ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಇನ್ನಿತರ ಸಚಿವರು ಹಿಂಸಾಚಾರ ತಡೆಗಟ್ಟಲು ಕ್ರಮ ಕೈಗೊಳ್ಳುವ ಬದಲಾಗಿ ಜನರನ್ನು ಹಿಂಸಾಚಾರಕ್ಕೆ ಪ್ರಚೋದಿಸುತ್ತಿದ್ದಾರೆ ಎಂದು ಆಪಾದಿಸಿದರು.
ಬೆಂಗಳೂರು(ಜು.10): ಕಳೆದ ಹದಿನೈದು ದಿನಗಳಿಂದ ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಿದೆ. ಇವೆಲ್ಲದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣರಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗದಿದ್ದಲ್ಲಿ ಅವರು ರಾಜೀನಾಮೆ ನೀಡಲಿ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಇನ್ನಿತರ ಸಚಿವರು ಹಿಂಸಾಚಾರ ತಡೆಗಟ್ಟಲು ಕ್ರಮ ಕೈಗೊಳ್ಳುವ ಬದಲಾಗಿ ಜನರನ್ನು ಹಿಂಸಾಚಾರಕ್ಕೆ ಪ್ರಚೋದಿಸುತ್ತಿದ್ದಾರೆ ಎಂದು ಆಪಾದಿಸಿದರು.
ಮುಖ್ಯಮಂತ್ರಿಗಳು ಕಳೆದ ಎರಡು ದಿನಗಳ ಹಿಂದೆ ಮಂಗಳೂರಿಗೆ ಭೇಟಿ ನೀಡಿದರೂ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕನಿಷ್ಠ ಅಧಿಕಾರಿಗಳ ಸಭೆಯನ್ನೂ ನಡೆಸಲಿಲ್ಲ. ಅಲ್ಲಿನ ಪರಿಸ್ಥಿತಿ ಅವಲೋಕಿಸಿ ಜಿಲ್ಲಾ ಪೊಲೀಸ್ ಮತ್ತು ಜಿಲ್ಲಾಡಳಿತಕ್ಕೆ ಸೂಕ್ತ ನಿರ್ದೇಶನ ನೀಡುವ ತಾಳ್ಮೆಯನ್ನು ಅವರು ಪ್ರದರ್ಶಿಸಲಿಲ್ಲ. ಗೃಹ ಖಾತೆ ಹೊಂದಿರುವ ಮುಖ್ಯಮಂತ್ರಿಗಳೇ ಹಿಂಸಾಚಾರ ನಿಯಂತ್ರಿಸಲು ವಿಫಲವಾಗಿದ್ದಾರೆ. ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡಿದಲ್ಲಿ ಅಲ್ಲಿನ ಪರಿಸ್ಥಿತಿಯನ್ನು 24 ಗಂಟೆಗಳೊಳಗಾಗಿ ನಿಯಂತ್ರಣಕ್ಕೆ ತರಲಿದೆ ಎಂದರು.
ಕೇಂದ್ರಕ್ಕೂ ಮಾಹಿತಿ ರವಾನೆ
ದಕ್ಷಿಣ ಕನ್ನಡದ ಪರಿಸ್ಥಿತಿ ಕುರಿತು ಶನಿವಾರ ಕೇಂದ್ರ ಗೃಹ ಇಲಾಖೆ ಗಮನಕ್ಕೆ ತರಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರದ ವೈಫಲ್ಯ, ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಕುರಿತೂ ಮಾಹಿತಿ ನೀಡಲಾಗಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.
ಆದರೆ, ಕಾನೂನು ಸುವ್ಯವಸ್ಥೆ ರಾಜ್ಯ ಸರ್ಕಾರಕ್ಕೆ ಸೇರಿದ ವಿಷಯವಾಗಿರುವುದರಿಂದ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವಂತಿಲ್ಲ. ಈಗಾಗಲೇ ಪ್ರತಿಯೊಂದು ವಿಚಾರದಲ್ಲೂ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುತ್ತಿದೆ ಎಂಬ ಗೂಬೆಯನ್ನು ರಾಜ್ಯ ಸರ್ಕಾರ ಕೂರಿಸುತ್ತ್ತಿದೆ ಎಂದು ಹೇಳಿದರು.
ಬಿಜೆಪಿ ಸಂಸದರು ಗಲಭೆಗ್ರಸ್ಥ ಪ್ರದೇಶಕ್ಕೆ ತೆರಳಿ ಹಿಂಸೆಗೆ ಪ್ರಚೋದಿಸಿದ್ದಾರೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಸಂಸದರಾಗಿ ಗಲಭೆಪೀಡಿತ ಪ್ರದೇಶಗಳಿಗೆ ಹೋಗದೇ ಮನೆಯಲ್ಲಿ ಕೂರಬೇಕೇ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಮುಂದೆ ರಾಜ್ಯದಲ್ಲಿ ಭವಿಷ್ಯವಿಲ್ಲ ಎಂಬುದು ಸ್ಪಷ್ಟವಾಗಿ ಅರಿವಿಗೆ ಬಂದಿದ್ದು, ಈ ಕಾರಣಕ್ಕಾಗಿಯೇ ರಾಜ್ಯದಲ್ಲಿ ಸಾಮರಸ್ಯ ಕದಡುವ ಯತ್ನಕ್ಕೆ ಕೈ ಹಾಕಿದ್ದಾರೆ. ಸಿದ್ದರಾಮಯ್ಯನವರೇ ಎಲ್ಲದಕ್ಕೂ ಕಾರಣರಾಗಿದ್ದು ಇದು ಕಾಂಗ್ರೆಸ್‌ನ ಹತಾಶ ಪರಿಸ್ಥಿತಿಯನ್ನು ಬಿಂಬಿಸುತ್ತಿದೆ. ಕಾಂಗ್ರೆಸ್‌ನ ಕೊನೆ ವರ್ಷ ಇದಾಗಿದ್ದು ಅವರ ಭವಿಷ್ಯವೇ ಕೊನೆಯಾಗಲಿದೆ ಎಂಬುದು ಅವರ ಧೋರಣೆಗಳಿಂದ ಸಾಬೀತಾಗುತ್ತಿದೆ. ಪ್ರತಿಯೊಂದು ವೈಫಲ್ಯಕ್ಕೂ ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕರಾವಳಿಯಲ್ಲಿ ಕೇರಳ ಪರಿಸ್ಥಿತಿ
ಗಲಭೆಗ್ರಸ್ಥ ಕರಾವಳಿಯಲ್ಲಿ ಕೇರಳದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್‌ಮಾಧವ್ ಹೇಳಿದ್ದಾರೆ.
ವಿಚಾರ ಸಂಕಿರಣವೊಂದರಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ದಕ್ಷಿಣ ಕನ್ನಡದಲ್ಲಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಕೇರಳದ ಪರಿಸ್ಥಿತಿಯೇ ಇಲ್ಲೂ ಉಂಟಾಗಿರುವಂತೆ ತೋರುತ್ತಿದೆ. ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
