ಉಡುಪಿ (ಆ. 31):  ರಾಜ್ಯದ ದೇವಾಲಯಗಳ ಆದಾಯದ ಸೋರಿಕೆ ತಡೆಯಲು ಮತ್ತು ಪಾರದರ್ಶಕತೆ ತರಲು ‘ಇ-ಹುಂಡಿ’ ಯೋಜನೆ ಜಾರಿಗೊಳಿಸಲಾಗುತ್ತಿದೆ. ಸದ್ಯಕ್ಕೆ ಉಡುಪಿ ಜಿಲ್ಲೆಯ ಕೊಲ್ಲೂರು ಮುಕಾಂಬಿಕಾ ದೇವಾಲಯವೂ ಸೇರಿದಂತೆ ರಾಜ್ಯದ ಆಯ್ದ 10 ಎ ದರ್ಜೆಯ ದೇವಾಲಯಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಉಡುಪಿಯಲ್ಲಿ ‘ಕನ್ನಡಪ್ರಭ’ದೊಂದಿಗೆ ಮಾತನಾಡಿರುವ ಅವರು, ಕೆಲವು ದೇವಾಲಯಗಳ ಆದಾಯ ಅಪವ್ಯಯವಾಗುತ್ತಿದೆ ಎನ್ನುವ ಆರೋಪವಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ 150 ಎ ದರ್ಜೆಯ ದೇವಾಲಯಗಳಲ್ಲಿ ಹಂತಹಂತವಾಗಿ ಇ-ಹುಂಡಿ ಯೋಜನೆ ಜಾರಿಗೊಳಿಸಲಾಗುತ್ತದೆ. ಇದರಿಂದ ಆದಾಯದ ಮೇಲೆ ಇಲಾಖೆಗೆ ಸಂಪೂರ್ಣ ಹಿಡಿತ ಸಾಧ್ಯವಾಗಲಿದೆ ಎಂದರು.

ಮುಜರಾಯಿ ಇಲಾಖೆಯ ದೇವಾಲಯಗಳ ಆದಾಯವನ್ನು ಅನ್ಯಧರ್ಮೀಯ ಕಾರಣಗಳಿಗೆ ಬಳಸಿರುವುದಾಗಿ ಆರೋಪಗಳಿದ್ದರೂ, ಮೇಲ್ನೋಟಕ್ಕೆ ಇಂತಹ ಅಪವ್ಯಯ ಕಂಡುಬಂದಿಲ್ಲ. ಈ ಬಗ್ಗೆ ಸ್ಪಷ್ಟವಾದ ದೂರು ಸಲ್ಲಿಸಿದರೆ ತನಿಖೆ ಕೈಗೊಳ್ಳಲಾಗುವುದು ಎಂದರು.

10 ಗೋಶಾಲೆಗಳ ಆರಂಭ:

ಗೋಹತ್ಯೆ ತಡೆದು, ಗೋಸಂತತಿಯನ್ನು ರಕ್ಷಿಸುವುದಕ್ಕಾಗಿ, ಪ್ರಾಥಮಿಕ ಹಂತದಲ್ಲಿ ರಾಜ್ಯದ 10 ಶ್ರೀಮಂತ ದೇವಾಲಯಗಳಲ್ಲಿ ‘ಗೋಶಾಲೆ’ಗಳನ್ನು ತೆರೆಯಲಾಗುವುದು. ಈಗಾಗಲೇ ಅಂತಹ ದೇವಾಲಯಗಳನ್ನು ಗುರುತಿಸಿ, ಅಲ್ಲಿ ಕನಿಷ್ಠ 10 ಎಕರೆ ಜಮೀನಿನ ಲಭ್ಯತೆಯನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ದೇವಾಲಯ ಯೋಜನೆಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ಹಿನ್ನೀರಲ್ಲಿ ಬೋಟ್‌ ಹೌಸ್‌:

ನದಿಗಳ ಹಿನ್ನೀರಿನಲ್ಲಿ ಸಾರಿಗೆ ಮತ್ತು ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವುದಕ್ಕೆ ಬೋಟ್‌ ಹೌಸ್‌ ಮಾದರಿಯ ದೋಣಿ ಸಾರಿಗೆ ಆರಂಭಿಸುವ ಯೋಜನೆಯಿದೆ. ಕಾವೇರಿ, ಕೃಷ್ಣ, ತುಂಗಾಭದ್ರದಂತಹ ನದಿಗಳಲ್ಲಿ 8-12 ಕಿ.ಮೀ. ಹಾಗೂ ಕರಾವಳಿ ನದಿಗಳಲ್ಲಿ 2-4 ಕಿ.ಮೀ. ಹಿನ್ನೀರು ಪ್ರದೇಶವಿದೆ. ಇಲ್ಲಿ ದೋಣಿ ಸಾರಿಗೆ ಲಾಭದಾಯಕವೇ ಎಂಬುದರ ಕುರಿತು ಅಧಿಕಾರಿಗಳು ಅಧ್ಯಯನ ನಡೆಸುತ್ತಿದ್ದಾರೆ ಎಂದರು.

ಬೋಟ್‌ ಟ್ರ್ಯಾಕಿಂಗ್‌ ಆ್ಯಪ್‌:

ಮಲ್ಪೆಯ ಸುವರ್ಣ ತ್ರಿಭುಜ ಬೋಟು ಮತ್ತು ಅದರಲ್ಲಿ 5 ಮಂದಿ ಮೀನುಗಾರರು ಸಮುದ್ರದಲ್ಲಿ ಅವಘಡಕ್ಕೆ ಸಿಕ್ಕಿದ ಪ್ರಕರಣದ ಹಿನ್ನೆಲೆಯಲ್ಲಿ ಮುಂದೆ ಇಂತಹ ಅವಘಡಗಳನ್ನು ತಡೆಯುವುದಕ್ಕಾಗಿ ಬೋಟುಗಳ ಮೇಲೆ ನಿಗಾ ವಹಿಸುವಂತಹ ಆ್ಯಪ್‌ ತಯಾರಿಸುವುದಕ್ಕೆ ಯೋಚಿಸಲಾಗಿದೆ. ಈ ಬಗ್ಗೆ ಈಗಾಗಲೇ ಐಟಿ ಇಲಾಖೆಗೆ ಸೂಚಿಸಲಾಗಿದ್ದು, ಇದಕ್ಕೆ ‘ಇಸ್ರೋ’ ನೆರವನ್ನೂ ಪಡೆಯಲಾಗುವುದು ಎಂದು ವಿವರಿಸಿದರು.

12 ಬಂದರುಗಳ ದುರಸ್ತಿ:

ಕರಾವಳಿಯ 3 ಜಿಲ್ಲೆಗಳ 12 ಕಿರು ಬಂದರುಗಳು ಅನೇಕ ವರ್ಷದಿಂದಲೂ ದುಃಸ್ಥಿತಿಯಲ್ಲಿವೆ. ಅವುಗಳ ಸುಸ್ಥಿತಿಗೆ ತಂದರೆ ಮೀನುಗಾರಿಕೆಯನ್ನು ಮತ್ತಷ್ಟುಲಾಭದಾಯಕ ಉದ್ಯಮವನ್ನಾಗಿ ಮಾಡಲು ಸಾಧ್ಯವಿದೆ. ಈ ಬಂದರುಗಳ ಬಗ್ಗೆ ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಪ್ರತಿದಿನ ಆದಾಯ ಲೆಕ್ಕ

ಆಧುನಿಕ ತಂತ್ರಜ್ಞಾನದೊಂದಿಗೆ ಇ ಹುಂಡಿಯನ್ನು ಅಭಿವೃದ್ಧಿ ಪಡಿಸಲು ಯೋಚಿಸಲಾಗಿದೆ. ಭಕ್ತರು ಹುಂಡಿಗೆ ಹಾಕುವ ಚಿನ್ನ, ಬೆಳ್ಳಿ, ಹಣ ಇತ್ಯಾದಿ ಕಾಣಿಕೆಗಳನ್ನು ಅದು ಸ್ಕ್ಯಾ‌ನ್‌ ಮಾಡಿ ನಿಖರವಾಗಿ ಗುರುತಿಸಿ, ಪ್ರತಿದಿನ ದೇವಾಲಯದ ಖಾತೆ ಇರುವ ಬ್ಯಾಂಕಿಗೆ ಮಾಹಿತಿ ನೀಡುತ್ತದೆ. ದೇವಾಲಯದ ಹಣ ದುರ್ಬಳಕೆ ತಡೆಯವುದು ಉದ್ದೇಶವಾಗಿದೆ.

- ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ ಸಚಿವ

4 ಇಲಾಖೆ 5 ಯೋಜನೆಗಳು

* ಮುಜರಾಯಿ ಇಲಾಖೆ: ಇ - ಹುಂಡಿ ಮತ್ತು ಗೋಶಾಲೆ

* ಮೀನುಗಾರಿಕೆ ಇಲಾಖೆ: ಬೋಟ್‌ ಟ್ರ್ಯಾಕ್‌ ಆ್ಯಪ್‌

* ಬಂದರು ಇಲಾಖೆ: 12 ಕಿರು ಬಂದರುಗಳ ಅಭಿವೃದ್ಧಿ

* ಒಳನಾಡು ಸಾರಿಗೆ: ಹಿನ್ನೀರು ಬೋಟ್‌ ಹೌಸ್‌