ಬೆಂಗಳೂರು [ಸೆ.05]:  ಜಿಡಿಪಿ, ನಿರುದ್ಯೋಗ ಸಮಸ್ಯೆ ಹಾಗೂ ಡಾಲರ್‌ ಎದುರು ರುಪಾಯಿ ಮೌಲ್ಯ ಕುಸಿತ ಎಲ್ಲವೂ ದೇಶಭಕ್ತಿ ಹೆಸರಿನಲ್ಲಿ ಮರೆಯಾಗುತ್ತಿವೆ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್‌. ರಮೇಶ್‌ಕುಮಾರ್‌ ವಿಷಾದಿಸಿದ್ದಾರೆ.

ಅಖಿಲ ಭಾರತ ವಕೀಲರ ಸಂಘವು ಸೆಂಟ್ರಲ್‌ ಕಾಲೇಜಿನ ಸೆನೆಟ್‌ ಹಾಲ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಭಾರತ ಒಂದು ಒಕ್ಕೂಟ ರಾಷ್ಟ್ರ- ಆಶಯಗಳು ಮತ್ತು ಸವಾಲುಗಳು’ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಇಡೀ ಸಂಸತ್ತಿನಲ್ಲಿ ಅರ್ಥಶಾಸ್ತ್ರವನ್ನು ಸಂಪೂರ್ಣವಾಗಿ ತಿಳಿದವರು ಯಾರೊಬ್ಬರೂ ಇಲ್ಲದಿರುವುದರಿಂದಲೇ ದೇಶ ಈ ಪರಿಸ್ಥಿತಿ ತಲುಪಿದೆ. ಪ್ರಸ್ತುತ ದೇಶ ಮತ್ತು ಜನರಿಗೆ ಯಾವುದು ಪ್ರಾಮುಖ್ಯವೋ ಅವುಗಳಿಗೆ ಆದ್ಯತೆ ನೀಡುತ್ತಿಲ್ಲ. ಬೇಡವಾದ ವಿಷಯಗಳನ್ನು ವಿಜೃಂಭಿಸಿ ಬೇಕಾದ ವಿಚಾರಗಳಿಂದ ಬೇರೆಡೆ ಗಮನ ಸೆಳೆಯಲಾಗುತ್ತಿದೆ ಎಂದರು.

ಜನರನ್ನು ಭಾವನಾತ್ಮಕವಾಗಿ ಗಮನ ಸೆಳೆಯುವುದು ಬಹಳ ಸುಲಭದ ವಿಷಯ. ಆದರೆ, ದೇಶದಲ್ಲಿ ನೋಟುಗಳ ಅಮಾನ್ಯತೆಯಿಂದ ಏನಾಯಿತು ಎಂಬುದಕ್ಕೆ ಉತ್ತರವಿಲ್ಲ. ಹೊಸದಾಗಿ ಯಾವುದೇ ರೈಲ್ವೆ ಯೋಜನೆಗಳು ಜಾರಿಯಾಗಿಲ್ಲ. ಸಾಲದ ನೀತಿಗಳನ್ನು ಕೇಳುವಂತೆಯೇ ಇಲ್ಲ. ಭ್ರಷ್ಟಾಚಾರಕ್ಕೆ ಪ್ರಮುಖವಾಗಿ ಕಾರಣವಾಗುವುದೇ ಚುನಾವಣೆ. ಚುನಾವಣೆ ನೀತಿಗಳಿಗೆ ಸಾಕಷ್ಟುಸುಧಾರಣೆ ತರಬೇಕಿದೆ. ಬಹುಮತ ಹೊಂದಿರುವ ಸರ್ಕಾರವಿದ್ದರೂ ಚುನಾವಣಾ ಸುಧಾರಣೆಗೆ ಮುಂದಾಗುತ್ತಿಲ್ಲ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ರಾಜ್ಯಾಧ್ಯಕ್ಷ ಎಸ್‌. ಶಂಕರಪ್ಪ ಮಾತನಾಡಿ, 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ವಿಧಿಸಲಾಗಿತ್ತು. ನಂತರ 1977ರಲ್ಲಿ ಜನರು ಸರಿಯಾದ ಉತ್ತರ ನೀಡುವ ಮೂಲಕ ಇಂದಿರಾಗಾಂಧಿ ಅವರನ್ನು ಸೋಲಿಸಿದರು. ಪ್ರಸ್ತುತ ಈಗ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರದಿದ್ದರೂ ಅದೇ ರೀತಿಯ ಭಾಸವಾಗುತ್ತಿದೆ. ಕಾಶ್ಮೀರದಲ್ಲಿ ಕಲಂ 370 ರದ್ದುಗೊಳಿಸಿದ ಬಳಿಕ ಶಾಂತಯುತವಾಗಿದೆ ಎಂಬ ವರದಿಗಳು ಬಿತ್ತರವಾಗುತ್ತಿವೆ. ಆದರೆ, ವಾಸ್ತವ ಸ್ಥಿತಿ ತಿಳಿಯುವುದಕ್ಕಾಗಿ ಸ್ಥಳೀಯ ವಕೀಲರೊಬ್ಬರಿಗೆ ಕರೆ ಮಾಡಲು ಕಳೆದ ಒಂದು ವಾರದಿಂದ ಪ್ರಯತ್ನಿಸುತ್ತಿದ್ದೇನೆ. ಇಂದಿಗೂ ಸಂಪರ್ಕ ಸಾಧ್ಯವಾಗಿಲ್ಲ ಎಂದು ಹೇಳಿದರು.

ವಿಚಾರ ಸಂಕಿರಣದಲ್ಲಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ ದಾಸ್‌, ಸಂಘದ ಅಧ್ಯಕ್ಷ ಬಿಕಾಸ್‌ ರಂಜನ್‌ ಭಟ್ಟಾಚಾರ್ಯ, ಸಂಘದ ಪದಾಧಿಕಾರಿಗಳಾದ ಶ್ರೀನಿವಾಸಕುಮಾರ್‌ ಉಪಸ್ಥಿತರಿದ್ದರು.

ಅಖಿಲ ಭಾರತ ವಕೀಲರ ಸಂಘ ಸೆಂಟ್ರಲ್‌ ಕಾಲೇಜಿನ ಸೆನೆಟ್‌ ಹಾಲ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ ದಾಸ್‌ ಹಾಗೂ ವಕೀಲರ ಸಂಘದ ರಾಜ್ಯಾಧ್ಯಕ್ಷ ಎಸ್‌.ಶಂಕರಪ್ಪ ಪರಸ್ಪರ ಚರ್ಚೆಯಲ್ಲಿ ತೊಡಗಿರುವುದು.