ಬೆಂಗಳೂರು(ಸೆ. 17): ಡಿವೈಎಸ್'ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಗೃಹ ಸಚಿವ ಕೆಜೆ ಜಾರ್ಜ್, ಎಡಿಜಿಪಿ ಎಂಎಂ ಪ್ರಸಾದ್, ಡಿಐಜಿ ಪ್ರಣಬ್ ಮೊಹಂತಿಗೆ ಸಿಐಡಿ ಕ್ಲೀನ್ ಚಿಟ್ ನೀಡಿದೆ. ಈ ಪ್ರಕರಣದಲ್ಲಿ ಮಡಿಕೇರಿ ನ್ಯಾಯಾಲಯಕ್ಕೆ ಸಿಐಡಿ ಬಿ-ರಿಪೋರ್ಟ್ ಸಲ್ಲಿಸಿದೆ. ಸರಿಯಾದ ಸಾಕ್ಷ್ಯಾಧಾರ ಇಲ್ಲವೆಂಬ ಕಾರಣಕ್ಕೆ ಈ ಪ್ರಕರಣಕ್ಕೆ ಮುಕ್ತಾಯ ಹಾಡಲಾಗುತ್ತಿದೆ. ಈ ಸಿಐಡಿ ವರದಿಯಲ್ಲಿ ಏನಿದೆ? ಸಿಐಡಿ ವಿಚಾರಣೆಗೊಳಪಡಿಸಿದವರು ಏನು ಹೇಳಿಕೆ ನೀಡಿದ್ದಾರೆ?
ಕ್ರೈಸ್ತ ಮುಖಂಡರ ಮುಂದೆ ಅಂಗಲಾಚಿದ್ದ ಗಣಪತಿ:
ಡಿವೈಎಸ್'ಪಿ ಗಣಪತಿಯವರು ಎಕ್ಸಿಕ್ಯೂಟಿವ್ ಹುದ್ದೆಗೆ ಬಡ್ತಿ ಪಡೆಯಲು ತೀವ್ರ ಕಸರತ್ತು ನಡೆಸುತ್ತಿದ್ದುದು ಸಿಐಡಿ ವರದಿಯಿಂದ ತಿಳಿದುಬಂದಿದೆ. ಈ ಸಂಬಂಧ ಕ್ರೈಸ್ತ ಸಮುದಾಯದ ಪ್ರಭಾವೀ ಮುಖಂಡರೆನಿಸಿದ ವಿನ್ಸೆಂಟ್ ಎಂಬುವವರನ್ನು ಗಣಪತಿಯವರು ಅಂಗಲಾಚುತ್ತಿದ್ದರಂತೆ. ತಾನು ಗಣಪತಿಯ ಜೊತೆಗೆ ಯೇಸು ಕ್ರಿಸ್ತ ಹಾಗೂ ಮೇರಿಯ ಭಕ್ತನೆಂದು ಹೇಳಿಕೊಳ್ಳುತ್ತಿದ್ದರು. ಅಲ್ಲದೇ, ಯೇಸುವನ್ನು ತಾನು ಪೂಜಿಸುತ್ತಿರುವ ವಿಡಿಯೋವನ್ನು ವಿನ್ಸೆಂಟ್'ರಿಗೆ ತೋರಿಸಿ ಬಡ್ತಿಗೆ ಶಿಫಾರಸು ಮಾಡಬೇಕೆಂದು ಪ್ರಭಾವ ಬೀರಲು ಯತ್ನಿಸುತ್ತಿದ್ದರೆನ್ನಲಾಗಿದೆ.
ನಿಯಮ ಮೀರಿ ಬಡ್ತಿಗೆ ಯತ್ನಿಸುತ್ತಿದ್ದರಾ?
ಮಂಗಳೂರಿನ ಐಜಿ ಕಚೇರಿಗೆ ಗಣಪತಿಯವರನ್ನು ಬಡ್ತಿ ಕೊಟ್ಟೇ ವರ್ಗ ಮಾಡಲಾಗಿತ್ತು. ಬಡ್ತಿ ಸಿಕ್ಕ ಮೇಲೆ ಒಂದು ವರ್ಷ ಕಡ್ಡಾಯವಾಗಿ ನಾನ್-ಎಕ್ಸಿಕ್ಯೂಟಿವ್ ಹುದ್ದೆಯಲ್ಲಿರಬೇಕು. ಆದರೆ, ಗಣಪತಿಯವರು ನಿಯಮ ಮೀರಿ ಎಕ್ಸಿಕ್ಯೂಟಿವ್ ಹುದ್ದೆಗೆ ಪ್ರಯತ್ನಿಸುತ್ತಿದ್ದುದು ಸಿಐಡಿ ಸಲ್ಲಿಸಿರುವ ಬಿರಿಪೋರ್ಟ್'ನಿಂದ ತಿಳಿದುಬರುತ್ತದೆ.
ಹಿಂಭಡ್ತಿಯ ಭಯವಿತ್ತಾ?
ಗಣಪತಿಯವರ ವಿರುದ್ಧದ ಕೆಲ ಹಳೆಯ ಪ್ರಕರಣಗಳನ್ನು ರೀಓಪನ್ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿ ಗೆಳೆಯರೊಬ್ಬರು ಡಿಜಿಪಿ ಕಚೇರಿಯಿಂದ ಗಣಪತಿಯವರಿಗೆ ದೂರವಾಣಿ ಕರೆ ಮಾಡಿದ್ದರಂತೆ. ಈ ಕೇಸ್'ಗಳು ಮತ್ತೆ ತೆರೆದುಕೊಂಡರೆ ತನ್ನ ಬಡ್ತಿ ಯತ್ನಕ್ಕೆ ಕಲ್ಲುಬೀಳುವುದರ ಜೊತೆಗೆ ತನಗೆ ಡಿವೈಎಸ್'ಪಿಯಿಂದ ಇನ್ಸ್'ಪೆಕ್ಟರ್ ಹುದ್ದೆಗೆ ಹಿಂಬಡ್ತಿ ಬಂದರೂ ಬರಬಹುದೆಂಬ ಆತಂಕ ಗಣಪತಿಯವರದ್ದಾಗಿತ್ತು. ತನ್ನ ಹಳೆಯ ಕೇಸ್'ಗಳು ರೀಓಪನ್ ಆಗಲು ಕ್ರೈಸ್ತ ಸಮುದಾಯದ ಮುಖಂಡರೇ ಕಾರಣವಿರಬಹುದೆಂದು ಗಣಪತಿ ಬಗೆದಿದ್ದರು ಎಂಬ ಮಾಹಿತಿ ಸಿಐಡಿ ವರದಿಯಲ್ಲಿದೆ.
ಸಿಐಡಿ ವಿಚಾರಣೆಗೊಳಪಟ್ಟವರು: 30 ಮಂದಿ
ಕೆ.ಜೆ. ಜಾರ್ಜ್, ಮಾಜಿ ಸಚಿವ
ಪ್ರಣಬ್ ಮೊಹಂತಿ, ಲೋಕಾಯುಕ್ತ ಐಜಿಪಿ
ಎಡಿಜಿಪಿ ಎಎಂ ಪ್ರಸಾದ್, ಗುಪ್ತಚರ ಇಲಾಖೆ
ರಾಘವೇಂದ್ರ ಔರಾದ್ಕರ್ ಎಡಿಜಿಪಿ
ಡಿಸಿಪಿ ಹರ್ಷ,
ಡಿಸಿಪಿ ಸತೀಶ್,
ಎಸಿಪಿ ಸಾರಾ ಫಾತಿಮಾ
ಎಂ.ಪಿ. ಗಣೇಶ್, ಭಾರತ ಹಾಕಿ ತಂಡದ ಮಾಜಿ ನಾಯಕ
ವಿನ್ಸೆಂಟ್, ಕ್ರೈಸ್ತ ಸಮುದಾಯದ ಪ್ರಭಾವಿ ಮುಖಂಡ
ಅರುಣ್ ಚಕ್ರವರ್ತಿ, ಮಂಗಳೂರು ಐಜಿ
ಎಸಿಪಿ ಶಾಂತ ಕುಮಾರ್,
ಪಿಸಿ ಜಗನ್ನಾಥ್
ಪಾವನಾ, ಗಣಪತಿ ಪತ್ನಿ
ಎಸಿಪಿ ತಮ್ಮಯ್ಯ, ಗಣಪತಿ ತಮ್ಮ
ಮಾಚಯ್ಯ, ಗಣಪತಿ ಸಹೋದರ
ಹಾಗೂ ಇತರರು.
