'ದೇಶದಲ್ಲಿ ಆರ್ಥಿಕ ದಿವಾಳಿ ಮರೆಮಾಚಲು ಡಿಕೆಶಿ ಬಂಧನ'
ದೇಶದಲ್ಲಿ ಆರ್ಥಿಕ ದಿವಾಳಿ ಉಂಟಾಗಿದ್ದು, ಇದನ್ನು ಮರೆ ಮಾಚಲು ಡಿ. ಕೆ. ಶಿವಕುಮಾರ್ ಅವರನ್ನು ಬಂಧಿಸಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ರಾಜಕೀಯ ಪ್ರೇರಿತವಾಗಿ ಬಂಧಿಸಿರುವುದನ್ನು ಖಂಡಿಸಿ ಬೃಹತ್ ಪ್ರವಾಸಿ ಮಂದಿರದಿಂದ ಮಹಾತ್ಮಾ ಗಾಂಧಿ ವೃತ್ತದವರೆಗೆ ಪ್ರತಿಭಟನೆ ನಡೆಸಲಾಯಿತು.
ಚಿಕ್ಕಮಗಳೂರು(ಸೆ.05): ಬ್ಲಾಕ್ ಕಾಂಗ್ರೆಸ್ ಸಮಿತಿ, ಯುವ ಕಾಂಗ್ರೆಸ್ ಸಮಿತಿ, ಎನ್‌ಎಸ್‌ಯುಐ ಯುವ ಘಟಕದ ಕಾರ್ಯಕರ್ತರು ಡಿಕೆಶಿ ಪ್ರತಿಭಟನೆಯನ್ನು ವಿರೋಧಿಸಿ ತರೀಕೆರೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಪಟ್ಟಣದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಐಟಿ, ಇಡಿ ಸಂಸ್ಥೆಗಳನ್ನು ದುರುಪಯೋಗಿಸಿಕೊಂಡು, ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ. ಶುದ್ಧಹಸ್ತರಾದ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ರಾಜಕೀಯ ಪ್ರೇರಿತವಾಗಿ ಬಂಧಿಸಿರುವುದನ್ನು ಖಂಡಿಸಿ ಬೃಹತ್ ಪ್ರವಾಸಿ ಮಂದಿರದಿಂದ ಮಹಾತ್ಮಾ ಗಾಂಧಿ ವೃತ್ತದವರೆಗೆ ಪ್ರತಿಭಟನೆ ನಡೆಸಲಾಯಿತು.
ದಿವಾಳಿತನ ಮರೆ ಮಾಚುವುದಕ್ಕೆ ಡಿಕೆಶಿ ಬಂಧನ:
ಸಭೆಯಲ್ಲಿ ಮಾಜಿ ಶಾಸಕ ಜಿ.ಎಚ್. ಶ್ರೀನಿವಾಸ್ ಮಾತನಾಡಿ, ಬಿಜೆಪಿ ಸರ್ಕಾರವು ಸಿಬಿಐ ಇತ್ಯಾದಿ ಸಂಸ್ಥೆಗಳನ್ನು ಏಜೆಂಟರನ್ನಾಗಿ ನಡೆಸಿಕೊಳ್ಳುತ್ತಿದ್ದಾರೆ. ಇದು ನಾಚಿಕೆಗೇಡು, ದೇಶ ದಿವಾಳಿ ಹಂತವನ್ನು ತಲುಪುತ್ತಿದೆ. ಇದನ್ನು ಮರೆಮಾಚುವುದಕ್ಕೋಸ್ಕರ ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಿದ್ದಾರೆ, ಇದು ಖಂಡನೀಯ ಎಂದು ಆರೋಪಿಸಿದರು.
ಕೆಪಿಸಿಸಿ ಸದಸ್ಯರಾದ ಟಿ.ವಿ.ಶಿವಶಂಕರಪ್ಪ ಮಾತನಾಡಿ, ರುಪಾಯಿ ಮೌಲ್ಯ ಕುಸಿದು ದೇಶದ ಅರ್ಥಿಕ, ಸಾಮಾಜಿಕ ಪರಿಸ್ಥಿತಿ ಕುಸಿಯುತ್ತಿದೆ. ಹಬ್ಬದ ದಿನ ಕೂಡ ಡಿ.ಕೆ.ಶಿವಕುಮಾರ್ ಅವರನ್ನು ತನಿಖೆಗೆ ಒಳಪಡಿಸಿದ್ದಾರೆ. ಇದು ಕುತಂತ್ರವಾಗಿದೆ ಎಂದು ತಿಳಿಸಿದರು.
'ಸುಳ್ಳನ್ನು ನಿಜಮಾಡುವುದರಲ್ಲಿ ಬಿಜೆಪಿಯವರು ನಿಸ್ಸೀಮರು'..!
ಮಾಜಿ ಶಾಸಕ ಎಸ್.ಎಂ. ನಾಗರಾಜ್, ಮಾಜಿ ಶಾಸಕ ಟಿ.ಎಚ್.ಶಿವಶಂಕರಪ್ಪ, ಮಾಜಿ ಪುರಸಭಾಧ್ಯಕ್ಷ ಟಿ.ಎನ್. ಗೋಪಿನಾಥ್ ಮಾತನಾಡಿ, ಮಾಜಿ ಪುರಸಭಾಧ್ಯಕ್ಷ ಎಚ್.ಯು. ಫಾರೂಕ್ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಪ್ಪ, ಜಿ.ರಂಗಪ್ಪ, ಜಿ.ಪಂ. ಮಾಜಿ ಅಧ್ಯಕ್ಷ ಕೆ.ಆರ್.ಧ್ರುವಕುಮಾರ್, ಜಿ.ಪಂ. ಸದಸ್ಯರಾದ ಕೆ.ಪಿ. ಕುಮಾರ್, ಮಾಜಿ ಪುರಸಭಾಧ್ಯಕ್ಷರಾದ ಹೇಮಲತಾ ರೇವಣ್ಣ, ಪರ್ವಿನ್ ತಾಜ್, ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್, ಎನ್‌ಎಸ್‌ಯುಐ ಅಧ್ಯಕ್ಷ ಧವನ್ ರಾಜ್ ಇದ್ದರು.