ಬೆಂಗಳೂರು(ಸೆ.05)  ಮಂಗಳವಾರವೇ ಡಿ.ಕೆ.ಶಿವಕುಮಾರ್ ಅವರ ವಿಚಾರಣ ಮುಗಿದಿದೆ. 15 ನಿಮಿಷದಲ್ಲಿ ಬಿಡುವುದಾಗಿ ಇ.ಡಿ. ಅಧಿಕಾರಿಗಳು ಹೇಳಿದ್ದರು. ಆದರೆ, ಬಿಡಬೇಡಿ ಎಂದು ಯಾರಿಂದ ಫೋನ್ ಹೋಗಿತ್ತೆಂಬುದು ನನಗೆ ಗೊತ್ತು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಮೈತ್ರಿ ಸರ್ಕಾರ ಉರುಳಿಸಲು ಬಿಜೆಪಿ ಮುಖಂಡರು 17 ಶಾಸಕರಿಗೆ 15-20 ಕೋಟಿ ರು. ಆಮಿಷ ಒಡ್ಡಿದ್ದರು. ಅವರು ಸಾವಿರಾರು ಕೋಟಿ ರು.ಗಳನ್ನು ಎಲ್ಲಿಂದ ತಂದಿದ್ದಾರೆ? ಆಟೋದಲ್ಲಿ ಕರೆದುಕೊಂಡು ಹೋದಂತೆ ಶಾಸಕರನ್ನು ವಿಶೇಷ ವಿಮಾನದಲ್ಲಿ ಮುಂಬೈಗೆ ಕರೆದುಕೊಂಡು ಹೋಗುವಾಗ ಐಟಿ, ಇ.ಡಿ. ಇಲಾಖೆ ಸತ್ತು ಹೋಗಿತ್ತೇ? ಅಧಿಕಾರಿಗಳು ಎಲ್ಲಿ ಹೋಗಿದ್ದರು ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ದೇಶದಲ್ಲಿ ಆರ್ಥಿಕ ದಿವಾಳಿ ಮರೆಮಾಚಲು ಡಿಕೆಶಿ ಬಂಧನ'

ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ 2008ರಲ್ಲಿ ಬಿಜೆಪಿ ತನ್ನಸರ್ಕಾರ ಭದ್ರಮಾಡಿಕೊಳ್ಳಲು ಶಾಸಕರಿಗೆ 20ರಿಂದ 30 ಕೋಟಿ ರು. ನೀಡಿದೆ. ಮೈತ್ರಿ ಸರ್ಕಾರ ಉರುಳಿಸಲು ನಮ್ಮ ಪಕ್ಷದ ಶರಣಪಾಟೀಲ್ ಅವರಿಗೆ ಖುದ್ದು ಬಿ.ಎಸ್.ಯಡಿಯೂರಪ್ಪ ಅವರೇ ಈಗ 10 ಕೋಟಿ ರು. ಕೊಡುತ್ತೇವೆ, ಉಳಿದ 10 ಕೋಟಿ ರು.ಗಳನ್ನು ಮುಂಬೈನಲ್ಲಿ ನನ್ನ ಮಗ ಕೊಡುತ್ತಾನೆ ಎಂದು ಆಮಿಷ ಒಡ್ಡಿರುವ ಆಡಿಯೋವನ್ನು ನಾನೇ ಬಿಡುಗಡೆ ಮಾಡಿದ್ದೆ. ಯಾರ ನೇತೃತ್ವದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ? ಈಗಲೂ ಸಹ ನಿಗಮ, ಮಂಡಳಿ ಅಧ್ಯಕ್ಷ ಹುದ್ದೆ ನೀಡುವುದಾಗಿ ಶಾಸಕರ ಜೊತೆ 10-20 ಕೋಟಿ ರು. ವ್ಯವಹಾರ ನಡೆಯುತ್ತಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಐಟಿ ಅಧಿಕಾರಿಗಳಿಗೆ ಏನಾಗಿದೆ? ಅವರನ್ನು ಯಾಕೆ ಸುಮ್ಮನೆ ಬಿಟ್ಟಿದ್ದೀರಿ ಎಂದು ಪ್ರಶ್ನೆಗಳ ಮಳೆಗರೆದರು.

ಶಿವಕುಮಾರ್ ತಪ್ಪು ಮಾಡಿದ್ದರೆ ದಂಡ ವಿಧಿಸಲಿ. ತೆರಿಗೆ ಕಟ್ಟಿಸಿಕೊಳ್ಳಲಿ. ಐಟಿ ಕಾಯ್ದೆ, ಮಾರ್ಗಸೂಚಿ ಪ್ರಕಾರ ನಡೆದುಕೊಳ್ಳಲಿ. ಬಂಧಿಸುವ ಅವಶ್ಯಕತೆ ಇರಲಿಲ್ಲ. ಕೇಂದ್ರ ಸರ್ಕಾರದ ಜೊತೆ ಹೊಂದಾಣಿಕೆ ಮಾಡಿಕೊಂಡವರು ಏನೇ ಮಾಡಿದರೂ ಅವರಿಗೆ ಬೆಂಬಲ ನೀಡುವ ವ್ಯವಸ್ಥೆ ದೇಶದಲ್ಲಿ ಕಂಡುಬರುತ್ತಿದೆ ಎಂದರು.

ಬಿಎಸ್‌ವೈ ಮಹಾರಾಷ್ಟ್ರಕ್ಕೆ ಹೋಗಿದ್ದೇಕೆ: ಜನರು ಸಂಕಷ್ಟದಲ್ಲಿರುವಾಗ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತಿತರರು ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವೀಸ್ ಜೊತೆ ಮಹದಾಯಿ, ಕೃಷ್ಣಾ ನದಿ ನೀರು ಹಂಚಿಕೆ ಬಗ್ಗೆ ಮಾತನಾಡಲು ಹೋಗಿದ್ದರಾ ಅಥವಾ 17 ಶಾಸಕರಿಗೆ ಮುಂಬೈನಲ್ಲಿ ರಕ್ಷಣೆ ನೀಡಿದ್ದಕ್ಕೆ ಥ್ಯಾಂಕ್ಸ್ ಹೇಳಲು ಹೋಗಿದ್ದರಾ? ಎಷ್ಟು ದಿನಗಳ ಕಾಲ ಜನರಿಗೆ ಹೂವು ಮುಡಿಸುತ್ತೀರಾ ಎಂದು ಇದೇ ವೇಳೆ ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಡಿಕೆ ಶಿವಕುಮಾರ್ ಸಮಗ್ರ ಸುದ್ದಿಗಳು