ಯಾರು ಏನೇ ಹೇಳಿದ್ರೂ ನಾವು ಭಯ ಪಡುವುದಿಲ್ಲ. ಮುಂದಿನ ಚುನಾವಣೆಗೆ ಬ್ಯಾಲೆಟ್ ಶೀಟ್ ಬಳಕೆ ಇಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಸುನಿಲ್ ಅರೋರಾ ಸ್ಪಷ್ಟಪಡಿಸಿದ್ದಾರೆ.

ನವದೆಹಲಿ[ಜ.24]: EVM ಹ್ಯಾಕಿಂಗ್ ವಿವಾದ ಸದ್ದು ಮಾಡಿದ ಮೂರು ದಿನಗಳ ಬಳಿಕ ಮುಖ್ಯ ಚುನಾವಣಾ ಆಯುಕ್ತರು ಮತದಾನಕ್ಕೆ ಮತ್ತೆ ಬ್ಯಾಲೆಟ್ ಪೇಪರ್ ಬಳಕೆ ಮಾಡುವುದಿಲ್ಲ ಎಂಬುವುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ದೆಹಲಿಯಲ್ಲಿಂದು ನಡೆದ ಕಾರ್ಯಕ್ರಮವೊಂದರಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ CEO ಸುನಿಲ್ ಅರೋರಾ 'ಮತದಾನ ಪ್ರಕ್ರಿಯೆಗೆ ನಾವು ಮತ್ತೆ ಬ್ಯಾಲೆಟ್ ಪೇಪರ್ ಬಳಕೆ ಮಾಡುವುದಿಲ್ಲ ಎಂಬುವುದನ್ನು ನಾನೀಗಲೇ ಸ್ಪಷ್ಟಪಡಿಸುತ್ತೇನೆ’ ಎಂದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಲಂಡನ್ ನಲ್ಲಿ ನಡೆದ ಹ್ಯಾಕಥಾನ್ ನಲ್ಲಿ ಸೈಬರ್ ತಜ್ಞರೊಬ್ಬರು ತಾನು ಇವಿಎಂ ಡಿಸೈನ್ ಮಾಡುವ ತಂಡದ ಸದಸ್ಯನಾಗಿದ್ದೆ. ಭಾರತದಲ್ಲಿ ಬಳಕೆಯಾಗುತ್ತಿರುವ EVM ಹ್ಯಾಕ್ ಮಾಡಲು ತನಗೆ ಸಾಧ್ಯ ಎಂದು ತಿಳಿಸಿದ್ದರು ಎಂಬುವುದು ಗಮನಾರ್ಹ.

ಇಂದು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸುನಿಲ್ ಅರೋರಾ 'EVM ಹಾಗೂ VVPAT ಬಳಕೆ ಮುಂದುವರೆಯಲಿದೆ. ನಾವು ರಾಜಕೀಯ ಪಕ್ಷಗಳಿರುವ ಯಾವುದೇ ಸಂಘಟನೆಯಲ್ಲಿ ತೊಡಗಿಸಿಕೊಂಡಿಲ್ಲ. ಹೀಗಾಗಿ ಯಾವುದೇ ಸಲಹೆ ನೀಡಿದರೂ ನಾವು ಗೌರವಿಸುತ್ತೇವೆ ಹಾಗೂ ಗಣನೆಗೆ ತೆಗೆದುಕೊಳ್ಳುತ್ತೇವೆ. ಹೀಗಂತ ಇವಿಎಂ ಹ್ಯಾಕಿಂಗ್ ನಡೆಯುತ್ತದೆ ಎಂಬ ಮಾತಿಗೆ ಹೆದರಿ ಬ್ಯಾಲೆಟ್ ಪೇಪರ್ ತರುವ ಮಾತೇ ಇಲ್ಲ' ಎಂದಿದ್ದಾರೆ.

Scroll to load tweet…

ಇತ್ತೀಚೆಗಷ್ಟೇ ಸೈಬರ್ ತಜ್ಞ ಸೈಯ್ಯದ್ ಶುಜಾ ಮಾತನಾಡುತ್ತಾ 'ಭಾರತದಲ್ಲಿ ಬಳಕೆಯಾಗುತ್ತಿರುವ EVM ಹ್ಯಾಕ್ ಮಾಡಲು ತನಗೆ ಸಾಧ್ಯ, 2014ರ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಹ್ಯಾಕ್ ಮಾಡಲಾಗಿತ್ತು' ಎಂದೂ ವಾದಿಸಿದ್ದರು. ಇದಾದ ಬಳಿಕ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದ ದೆಹಲಿ ಪೊಲೀಸರು ಇಡೀ ಪ್ರಕರಣದ ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು. ಇತ್ತ ವಿಪಕ್ಷಗಳೂ ಕೂಡಾ ಮತ್ತೆ ಬ್ಯಾಲೆಟ್ ಪೇಪರ್ ಬಳಕೆ ಜಾರಿಗೊಳಿಸುವಂತೆ ಒತ್ತಾಯಿಸಿದ್ದವು. ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಮತ್ತೆ ಬ್ಯಾಲೆಟ್ ಪೇಪರ್ ಮತದಾನದ ವ್ಯವಸ್ಥೆ ಜಾರಿಗೊಳಿಸವಂತೆ ನಿರಂತರವಾಗಿ ಮನವಿ ಮಾಡಿಕೊಳ್ಳುತ್ತಿವೆ.