ಕಾಸರಗೋಡಿನ ಕನ್ನಡ ಶಾಲೆಗಳಿಗೆ ಮಲಯಾಳಿ ಶಿಕ್ಷಕರ ನೇಮಕವನ್ನು ವಿರೋಧಿಸಿ ನಡೆಸುತ್ತಿರುವ ಹೋರಾಟದ ಕಾವು ನಿಧಾನವಾಗಿ ಏರತೊಡಗಿದ್ದು, ಇದೀಗ ಕೇರಳ ಮುಖ್ಯಮಂತ್ರಿ, ಕೇರಳ ಲೋಕಸೇವಾ ಆಯೋಗಕ್ಕೆ ಸಾಮೂಹಿಕ ಇ-ಮೇಲ್ ಅಭಿಯಾನ ಪ್ರಾರಂಭಿಸಲಾಗಿದೆ.
ಮಂಗಳೂರು : ಗಡಿನಾಡು ಕಾಸರಗೋಡಿನ ಕನ್ನಡ ಶಾಲೆಗಳಿಗೆ ಮಲಯಾಳಿ ಶಿಕ್ಷಕರ ನೇಮಕವನ್ನು ವಿರೋಧಿಸಿ ನಡೆಸುತ್ತಿರುವ ಹೋರಾಟದ ಕಾವು ನಿಧಾನವಾಗಿ ಏರತೊಡಗಿದ್ದು, ಇದೀಗ ಕೇರಳ ಮುಖ್ಯಮಂತ್ರಿ, ಕೇರಳ ಲೋಕಸೇವಾ ಆಯೋಗಕ್ಕೆ ಸಾಮೂಹಿಕ ಇ-ಮೇಲ್ ಅಭಿಯಾನ ಪ್ರಾರಂಭಿಸಲಾಗಿದೆ.
ಕಾಸರಗೋಡಿನ ಮಂಗಲ್ಪಾಡಿ ಶಾಲೆಗೆ ಮಲಯಾಳಿ ಶಿಕ್ಷಕರು ನೇಮಕಗೊಂಡ ಬಳಿಕ ಗಡಿನಾಡ ಕನ್ನಡಿಗರ ಹೋರಾಟ ಆರಂಭವಾಗಿತ್ತು. ಬುಧವಾರ ಮತ್ತೆ ಅದೇ ಶಿಕ್ಷಕ ಶಾಲೆಯಲ್ಲಿ ಕನ್ನಡ ಮಾಧ್ಯಮ ತರಗತಿಗೆ ಹಾಜರಾಗಲು ಬಂದಾಗ ಮತ್ತೆ ಪ್ರತಿಭಟನೆ ನಡೆಸಿ ಅವರನ್ನು 120 ದಿನಗಳ ಕಾಲ ರಜೆಯಲ್ಲಿ ಕಳುಹಿಸಲಾಗಿತ್ತು. ಗುರುವಾರದಿಂದ ಇ-ಮೇಲ್ ಮೂಲಕ ಸರ್ಕಾರದ ಕದ ತಟ್ಟುವ ಕೆಲಸವಾಗುತ್ತಿದ್ದು, ಈ ಅಭಿಯಾನಕ್ಕೆ ದ.ಕ.ಜಿಲ್ಲೆಯ ನಾಗರಿಕರೂ ಕೈ ಜೋಡಿಸಿದ್ದಾರೆ.
ಇದೇ ವೇಳೆ ಕಾಸರಗೋಡು ಕನ್ನಡ ಹೋರಾಟ ಸಮಿತಿ ನೇತೃತ್ವದ ನಿಯೋಗ ಗುರುವಾರ ಕೇರಳ ಲೋಕಸೇವಾ ಆಯೋಗದ ಅಧ್ಯಕ್ಷರಾದ ಎಂ.ಕೆ.ಸಕೀರ್ ಅವರನ್ನು ಭೇಟಿ ಮಾಡಿದ್ದು ಮಲಯಾಳಿ ಶಿಕ್ಷಕರನ್ನು ಕನ್ನಡ ಶಾಲೆಗೆ ನೇಮಕಗೊಳಿಸಿದರೆ ಉಂಟಾಗುವ ತೊಂದರೆಯನ್ನು ಮನದಟ್ಟು ಮಾಡಿದೆ. ಈಗಾಗಲೇ ಹಳೆಯ ನಿಯಮದಂತೆ ನೇಮಕ ಮಾಡಲಾಗಿದ್ದು, ಮುಂದೆ ಹೀಗಾಗದಂತೆ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷರು ಭರವಸೆ ನೀಡಿದ್ದಾರೆ. ಆದರೆ ಈಗಾಗಲೇ ನೇಮಕಗೊಂಡಿರುವ ಮಲಯಾಳಿ ಶಿಕ್ಷಕರನ್ನು ಬದಲಾಯಿಸುವುದು ಅಥವಾ ವಾಪಸ್ ಕರೆಸಿಕೊಳ್ಳುವ ಬಗ್ಗೆ ಕೆಪಿಎಸ್‌ಸಿ ಅಧ್ಯಕ್ಷರು ಯಾವುದೇ ಭರವಸೆ ನೀಡಿಲ್ಲ. ಹೀಗಾಗಿ ಹೈಕೋರ್ಟ್ ಮೆಟ್ಟಿಲೇರುವುದೇ ಹೋರಾಟ ಸಮಿತಿಗೆ ಉಳಿದಿರುವ ಏಕೈಕ ಮಾರ್ಗ ಎಂದು ಮೂಲಗಳು ತಿಳಿಸಿವೆ.
