ಉತ್ಸವಗಳು, ಸಂಭ್ರಮದ ಬಾಂಗ್ರಾ ನೃತ್ಯಹಾಗೂ ಗೋಧಿ ಉತ್ಪಾದನೆಗೆ ಹೆಸರಾಗಿದ್ದ ಪಂಜಾಬ್ ಇತ್ತೀಚೆಗೆ ಮಾದಕ ವ್ಯಸನಿಗಳ ರಾಜ್ಯ ಎಂಬ ಕುಖ್ಯಾತಿಗೆ ಒಳಗಾಗಿದೆ. ಸದ್ಯ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಡ್ರಗ್ ಮಾಫಿಯಾ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ದೇಶದ ಬೇರಾವುದೇ ರಾಜ್ಯದಲ್ಲಿರದಷ್ಟು ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಮಾಫಿಯಾ ಹಾಗೂ ಡ್ರಗ್ಸ್ ಸೇವನೆ ಪಂಜಾಬ್‌ನಲ್ಲಿರುವುದೇಕೆ? ಅಲ್ಲಿಗೆ ಡ್ರಗ್ಸ್ ಎಲ್ಲಿಂದ ಬರುತ್ತದೆ? ಅಮರಿಂದರ್ ಸಿಂಗ್ ಈಗೇನು ಮಾಡಲು ಹೊರಟಿದ್ದಾರೆ? ಈ ಕುರಿತ ಮಾಹಿತಿ ಇಲ್ಲಿದೆ.
ತಲೆತಲಾಂತರದ ದಂಧೆ
ಪಂಜಾಬಿನಲ್ಲಿ ಡ್ರಗ್ಸ್ ವ್ಯವಹಾರ ಎಂಬುದು ಇತ್ತೀಚಿನದಲ್ಲ. ಇದು ತಂದೆಯಿಂದ ಮಗನಿಗೆ ತಲೆತಲಾಂತರದಿಂದ ಬಳುವಳಿಯಾಗಿ ಬಂದ ದಂಧೆ! ಮಾದಕ ವಸ್ತು ಮಾರಾಟ ಮತ್ತು ಸಾಗಣೆ ದಂಧೆಯು ಪಂಜಾಬಿನ ಹಲವಾರು ಕುಟುಂಬಗಳಿಗೆ ಉದ್ಯೋಗವಾಗಿದೆ. ಪಂಜಾಬ್‌ಗೆ 553 ಕಿ.ಮೀ. ಉದ್ದದ ಪಾಕಿಸ್ತಾನ ಗಡಿಯಿದೆ. ಈ ಪ್ರದೇಶದ ಹಲವು ಭಾಗಗಳಲ್ಲಿ ತಲೆತಲಾಂತರದಿಮದ ಸಾವಿರಾರು ಕುಟುಂಬಗಳು ಡ್ರಗ್ಸ್ ಮಾರಾಟವನ್ನೇ ಉದ್ಯೋಗವಾಗಿಸಿಕೊಂಡಿವೆ.
ಗಡಿಭಾಗಕ್ಕೆ ಹೊಂದಿಕೊಂಡಿರುವ ಗ್ರಾಮಸ್ಥರ ಪ್ರಮುಖ ಉದ್ಯೋಗ ಕೃಷಿ ಮತ್ತು ಡ್ರಗ್ ಮಾಫಿಯಾ. ಗಡಿಯಲ್ಲಿ ಸರಿಯಾದ ಬೇಲಿ ನಿರ್ಮಿಸಿದರೆ ಇದನ್ನು ತಡೆಯಬಹುದು. ಆದರೆ, ಪಂಜಾಬಿನ ಗಡಿಭಾಗಕ್ಕೆ ಹೊಂದಿರುವ ಎಲ್ಲಾ ಪ್ರದೇಶದಲ್ಲೂ ಬೇಲಿ ಇಲ್ಲ. ರಾಬಿ, ಸಟ್ಲಜ್ ನದಿಗಳು ಅಡ್ಡಲಾಗಿವೆ. ಇದೇ ಕಳ್ಳಸಾಗಾಣಿಕೆದಾರರ ಪ್ರಮುಖ ದ್ವಾರ. ಇವರಿಗೆ ಅಲ್ಲಿನ ಗ್ರಾಮಸ್ಥರ ಸಹಕಾರವೂ ಇದೆ.
ಇಲ್ಲಿನ ಡ್ರಗ್ಸ್ ವ್ಯಸನಿಗಳಿಗೆ ದಿನಕ್ಕೆ 1400 ರೂ. ಬೇಕು!
ಪಂಜಾಬ್‌ನ ಮಾದಕ ವ್ಯಸನಿಗಳು ತಿಂಗಳಿಗೆ 6,000-20,000 ಸಾವಿರ ಸಂಬಳ ಗಳಿಸುತ್ತಿದ್ದರೆ, ದಿನವೊಂದಕ್ಕೆ ಕನಿಷ್ಠ ೧,೪೦೦ ರು.ಡ್ರಗ್‌ಗಾಗಿ ವ್ಯಯ ಮಾಡುತ್ತಾರೆ. ಇಷ್ಟೊಂದು ಹಣದ ಮೂಲ ಏನು ಎಂದರೆ ಮತ್ತದೇ ಡ್ರಗ್ಸ್ ಕಳ್ಳಸಾಗಾಣಿಕೆ.
ಹೆಚ್ಚಿನ ವ್ಯಸನಿಗಳು ಸಣ್ಣ ಪ್ರಮಾಣದ ಕಳ್ಳಸಾಗಾಣಿಕಾ ಜಾಲದಲ್ಲಿ ಕೆಲಸ ಮಾಡಿ ಹಣ ಗಳಿಸುತ್ತಿರುತ್ತಾರೆ. ಅವರು ಮಾದಕ ದ್ರವ್ಯ ಜಾಲಗಳಿಂದ ಡ್ರಗ್ಸ್ ಕೊಂಡುಕೊಂಡು ಮತ್ತೊಂದು ಕಡೆ ಮಾರುತ್ತಾರೆ. ಈ ಮೂಲಕ ಪಂಜಾಬ್‌ನಲ್ಲಿ ಡ್ರಗ್ಸ್ ಮಾಫಿಯಾ ಜಾಲ ಮತ್ತಷ್ಟು ವಿಸ್ತಾರಗೊಂಡಿದೆ. ರಾಜ್ಯದಲ್ಲಿ ಡ್ರಗ್ಸ್ ಮೇಲೆ ಅವಲಂಬಿತರಾಗಿರುವ ಮಂದಿ ಒಟ್ಟಾರೆ ದಿನವೊಂದಕ್ಕೆ 20 ಕೋಟಿ ರು. ಖರ್ಚು ಮಾಡುತ್ತಾರೆ.
ಪಂಜಾಬ್ ಹೀಗಾಗಲು ಏನು ಕಾರಣ?
ಪಾಕ್ ಕೈವಾಡ: ಪಾಕಿಸ್ತಾನದ ಗಡಿಗೆ ಪಂಜಾಬ್ ಹೊಂದಿಕೊಂಡಿದ್ದು ಬಹುತೇಕ ಮಾದಕ ದ್ರವ್ಯ ಅಲ್ಲಿಂದ ಪೂರೈಕೆಯಾಗುತ್ತಿದೆ. ಗುಪ್ತಚರ ಇಲಾಖೆ ಪ್ರಕಾರ ಪಾಕಿಸ್ತಾನ ಉದ್ದೇಶಪೂರ್ವಕವಾಗಿ ಡ್ರಗ್ಸ್ ಸರಬರಾಜುದಾರರಿಗೆ ಬೆಂಬಲ ನೀಡುತ್ತಿದೆ.
ಅದಕ್ಷತೆ: ಕಳ್ಳದಂಧೆಯಲ್ಲಿ ಪೊಲೀಸರು ಹಾಗೂ ಅಧಿಕಾರಿಗಳೇ ಶಾಮೀಲಾಗಿರುವ ಕಾರಣ ಗಡಿ ಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಸರಿಯಾದ ಪರಿಶೀಲನೆ ನಡೆಯಲ್ಲ. ಹಾಗಾಗಿ ರಾಜ್ಯದೊಳಗೆ ಡ್ರಗ್ಸ್ ಸಾಗಾಣಿಕೆ ಮತ್ತು ಮಾರಾಟ ಸುಲಭವಾಗಿದೆ.
ಉಗ್ರರ ಹಣದ ಮೂಲ: ಉಗ್ರರು ಹಣ ಗಳಿಕೆಗಾಗಿ ಗಡಿಭಾಗದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುವುದು ಜಗತ್ತಿನೆಲ್ಲೆಡೆ ಇದೆ. ಹಾಗೆಯೇ ಪಂಜಾಬಿನಲ್ಲೂ ಇದೆ.
ಸುಲಭದ ಉದ್ಯೋಗ: ಮಾದಕ ದ್ರವ್ಯ ಜಾಲ ಅತಿ ಹೆಚ್ಚು ಆದಾಯ ಗಳಿಸಬಹುದಾದ
ಸುಲಭ ವಿಧಾನ. ಹಾಗಾಗಿ ಜನರೂ ಈ ಮಾಫಿಯಾಕ್ಕೆ ಸೇರುತ್ತಾರೆ. ಅಫ್ಘಾನಿಸ್ತಾನದಿಂದ ಬಂದ ೧ ಕೆ.ಜಿ. ಹೆರಾಯಿನ್ ಅನ್ನು ಪಾಕಿಸ್ತಾನದಲ್ಲಿ ಮಾರಿದರೆ ೧ ಲಕ್ಷ ರು. ಗಳಿಸಬಹುದು. ಅದನ್ನೇ ಭಾರತದಲ್ಲಿ ಮಾರಿದರೆ ೩೦-೩೫ ಲಕ್ಷ ರು. ಗಳಿಸಬಹುದು. ಇದನ್ನೇ ಭಾರತದ ಇತರೆ ಭಾಗಗಳಲ್ಲಿ ಮಾರಾಟ ಮಾಡಿದರೆ ೧ ಕೋಟಿಗೂ ಅಧಿಕ ಹಣ ಗಳಿಸಬಹುದು. ವಿದೇಶಗಳಿಗೆ ಮಾರಾಟ ಮಾಡಿದರೆ ೪-೫ ಕೋಟಿ ಗಳಿಸಬಹುದು.
ರಾಜಸ್ಥಾನದಿಂದಲೂ ಪೂರೈಕೆ: ಪಂಜಾಬ್‌ನ ಡ್ರಗ್ಸ್ ಚಟಕ್ಕೆ ಪಾಕ್‌ವೊಂದೇ ಕಾರಣವಲ್ಲ. ಉತ್ತರಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಸ್ಥಳೀಯವಾಗಿ ಹೆರಾಯಿನ್ ಕೈಗಾರಿಕೆಗಳೇ ಇವೆ. ಅಲ್ಲಿಂದ ವಿಧವಿಧದ ಡ್ರಗ್ಸ್‌ನ್ನು ಪಂಜಾಬ್‌ಗೆ ಪೂರೈಕೆ ಮಾಡಲಾಗುತ್ತದೆ.
ಪಾಪ್ ಸಂಸ್ಕೃತಿ:ಪಂಜಾಬ್ ಶ್ರೀಮಂತ ಹಾಗೂ ಸ್ವೇಚ್ಛೆಯ ರಾಜ್ಯ. ಪಾಶ್ಚಾತ್ಯ ಸಂಸ್ಕೃತಿ ಇಲ್ಲಿ ಮಾದಕ ವ್ಯಸನವನ್ನು ಸಮೂಹ ಸನ್ನಿಯಾಗಿಸಿದೆ. ಒತ್ತಡ, ಖಿನ್ನತೆ, ಒಂಟಿತನ, ನಿರುದ್ಯೋಗ ಅಲ್ಲಿನ ಯುವ ಜನತೆಯನ್ನು ವ್ಯಸನಿಗಳಾಗುವಂತೆ ಮಾಡಿದೆ.
ಡ್ರಗ್ಸ್‌ನಿಂದ ಪಾಕಿಸ್ತಾನಕ್ಕೆ 7,500 ಕೋಟಿ!
ಪಂಜಾಬಿಗೆ ಬರುವ ಹೆಚ್ಚು ಹೆರಾಯಿನ್ ಪಾಕಿಸ್ತಾನ ಮೂಲಕ ಗಡಿಭಾಗದಿಂದ ಸರಬರಾಜಾಗುತ್ತದೆ. ಹಾಗಾಗಿ ಪಂಜಾಬ್ ಮಾದಕ ವ್ಯಸನದ ರಾಜ್ಯವಾಗುತ್ತಿರುವ ಹಿಂದೆ ಪಾಕಿಸ್ತಾನದ ಕೈವಾಡವಿದೆಯೆಂದು ಹೇಳಲಾಗುತ್ತಿದೆ. ಅಲ್ಲ ದೆ ನೂತನ ಅಧ್ಯಯನದ ಪ್ರಕಾರ ಪಂಜಾಬ್‌ನಲ್ಲಿ ಪ್ರತಿ ವರ್ಷ ೭,೫೦೦ ಕೋಟಿ ರು. ಮೊ ತ್ತದ ಮಾದಕ ದ್ರವ್ಯವನ್ನು ಸೇವನೆ ಮಾಡಲಾಗುತ್ತಿದ್ದು, ಆ ಹಣ ಪಾಕಿಸ್ತಾನ ಸೇರುತ್ತಿದೆ ಎನ್ನಲಾಗುತ್ತಿದೆ.
ಈಗೇಕೆ ಹೆಚ್ಚು ಸುದ್ದಿಯಾಗುತ್ತಿದೆ?
ಪಂಜಾಬ್ ಮಾದಕ ವ್ಯಸನಿಗಳ ರಾಜ್ಯ ಎನಿಸಿಕೊಂಡು ಹಲವು ವರ್ಷಗಳೇ ಕಳೆದಿವೆ. ಆದರೆ ಇತ್ತೀಚೆಗೆ ಅಲ್ಲಿನ ಸರ್ಕಾರ ಡ್ರಗ್ ಮಾಫಿಯಾ ತೊಲಗಿಸಲು ಕಠಿಣ ಕ್ರಮಕ್ಕೆ ಮುಂದಾಗಿದೆ. ಕಾರಣ ಕಳೆದ ಒಂದು ತಿಂಗಳಲ್ಲಿ ಮಾದಕ ವ್ಯಸನದಿಂದಾಗಿ 23 ಜನರು ಸಾವನ್ನಪ್ಪಿದ್ದಾರೆ. ಪಂಜಾಬಿನ ಪ್ರತಿ ಕುಟುಂಬದ ಮೂರನೇ ಎರಡರಷ್ಟು ಜನರು ಮಾದಕ ವ್ಯಸನಿಗಳಾಗಿದ್ದಾರೆ ಎಂದು ಹೇಳಲಾಗುತ್ತದೆ.
ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ 15-35 ವರ್ಷದೊಳಗಿನ 8,60,000 ಯುವಕರು ಮಾದಕ ವಸ್ತುಗಳ ವ್ಯಸನಿಗಳಾಗಿದ್ದಾರೆ. ಇದು ರಾಜ್ಯವನ್ನು ಆತಂಕಕ್ಕೀಡು ಮಾಡಿದೆ. ಅದಕ್ಕಿಂತ ಮುಖ್ಯವಾಗಿ, ಪಂಜಾಬ್ ಎಲ್ಲಾ ವಿಧದ ಮಾಧಕ ದ್ರವ್ಯ ಸಾಗಣೆಗೆ ಹೆದ್ದಾರಿಯಂತೆ ಕೆಲಸ ಮಾಡುತ್ತಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಪ್ರಕಾರ ೨೦೧೪ರಲ್ಲಿ ಭಾರತದಲ್ಲಿ 29,923 ಡ್ರಗ್ಸ್ ಕಳ್ಳಸಾಗಾಣಿಕೆ ಪ್ರಕರಣಗಳು ದಾಖಲಾಗಿವೆ. 2004 ಕ್ಕೆ ಹೋಲಿಸಿದರೆ ಇದು ಶೇ.70 ರಷ್ಟು ಹೆಚ್ಚಾಗಿದೆ.
ಪಂಜಾಬ್‌ವೊಂದರಲ್ಲಿಯೇ 14,483 ಪ್ರಕರಣ ದಾಖಲಾಗಿವೆ. ಹೀಗಾಗಿ ಇದನ್ನು ಮಟ್ಟಹಾಕಲೇಬೇಕೆಂದು ಸರ್ಕಾರ ಹೊರಟಿದೆ. ಸರ್ಕಾರಿ ನೌಕರರಿಗೆ ಕಡ್ಡಾಯ ಡೋಪಿಂಗ್ ಪರೀಕ್ಷೆ ಇತ್ತೀಚೆಗೆ ರಾಜ್ಯದಲ್ಲಿ ಮಾದಕ ದ್ರವ್ಯ ಮಾರಾಟ ಹಾಗೂ ಸಾಗಣೆ ವಿಪರೀತ ಪ್ರಮಾಣದಲ್ಲಿ ಹರಡಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ರಾಜ್ಯದ 3.25 ಲಕ್ಷ ಸರ್ಕಾರಿ ಉದ್ಯೋಗಿಗಳಿಗೆ ಉದ್ದೀಪನ ಪರೀಕ್ಷೆ ಮಾಡಿಸುವುದು ಕಡ್ಡಾಯ ಎಂಬ ನಿಯಮ ರೂಪಿಸಿದ್ದಾರೆ. ಕೇವಲ ಸರ್ಕಾರಿ ಉದ್ಯೋಗಿಗಳು ಮಾತ್ರವಲ್ಲದೆ ಪೊಲೀಸ್ ಅಧಿಕಾರಿಗಳೂ ಕೂಡ ಕಾಲಕಾಲಕ್ಕೆ ಕಡ್ಡಾಯವಾಗಿ ಉದ್ದೀಪನ ಮದ್ದು ಪರೀಕ್ಷೆಗೆ ಒಳಗಾಗಬೇಕು ಎಂಬ ನಿಯಮ ರೂಪಿಸಲು ಮುಂದಾಗಿದ್ದಾರೆ.
ಡ್ರಗ್ಸ್ ದಂಧೆಯಲ್ಲಿ ಸಿಕ್ಕಿಬಿದ್ದವರಿಗೆ ಗಲ್ಲು!
ಡ್ರಗ್ಸ್ ದಂಧೆಯಿಂದ ಜನರನ್ನು ವಿಮುಖವಾಗಿಸಲು ಪಂಜಾಬ್ ಸರ್ಕಾರ ಡ್ರಗ್ಸ್ ಕಳ್ಳಸಾಗಾಣಿಕೆದಾರರಿಗೆ ಮರಣ ದಂಡಣೆ ವಿಧಿಸಬಹುದಾದ ಕಠಿಣ ಕಾನೂನು ಜಾರಿಗೆ ತರಲು ಮುಂದಾಗಿದೆ. ಮಾದಕ ವಸ್ತು ಕಳ್ಳ ಸಾಗಣೆ ದಂಧೆ ನಡೆಸುವವರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಕೋರಿ ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಸಚಿವ ಸಂಪುಟ ಸಭೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ನಿರ್ಧರಿಸಿದೆ.
-ಕೀರ್ತಿ ತೀರ್ಥಹಳ್ಳಿ
