ಬೆಂಗಳೂರು :  ಕನ್ನಡದ ಮೇರು ನಟ ಡಾ.ರಾಜಕುಮಾರ್‌ ಅವರ ಸಮಾಧಿ ಸ್ಥಳವನ್ನು ಪ್ರತ್ಯೇಕವಾಗಿ ಇರಲು ಬಿಡಬೇಕಿತ್ತು. ಆದರೆ, ರಾಜಕಾರಣಿಗಳು ಸಮಾಧಿ ಸ್ಥಳಕ್ಕೆ ಬೇರೆ ಬಣ್ಣ ಕೊಟ್ಟು ಏನೇನೋ ಮಾಡಲು ಹೊರಟಿದ್ದಾರೆ ಎಂದು ಕವಿ ಡಾ.ಕೆ.ಎಸ್‌.ನಿಸಾರ್‌ ಅಹಮದ್‌ ಬೇಸರ ವ್ಯಕ್ತಪಡಿಸಿದರು.

ತನ್ಮೂಲಕ ರಾಜಕುಮಾರ್‌ ಸಮಾಧಿ ಸ್ಥಳದಲ್ಲಿ ಚಿತ್ರರಂಗದ ಇತರ ಗಣ್ಯರ ಸಮಾಧಿ ನಿರ್ಮಾಣ ಮಾಡುವ ಸರ್ಕಾರದ ಉದ್ದೇಶಕ್ಕೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿ ಬುಧವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಡಾ.ರಾಜ್‌ಕುಮಾರ್‌ 91ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಚಿತ್ರರಂಗ ಹಾಗೂ ಈ ಕನ್ನಡ ನಾಡು ಇರುವವರೆಗೂ ಡಾ.ರಾಜ್‌ಕುಮಾರ್‌ ಇರುತ್ತಾರೆ. ಅವರ ಸಮಾಧಿ ಸ್ಥಳವನ್ನು ಪ್ರತ್ಯೇಕವಾಗಿ ಬಿಡಬೇಕಿತ್ತು. ರಾಜಕಾರಣಿಗಳು ಆ ಸ್ಥಳಕ್ಕೆ ಬೇರೆ ಬಣ್ಣ ಕೊಟ್ಟು ಏನೋ ಮಾಡಲು ಹೊರಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಡಾ.ರಾಜ್‌ಕುಮಾರ್‌ ಅವರದು ಮೇರು ವ್ಯಕ್ತಿತ್ವ. ಅವರು ಈ ನಾಡಿನ ನೆಲ, ಜಲ, ಭಾಷೆಯಲ್ಲಿ ಬೆರೆತ್ತಿದ್ದಾರೆ. ಕನ್ನಡ ಭಾಷೆಗೆ ವಿಶ್ವಮಾನ್ಯತೆ ತಂದುಕೊಟ್ಟವರಲ್ಲಿ ಕುವೆಂಪು ಹಾಗೂ ಡಾ.ರಾಜ್‌ ಅಗ್ರಗಣ್ಯರು. ಅನ್ಯಭಾಷಿಕರ ಮನದಲ್ಲಿ ಕನ್ನಡ ಭಾಷೆ ನೆಲೆಗೊಳಿಸಿದ ಹೆಗ್ಗಳಿಕೆ ರಾಜ್‌ ಕುಮಾರ್‌ಗೆ ಸಲ್ಲುತ್ತದೆ. ಅಂಥವರ ಸ್ನೇಹ ಪಡೆದ ತಾವೇ ಧನ್ಯ ಎಂದ ಅವರು, ಡಾ.ರಾಜ್‌ ಅವರೊಂದಿಗಿನ ಒಡನಾಟದ ಹಲವು ಘಟನೆಗಳನ್ನು ಸ್ಮರಿಸಿದರು.