ಸಿಐಡಿ ಅಧಿಕಾರಿಗಳು ಸಲ್ಲಿಸಿದ್ದ ಬಿ ರಿಪೋರ್ಟ್'ಗೆ ತಕರಾರು ಸಲ್ಲಿಸಲು ಮಡಿಕೇರಿ ಜೆಎಂಎಫ್​'ಸಿ ಕೋರ್ಟ್​ ಅವಕಾಶ ನೀಡಿದ್ದು, ಅರ್ಜಿ ವಿಚಾರಣೆಯನ್ನ ಏಪ್ರಿಲ್ 10 ಕ್ಕೆ‌ ನಿಗದಿ ಮಾಡಿದೆ.

ಮಡಿಕೇರಿ(ಏ. 03): ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಆರೋಪಿಗಳಿಗೆ ಮತ್ತೆ ಕಂಟಕ ಎದುರಾಗಿದೆ. ಗಣಪತಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಪುತ್ರ ನೇಹಲ್​ ಖಾಸಗಿ ದೂರು ದಾಖಲಿಸಿದ್ದಾರೆ. ಈ ಅರ್ಜಿ ವಿಚಾರಣೆಗೆ ಇಂದು ಕೋರ್ಟ್​ ಸಮ್ಮತಿಸಿದೆ. 

ಸಿಐಡಿ ಅಧಿಕಾರಿಗಳು ಸಲ್ಲಿಸಿದ್ದ ಬಿ ರಿಪೋರ್ಟ್'ಗೆ ತಕರಾರು ಸಲ್ಲಿಸಲು ಮಡಿಕೇರಿ ಜೆಎಂಎಫ್​'ಸಿ ಕೋರ್ಟ್​ ಅವಕಾಶ ನೀಡಿದ್ದು, ಅರ್ಜಿ ವಿಚಾರಣೆಯನ್ನ ಏಪ್ರಿಲ್ 10 ಕ್ಕೆ‌ ನಿಗದಿ ಮಾಡಿದೆ.

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಸಚಿವ ಕೆ.ಜೆ ಜಾರ್ಜ್​, ಐಪಿಎಸ್​ ಅಧಿಕಾರಿಗಳಾದ ಪ್ರಣಬ್​ ಮೊಹಾಂತಿ ಮತ್ತು ಎ.ಎಂ ಪ್ರಸಾದ್​ ವಿರುದ್ಧ ಪ್ರಕರಣ ದಾಖಲಾಗಿತ್ತು. ಸಚಿವ ಜಾರ್ಜ್ ರಾಜೀನಾಮೆಯನ್ನೂ ನೀಡಿದ್ದರು. ಆದರೆ, ಸರಿಯಾಗಿ ಸಾಕ್ಷ್ಯಾಧಾರ ಇಲ್ಲವೆಂದು ಹೇಳಿ ಸಿಐಡಿ ಬಿ ರಿಪೋರ್ಟ್ ಸಲ್ಲಿಸಿದ್ದರಿಂದ ಪ್ರಕರಣ ಅಂತ್ಯವಾಗಿತ್ತು. ಜಾರ್ಜ್ ಸೇರಿದಂತೆ ಹಲವು ಮಂದಿ ಆರೋಪಮುಕ್ತರಾದರು. ಆನಂತರ ಜಾರ್ಜ್ ಮತ್ತೆ ಸಂಪುಟ ಸೇರಿಕೊಂಡಿದ್ದಾರೆ. ಇದೀಗ, ಗಣಪತಿ ಪುತ್ರನ ಮೂಲಕ ಪ್ರಕರಣಕ್ಕೆ ಮರುಜೀವ ಬಂದಿದೆ. ನ್ಯಾಯಾಲಯ ಮುಂದೇನು ತೀರ್ಮಾನಿಸುತ್ತದೆ ಎಂಬುದನ್ನು ಕಾದುನೋಡಬೇಕು.