ಧಾರ​ವಾ​ಡ :  ರೈಲ್ವೆ ಗೇಟ್‌ ಕೀಪರ್‌ ನಿರ್ಲಕ್ಷ್ಯದಿಂದ ಸಂಭವಿಸುತ್ತಿದ್ದ ಭಾರಿ ಅನಾಹುತವೊಂದು ರೈಲ್ವೆ ಎಂಜಿನ್‌ ಚಾಲಕನ ಸಮಯ ಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ತಪ್ಪಿದ ಘಟನೆ ಇಲ್ಲಿನ ಶ್ರೀನಗರ ಬಳಿಯ ರೈಲ್ವೆ ಗೇಟ್‌ನಲ್ಲಿ ಭಾನು​ವಾರ ನಡೆದಿದೆ. 

ಕರ್ನಾಟಕ ವಿಶ್ವವಿದ್ಯಾಲಯದ ಪ್ರವೇಶ ದ್ವಾರದಲ್ಲಿ ಬೆಳಗ್ಗೆ ಗೂಡ್ಸ್‌ ರೈಲ್ವೆ ತೆರಳಿದ ತಕ್ಷಣ ರೈಲ್ವೆ ಗೇಟ್‌ ಕೀಪರ್‌, ಗೇಟ್‌ ತೆರೆದಿದ್ದಾನೆ. ಆಗ ವಾಹನ ಸವಾರರು ತೆರಳುವ ವೇಳೆಗೆ ಏಕಾಏಕಿ ಅದೇ ಟ್ರ್ಯಾಕ್‌ನಲ್ಲಿ ರೈಲ್ವೆ ಎಂಜಿನ್‌ ಬಂದಿದೆ. ಇದನ್ನು ನೋಡಿದ ವಾಹನ ಸವಾರರು ಹಾಗೂ ಜನ ಹೌಹಾರಿದರು. ರೈಲ್ವೆ ಎಂಜಿನ್‌ ಚಾಲಕ ತಕ್ಷಣ ಎಂಜಿನ್‌ ನಿಲ್ಲಿಸಿದ್ದಾನೆ.

ಆತನ ಸಮಯಪ್ರಜ್ಞೆಯಿಂದ ಸಂಭವಿಸಬಹುದಾದ ದೊಡ್ಡ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಕಳೆದ 6 ತಿಂಗಳ ಹಿಂದೆಷ್ಟೇ ಇದೇ ರೈಲ್ವೆಗೇಟ್‌ನಲ್ಲಿ, ಗೇಟ್‌ ತೆರೆದಿದ್ದಾಗಲೇ ರೈಲ್ವೆ ಎಂಜಿನ್‌ ಸಾಗಿತ್ತು. ಈ ವೇಳೆ ಬಸ್‌ ಚಾಲಕ ತೋರಿದ ಜಾಗರೂಕತೆಯಿಂದ ಅನಾಹುತ ತಪ್ಪಿತ್ತು.