕೆ.ಶಿವಕುಮಾರ್‌ ಅವರಿಂದ ಪ್ರಾರಂಭವಾಗಿದೆ ಎಂದು ಡಿ.ಕೆ.ಸುರೇಶ್‌ ಹರಿಹಾಯ್ದರು.

ಡಿ.ಕೆ.ಶಿವಕುಮಾರ್‌ ಅವರ ವ್ಯವಹಾರಗಳು ಪಾರದರ್ಶಕ ಆಗಿದೆ. ಲೋಕಾಯುಕ್ತ ಮತ್ತು ಎಲೆಕ್ಷನ್‌ ಕಮಿಷನ್‌ಗೆ ನಾವು ಕಾಲ ಕಾಲಕ್ಕೆ ನಮ್ಮೆಲ್ಲ ಆಸ್ತಿ ವಿವರ ಕೊಟ್ಟಿದ್ದೇವೆ. ಆದರೆ ಇಡಿ ಕೊಡುತ್ತಿರುವ ಮಾನಸಿಕ ಹಿಂಸೆ ಅನುಭವಿಸಬೇಕಿದೆ. ಬಿಜೆಪಿ ಅವರು ನಮ್ಮನ್ನು ಸೆಳೆಯಲು ಪ್ರಯತ್ನಿಸಿದರೂ ನಾವು ಸ್ಪಂದಿಸದಕ್ಕಾಗಿ ಈ ತೊಂದರೆ ಕೊಡುತ್ತಿದ್ದಾರೆ ಎಂದು ಸುರೇಶ್‌ ಹೇಳಿದರು.

ಟಿವಿ ರಿಪೋರ್ಟರ್‌ ಮಾಲೀಕರಾಗ್ತಾರೆ:  ಏನು ಇಲ್ಲದ ಅಮಿತ್‌ ಶಾರ ಮಗ 1000 ಕೋಟಿ ಒಡೆಯನಾಗುತ್ತಾರೆ. ಅಂಬಾನಿ ಕಂಪನಿಯೂ ಸೇರಿದಂತೆ ಬೇರೆಬೇರೆ ಕಂಪನಿಗಳು 5 ಸಾವಿರ ಕೋಟಿಯಿಂದ ಒಂದೂವರೆ ಲಕ್ಷ ಕೋಟಿ ವ್ಯವಹಾರವನ್ನು ಕೆಲವೇ ವರ್ಷಗಳಲ್ಲಿ ದಾಖಲಿಸುತ್ತದೆ. ಆದರೆ ಇದರ ಬಗ್ಗೆ ಯಾರೂ ಪ್ರಶ್ನೆ ಮಾಡುತ್ತಿಲ್ಲ ಎಂದು ಡಿ.ಕೆ.ಸುರೇಶ್‌ ಆರೋಪಿಸಿದರು.