ಪ್ರವಾಹದಿಂದ ನೀಡಿದ ರಜೆ ಸರಿದೂಗಿಸಿಕೊಳ್ಳಲು ದಸರಾ ರಜೆ ಕಡಿತಗೊಳಿಸಲು ಶಿಕ್ಷಣ ಇಲಾಖೆ ಚಿಂತನೆ | ಪ್ರವಾಹ ಪೀಡಿತ ಪ್ರದೇಶಗಳಲ್ಲಿರುವ ಮಕ್ಕಳು ಯಾವುದೇ ಕಾರಣದಿಂದಲೂ ಪಾಠದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಎಂದು  ಶಿಕ್ಷಣ ಇಲಾಖೆ ಹೇಳಿದೆ. 

ಬೆಂಗಳೂರು (ಆ. 14): ಪ್ರವಾಹದಿಂದ ರಾಜ್ಯದ 17 ಜಿಲ್ಲೆಗಳಲ್ಲಿ ಶಾಲೆಗಳಿಗೆ ನೀಡಿರುವ ರಜೆಯನ್ನು ಸರಿದೂಗಿಸಲು ಮುಂಬರುವ ಸರ್ಕಾರಿ ರಜೆಗಳನ್ನು ಬಳಸಿಕೊಳ್ಳಲಾಗುತ್ತದೆ. ಅಗತ್ಯಬಿದ್ದರೆ ದಸರಾ ರಜೆಯನ್ನು ಕೂಡ ಬಳಸಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.

ಸದ್ಯ ಒಂದು ವಾರದಿಂದ ಶಾಲೆಗಳಿಗೆ ರಜೆ ನೀಡಲಾಗಿದೆ. ಇನ್ನೂ ನಿಖರವಾಗಿ ಯಾವಾಗ ಶಾಲೆಗಳು ಪುನಾರಂಭಗೊಳ್ಳಲಿವೆ ಎಂಬುದು ಖಾತ್ರಿಯಾಗಿಲ್ಲ. ಹೀಗಾಗಿ, ಶಾಲೆಗಳು ಆರಂಭವಾದ ನಂತರ ಪ್ರತಿ ಸರ್ಕಾರಿ ರಜೆಯನ್ನು ರದ್ದುಗೊಳಿಸಿ ಶಾಲೆಗಳನ್ನು ನಡೆಸಲಾಗುತ್ತದೆ.

ಸಂತ್ರಸ್ತ ಮಕ್ಕಳಿಗೆ ಎಲ್ಲಾ ಶಾಲೆಗಳಲ್ಲಿ ಪ್ರವೇಶ

ಇಲಾಖೆ ವಾರ್ಷಿಕ ವೇಳಾಪಟ್ಟಿಪ್ರಕಾರ ಸೆಪ್ಟೆಂಬರ್‌ 5ರಿಂದ 20ರ ವರೆಗೆ ದಸರಾ ರಜೆ ನೀಡಲಾಗಿದೆ. ಅಗತ್ಯವೆನಿಸಿದರೆ ರಜೆಯನ್ನು ಬಳಸಿಕೊಳ್ಳಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ.ಜೆ. ಜಗದೀಶ್‌ ಸ್ಪಷ್ಟಪಡಿಸಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿರುವ ಮಕ್ಕಳು ಯಾವುದೇ ಕಾರಣದಿಂದಲೂ ಪಾಠದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು. ಸದ್ಯ ರಾಜ್ಯದ ಯಾವುದೇ ಶಾಲೆಗಳಲ್ಲಿಯೂ ಪ್ರವೇಶ ಕಲ್ಪಿಸುವಂತೆ ಸೂಚನೆ ನೀಡಲಾಗಿದೆ.

ನೆರೆಯಿಂದ 6 ಲಕ್ಷ ಹೆಕ್ಟೇರ್‌ ಜಮೀನಲ್ಲಿ ಬೆಳೆ ನಾಶ

ಸ್ಥಳೀಯವಾಗಿಯೂ ಕಳೆದು ಹೋಗಿರುವ ಶಾಲಾ ಕಟ್ಟಡ, ಪಠ್ಯಪುಸ್ತಕಗಳನ್ನು ತುರ್ತಾಗಿ ಒದಗಿಸುವ ಕೆಲಸಕ್ಕೆ ಮುಂದಾಗಿದ್ದೇವೆ. ಎಲ್ಲಕ್ಕಿಂತ ಮುಖ್ಯವಾಗಿ ಸಂಪೂರ್ಣ ಪಾಠಗಳನ್ನು ಮಾಡಬೇಕಿದೆ. ಇದಕ್ಕಾಗಿ ಸರ್ಕಾರಿ ರಜೆಗಳನ್ನು ಬಳಸಿಕೊಳ್ಳುವುದು ಅನಿವಾರ್ಯವಾಗಿದೆ. ಈಗ ಎಷ್ಟುದಿನಗಳು ಶಾಲೆ ನಡೆದಿಲ್ಲ ಎಂಬುದರ ಆಧಾರದಲ್ಲಿ ಮುಂದಿನ ರಜೆಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.