ಕಾರವಾರ (ಮೇ. 16):  ಕಣ್ಣು ಹಾಯಿಸುವಷ್ಟುಉದ್ದಕ್ಕೂ ಜಲ ರಾಶಿ. ಅರಬ್ಬಿ ಸಮುದ್ರದ ಮಡಿಲಲ್ಲೇ ಇರುವ ಊರು. ಆದರೆ, ಬೇಸಿಗೆ ಬಂತೆಂದರೆ ಕುಡಿಯಲು ಗುಟುಕು ನೀರೂ ಸಿಗಲ್ಲ. ಇಂತಹ ಸಂದರ್ಭದಲ್ಲಿ ಸಮುದ್ರದ ಅಲೆಗಳು ಅಪ್ಪಳಿಸುವ ಬಂಡೆಯ ಮೇಲ್ಭಾಗದ ಗುಡ್ಡದ ಬುಡದಲ್ಲಿ ಉಕ್ಕುವ ಕಿರು ಜಲಧಾರೆಯೇ ಇಡೀ ಊರಿನ ಜನರಿಗೆ ಜೀವ ಜಲ.

ಇದು, ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬೀರಕೋಡಿ ಊರಿನ ಕಥೆ. ಈ ಊರಿನ ಜನರು ಜಲಧಾರೆಗಾಗಿ ಮೈಲುದ್ದ ಮೆರವಣಿಗೆ ನಡೆಸುತ್ತಾರೆ. ನೆತ್ತಿಯ ಮೇಲೆ ಸುಡುವ ಸೂರ್ಯ, ಪಾದದ ಕೆಳಗೆ ಚುರುಗುಟ್ಟುವ ಕಾದ ಮರಳು. ಆದರೂ ನೀರಿಗಾಗಿ ಅನುಭವಿಸುವ ಬವಣೆ ಹೇಳತೀರದು.

ಊರಿನಲ್ಲಿ 40ಕ್ಕೂ ಹೆಚ್ಚು ಮನೆಗಳಿವೆ. 200ರಷ್ಟುಜನಸಂಖ್ಯೆ ಇದೆ. ಮುಸ್ಲಿಂ ಸಮುದಾಯದ ಜನಸಂಖ್ಯೆ ಹೆಚ್ಚಿದೆ. ಎಲ್ಲರೂ ಇದೇ ನೀರನ್ನೇ ಅವಲಂಬಿಸಿದ್ದಾರೆ. ನಸುಕಿನ 3ಗಂಟೆಯಿಂದಲೇ ಬಿಂದಿಗೆ ಹಿಡಿದ ಮಹಿಳೆಯರು, ಪುರುಷರು, ಮಕ್ಕಳು ಗುಡ್ಡದ ಬುಡದಲ್ಲಿ ಉಕ್ಕುವ ಜಲಧಾರೆಗೆ ಮೆರವಣಿಗೆ ಮಾಡುತ್ತಾರೆ.

ಅಷ್ಟಕ್ಕೂ ಇದು ಕೆಲವರ ಮನೆಯಿಂದ ಒಂದು ಕಿ.ಮೀ., ಒಂದೂವರೆ ಕಿ.ಮೀ. ದೂರದಲ್ಲಿದೆ. ಆದರೂ ಇಡೀ ಊರಿನ ನೀರಿನ ಮೂಲ ಇದೊಂದೆ ಆಗಿರುವುದರಿಂದ ಇದಕ್ಕೆ ಮುಗಿ ಬೀಳುತ್ತಾರೆ. ಮಹಿಳೆಯರು, ವೃದ್ಧರು ತುಂಬಿದ ಬಿಂದಿಗೆ ಹಿಡಿದು ಮೈಲುದ್ದ ಸುಡು ಬಿಸಿಲಿನಲ್ಲಿ ಕಡಲ ತೀರದ ಕಾದ ಮರಳಿನಲ್ಲಿ ಹೆಜ್ಜೆ ಹಾಕುವುದನ್ನು ನೋಡಿದರೆ ಅಯ್ಯೋ ಎನಿಸದೆ ಇರದು.

ಬೀರಕೋಡಿಯ ಪ್ರತಿ ಮನೆಗೂ ಒಂದೊಂದು ಬಾವಿ ಇದೆ. ಬಾವಿಯಲ್ಲಿ ನೀರಿಗೂ ಕೊರತೆ ಇಲ್ಲ. ಆದರೆ, ಬೇಸಿಗೆ ಬಂತೆಂದರೆ ಇಲ್ಲಿನ ಬಾವಿಯ ನೀರೆಲ್ಲ ಉಪ್ಪು ನೀರಾಗಿ ಪರಿವರ್ತಿತವಾಗುತ್ತದೆ. ಕುಡಿಯುವ ನೀರಿಗೆ ಎಲ್ಲಿಲ್ಲದ ಬರ ತಲೆದೋರುತ್ತದೆ. ಸ್ನಾನ ಮಾಡಲು, ಬಟ್ಟೆತೊಳೆಯಲೂ ಕೂಡ ಬಾವಿಯ ನೀರನ್ನು ಬಳಸಲು ಸಾಧ್ಯವಾಗಲ್ಲ. ಕಾಗಾಲ, ದೇವರಬೋಳೆ, ಮಾಸೂರು, ಲುಕ್ಕೇರಿ ಹೀಗೆ ಕಡಲ ಸಮೀಪದ ಊರಿನಲ್ಲೆಲ್ಲ ಕುಡಿಯುವ ನೀರಿಗೆ ಬರ.

ಕಾಗಾಲದಲ್ಲಿ ನೀರಿನ ಮೂಲವೇ ಇಲ್ಲದಿರುವುದರಿಂದ ಗ್ರಾಪಂನ ಕುಡಿಯುವ ನೀರಿನ ಯೋಜನೆ ಜನರ ನೆರವಿಗೆ ಬರುವುದಿಲ್ಲ. ದೂರದಿಂದ ಪೈಪ್‌ ಲೈನ್‌ ಮೂಲಕ ನೀರು ತರಲು ಗ್ರಾಪಂನಲ್ಲಿ ಅನುದಾನ ಇಲ್ಲ. ಸರ್ಕಾರ ವಿಶೇಷ ಅನುದಾನ ನೀಡಿದರೆ ಅಥವಾ ಕುಡಿಯುವ ನೀರಿನ ಯೋಜನೆಯನ್ನು ಮಂಜೂರು ಮಾಡಿದರೆ ಮಾತ್ರ ಜನರಿಗೆ ನೀರು ಕೊಡಲು ಸಾಧ್ಯ ಎನ್ನುವುದು ಗ್ರಾಮ ಪಂಚಾಯಿತಿ ಸದಸ್ಯರು ಅಭಿಪ್ರಾಯಪಡುತ್ತಾರೆ.

ಕುಡಿಯುವದಕ್ಕಷ್ಟೆಅಲ್ಲ, ಬಟ್ಟೆತೊಳೆಯಲೂ ಇದೇ ನೀರನ್ನು ಬಳಸುತ್ತಾರೆ. ಇಡೀ ಬೀರಕೋಡಿ ಊರಿನ ವಾಷಿಂಗ್‌ ಇದಾಗಿದೆ. ಯಾವುದೇ ಸಮಯದಲ್ಲಿ ಹೋಗಿ ನೋಡಿದರೂ ಊರಿನ ಮಹಿಳೆಯರು, ಮಕ್ಕಳು ಇಲ್ಲಿ ಬಟ್ಟೆಒಗೆಯುತ್ತಿರುವುದು ಕಾಣ ಸಿಗುತ್ತದೆ. ಜತೆಗೆ ಚಿಕ್ಕ ಮಕ್ಕಳು ಹಾಗೂ ಪುರುಷರ ಬಾತ್‌ ರೂಮ್‌ ಕೂಡ ಇದಾಗಿದೆ.

ಬೀರಕೋಡಿಯಲ್ಲಿ ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಿಂದುಗಳು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಆದರೆ, ಇವರೆಲ್ಲರನ್ನು ಬೆಸೆದಿರುವುದು ಈ ಜಲಧಾರೆ. ಹೀಗಾಗಿ ಇದೊಂದು ಭಾವೈಕ್ಯತೆಯ ತಾಣವೂ ಆಗಿದೆ.

ಇದೆ ಜಲಧಾರೆಗೆ ಪೈಪ್‌ ಲೈನ್‌ ಅಳವಡಿಸಿ ಊರಿನ ನಡುವೆ ನೀರು ಬೀಳುವಂತೆ ಮಾಡಿದಲ್ಲಿ ಎಲ್ಲರಿಗೂ ಅನುಕೂಲವಾಗುತ್ತಿತ್ತು. ಸ್ಥಳೀಯ ಗ್ರಾಮ ಪಂಚಾಯಿತಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಕೆಲವರು ಅಭಿಪ್ರಾಯಪಡುತ್ತಾರೆ.

- ವಸಂತ ಕುರ್ಮಾ ಕತಗಾಲ