ಕಣ್ಣುಗಳಲ್ಲೇ ಡಾ.ರಾಜ್’ರನ್ನು ಹೆದರಿಸಿದ್ದ ನಟಿ ಶ್ರೀ ದೇವಿ

First Published 26, Feb 2018, 8:31 AM IST
Dr Raj Also Fan Of Sridevi
Highlights

ಶ್ರೀದೇವಿ ನಟನೆಯ ಚಿತ್ರವೊಂದಕ್ಕೆ ಚಾಂದಿನಿ ಅಂತ ಹೆಸರಿಟ್ಟಾಗ ಅದು ಸಿನಿಮಾದ ಹೆಸರಲ್ಲವೇ ಅಲ್ಲ, ಶ್ರೀದೇವಿಯ ಅನ್ವರ್ಥನಾಮ ಅಂದುಕೊಂಡೇ ಸಿನಿ ರಸಿಕರು ಆ ಸಿನಿಮಾವನ್ನು ಮುಗಿಬಿದ್ದು ನೋಡಿದರು. ಜಗದೇಕ ವೀರುಡು ಅತಿಲೋಕ ಸುಂದರಿ ಸಿನಿಮಾ ಬಂದಾಗ, ಮೊದಲ ಅರ್ಥ ಸುಳ್ಳಾದರೂ, ಆ ಟೈಟಲ್ಲಿನ ದ್ವಿತೀಯಾರ್ಧ ಸರಿಯಾಗಿದೆ ಅಂದುಕೊಂಡೇ ಜನ ಸಿನಿಮಾ ನೋಡಿದರು.

ಜೋಗಿ

ಬೆಂಗಳೂರು : ಶ್ರೀದೇವಿ ನಟನೆಯ ಚಿತ್ರವೊಂದಕ್ಕೆ ಚಾಂದಿನಿ ಅಂತ ಹೆಸರಿಟ್ಟಾಗ ಅದು ಸಿನಿಮಾದ ಹೆಸರಲ್ಲವೇ ಅಲ್ಲ, ಶ್ರೀದೇವಿಯ ಅನ್ವರ್ಥನಾಮ ಅಂದುಕೊಂಡೇ ಸಿನಿ ರಸಿಕರು ಆ ಸಿನಿಮಾವನ್ನು ಮುಗಿಬಿದ್ದು ನೋಡಿದರು. ಜಗದೇಕ ವೀರುಡು ಅತಿಲೋಕ ಸುಂದರಿ ಸಿನಿಮಾ ಬಂದಾಗ, ಮೊದಲ ಅರ್ಥ ಸುಳ್ಳಾದರೂ, ಆ ಟೈಟಲ್ಲಿನ ದ್ವಿತೀಯಾರ್ಧ ಸರಿಯಾಗಿದೆ ಅಂದುಕೊಂಡೇ ಜನ ಸಿನಿಮಾ ನೋಡಿದರು. ಶೇಖರ್ ಕಪೂರ್ ನಿರ್ದೇಶನದ ಮಿಸ್ಟರ್ ಇಂಡಿಯಾ ಚಿತ್ರದಲ್ಲಿ ನಾಯಕ ಅನಿಲ್ ಕಪೂರ್ ಮ್ಯಾಜಿಕ್ ವಾಚು ಕಟ್ಟಿಕೊಂಡು ಆಗೀಗ ಕಣ್ಮರೆಯಾಗುವ ವಿದ್ಯೆ ಕಲಿತಿದ್ದರೆ, ಕಾಲವನ್ನೇ ಮರೆಸುವಂಥ ಕಲೆಯನ್ನು ಶ್ರೀದೇವಿ ಮೈಗೂಡಿಸಿಕೊಂಡಿದ್ದೇನೆ ಅನ್ನುವುದನ್ನು ತೋರಿಸಿಕೊಟ್ಟರು.

ಎಂಬತ್ತರ ದಶಕದ ಮಿಂಚು ಸುಂದರಿ ಎಂದೇ ಕರೆಸಿಕೊಂಡ ಶ್ರೀದೇವಿ, ಕನಸಿನ ಕನ್ಯೆ ಹೇಮಾಮಾಲಿನಿ ಮಾಜಿಯಾಗುವಂತೆ ಮಾಡಿದವರು. ಶ್ರೀದೇವಿ ಕಾಲಿಟ್ಟದ್ದೇ ತಡ, ಬಾಲಿವುಡ್ಡಿನ ಮಹಾನ್ ಸುಂದರಿಯರೆಲ್ಲ ಠೇವಣಿ ಕಳಕೊಂಡು ಕಂಗಾಲಾಗಿ ಕೂತುಬಿಟ್ಟರು. ಹಿಮ್ಮತ್‌ವಾಲಾ ಚಿತ್ರದಲ್ಲಿ ಶ್ರೀದೇವಿ ನರ್ತಿಸಿದ್ದನ್ನು ನೋಡಿದ ಜಗತ್ತು ಆಕೆಯನ್ನು ಸಿಡಿಲ ತೊಡೆಗಳ ಸುಂದರಿ ಎಂದು ಬಣ್ಣಿಸಿತು. ಜಿತೇಂದ್ರನಂಥ ಸಪ್ಪೆ ನಟ ಕೂಡ ಸೂಪರ್‌ಸ್ಟಾರ್ ಥರ ಕಾಣುವಂತೆ ಮಾಡಿದವರು ಶ್ರೀದೇವಿ.

ಒಬ್ಬ ಯಶಸ್ವಿ ನಾಯಕನ ಹಿಂದೆ ಒಬ್ಬಳು ನಾಯಕಿ ಇರುತ್ತಾಳೆ ಎಂಬುದನ್ನು ಸಾಬೀತು ಮಾಡಿದ ಶ್ರೀದೇವಿ ನಟಿಸಿದ ಚಿತ್ರಗಳೆಲ್ಲ ಪ್ರಚಂಡ ಯಶಸ್ಸು ಕಂಡವು. ಚಾಲ್ -ಬಾಜ್ ಚಿತ್ರದಲ್ಲಿ ನಟಿಸುತ್ತಲೇ ಶ್ರೀದೇವಿ ತಾವಂದುಕೊಂಡಂತೆ ಕೇವಲ ಗ್ಲಾಮರ್ ತಾರೆಯಲ್ಲ, ಆಕೆಯ ಅಂತಃಶಕ್ತಿ ಅಪಾರ ಅನ್ನುವುದನ್ನು ಬಾಲಿವುಡ್ ಕೂಡ ಅರ್ಥಮಾಡಿಕೊಂಡಿತು ಶ್ರೀದೇವಿ ಸೌಂದರ್ಯದ ಖನಿ ಮಾತ್ರ ಆಗಿರಲಿಲ್ಲ. ಆಳವಾದ ಲೋಕಾನುಭವವೂ ಇದೆ. ಆ ಲೋಕಾನುಭವ ಬಂದಿರುವುದು ಆಕೆಯ ನಟನಾ ಪ್ರತಿಭೆಯಿಂದ ಅನ್ನುವುದನ್ನು ಚಿತ್ರರಂಗ ಕಂಡುಕೊಂಡಿತು. ಜಿತೇಂದ್ರ ಜೊತೆಗೆ ನಟಿಸಿದ ಆರೆಂಟು ಚಿತ್ರಗಳ ನಂತರ ಕೂಡ ಆಕೆಗೊಂದು ಸೂಕ್ತವಾದ ಪಾತ್ರವನ್ನು ಸೃಷ್ಟಿಸುವಲ್ಲಿ ಬಾಲಿವುಡ್ ಸೋತಿತು ಎಂದೇ ಹೇಳಬೇಕು.

ಕ್ಷಣಕ್ಷಣಂ ಚಿತ್ರದಲ್ಲಿ ಭಯಗ್ರಸ್ತ ಸುಂದರಿಯಾಗಿ ಮಾತುಮಾತಿಗೆ ದೇವುಡಾ ದೇವುಡಾ ಎಂದು ಹೇಳುವ ಹುಡುಗಿಯನ್ನಾಗಿ ಆಕೆಯನ್ನು ರಾಮಗೋಪಾಲ ವರ್ಮ ತೋರಿಸುವುದಕ್ಕೆ ಎಷ್ಟೋ ವರ್ಷಗಳ ಮೊದಲೇ ಆಕೆಯ ಅತ್ಯುತ್ತಮ ಚಿತ್ರಗಳು ತಮಿಳು, ತೆಲುಗಿನಲ್ಲಿ ಬಂದು ಹೋಗಿದ್ದವು. ಶ್ರೀದೇವಿಯ ಶ್ರೇಷ್ಠ ಚಿತ್ರ ಬಂದದ್ದು ತಮಿಳಿನಲ್ಲೇ. ಬಾಲು ಮಹೇಂದ್ರ, ಭಾರತೀರಾಜ ಮತ್ತು ಬಾಲಚಂದರ್ - ಈ ಮೂರು ‘ಬಿ’ಗಳು ಮಾತ್ರ ಶ್ರೀದೇವಿಯ ಸಾಮರ್ಥ್ಯವನ್ನು ಗರಿಷ್ಠ ಮಟ್ಟಕ್ಕೆ ಹೊರಗೆಳೆದರು. ಮಿಕ್ಕಂತೆ ಆಕೆಯನ್ನು ಭಯಗ್ರಸ್ತ ಹೆಣ್ಣಾಗಿ ತೋರಿಸಿದ್ದು ಭಾರತೀರಾಜ್. ಸಿಗಪ್ಪು ರೋಜಾಕ್ಕಳ್ ಚಿತ್ರದಲ್ಲಿ ಕಮಲ್ ಹಾಸನ್ ಮತ್ತು ಶ್ರೀದೇವಿ ಕಾಣಿಸಿಕೊಂಡು ಮನೋವೈಜ್ಞಾನಿಕ ಥ್ರಿಲ್ಲರ್ ಚಿತ್ರದ ಹೊಸ ಭಾಷ್ಯ ಬರೆದರು.

ಶ್ರೀದೇವಿ ಕೇವಲ ನಟಿಯಷ್ಟೇ ಆಗಿರಲಿಲ್ಲ. ಆಕೆ ಎರಡು ದಶಕದ ಹುಡುಗರ ಪಾಲಿಗೆ ಎಟುಕದ ನಕ್ಷತ್ರವಾಗಿಯೇ ಉಳಿದ ಅಂತರಂಗದ ಗರ್ಲ್‌ಫ್ರೆಂಡ್. ಅದಕ್ಕೇ, 54ನೇ ವಯಸ್ಸಿನಲ್ಲಿ ಶ್ರೀದೇವಿ ತೀರಿಕೊಂಡರೆಂಬ ಸುದ್ದಿ ಬಂದಾಗ ಅಸಂಖ್ಯಾತರು ತಮ್ಮ ಮನೆಯ ಸದಸ್ಯರೊಬ್ಬರು ತೀರಿಕೊಂಡರೇನೋ ಎಂಬಂತೆ ಕಂಗಾಲಾದದ್ದು. ಶ್ರೀದೇವಿ ತಾವೊಬ್ಬರೇ ಸಾಯಲಿಲ್ಲ. ತಮ್ಮನ್ನು ನಿರಂತರವಾಗಿ ಆರಾಧಿಸಿದ ಲಕ್ಷಾಂತರ ಮಂದಿಯ ಮಧುರ ಕ್ಷಣಗಳ ಮೋಂಬತ್ತಿಯನ್ನು ನಂದಿಸಿಬಿಟ್ಟರು. ಡಾ| ರಾಜ್ ಚಿತ್ರವೊಂದರಲ್ಲಿ ನಾಯಕಿಯಾಗಿ ನಟಿಸಬೇಕು ಅನ್ನುವ ಆಸೆ ಶ್ರೀದೇವಿಯವರಿಗಿತ್ತು. ಆ ಕುರಿತು ಮಾತುಕತೆಯೂ ನಡೆದಿತ್ತು.

ಚಿತ್ರವೊಂದಕ್ಕೆ ಆಕೆಯನ್ನು ನಾಯಕಿಯಾಗಿ ಹಾಕಿಕೊಳ್ಳೋಣ ಎಂಬ ಮಾತು ಬಂದಾಗ ರಾಜ್‌ಕುಮಾರ್ ಹೇಳಿದ್ದರಂತೆ: ಶ್ರೀದೇವಿಯವರನ್ನು ಕನ್ನಡಕ್ಕೆ ಕರೆತರಬೇಕು ಅಂತಾದರೆ ಅದಕ್ಕೆ ತಕ್ಕ ಕತೆಯನ್ನು ಮೊದಲು ಹುಡುಕಬೇಕು. ಈ ಕತೆಗೆ ಅವರನ್ನು ಕರೆತರುವುದು ಸರಿ ಅಂತ ನನಗೆ ಅನ್ನಿಸುತ್ತಿಲ್ಲ. ಈ ಕತೆಗೆ ಅಷ್ಟು ಪ್ರಬುದ್ಧವಾದ ನಟಿ ಬೇಕಾಗಿಲ್ಲ. ಅಲ್ಲದೇ, ಅವರ ಕಣ್ಣುಗಳು ನನಗೆ ಗಾಬರಿ ಉಂಟುಮಾಡುತ್ತವೆ. ಯಾವುದಾದರೂ ನಟಿ ತನ್ನ ಕಣ್ಣುಗಳಿಂದಲೇ ನನ್ನನ್ನು ಹೆದರಿಸಿದ್ದರೆ ಅದು ಶ್ರೀದೇವಿ ಒಬ್ಬರೇ. ಪಾರ್ವತಮ್ಮ ಈ ಮಾತುಗಳನ್ನು ಶ್ರೀದೇವಿಯವರ ಪ್ರಸ್ತಾಪ ಬಂದಾಗ ನೆನಪಿಸಿಕೊಂಡಿದ್ದರು.

ಮೂನ್ರಾಂಪಿರೈ ಚಿತ್ರವನ್ನು ನೋಡಿದ ನಂತರ ರಾಜ್‌ಕುಮಾರ್ ಇಡೀ ದಿನ ಮೌನವಾಗಿ ಕೂತಿದ್ದನ್ನೂ ಪಾರ್ವತಮ್ಮ ಹೇಳಿಕೊಂಡಿದ್ದರು. ಶ್ರೀದೇವಿ ನಟಿಸುವಾಗ ತಮ್ಮ ಇಡೀ ದೇಹವನ್ನೂ ಅದ್ಭುತವಾಗಿ ಬಳಸಿಕೊಳ್ಳಬಲ್ಲವರಾಗಿದ್ದರು. ಅಚ್ಚರಿಗೊಳಿಸುವಂಥ ಬಾಡಿ ಲ್ಯಾಂಗ್ವೇಜ್ ಇತ್ತು. ಮೂನ್ರಾಂಪಿರೈ ಚಿತ್ರದಲ್ಲಿ ಮುಗ್ಧತೆ, ಪೆದ್ದುತನ, ತುಂಟತನ ಮತ್ತು ಕೊನೆಯಲ್ಲಿ ಎಲ್ಲವನ್ನೂ ಮರೆಯಬಲ್ಲ ವಿಸ್ಮತಿ - ಇವೆಲ್ಲವನ್ನೂ ತೋರಿಸುವ ಮೂಲಕ ತಮ್ಮ ನಟನಾ ಸಾಮರ್ಥ್ಯವನ್ನು ತಾವೇ ಮೀರಿಬಿಟ್ಟಿದ್ದರು. ಆ ಚಿತ್ರ ಬಂದಾಗ ಬಾಲು ಮಹೇಂದ್ರ ಹೇಳಿದ್ದರು- ನಾನು ಹೇಳಿದ್ದಕ್ಕಿಂತ ನೂರು ಪಟ್ಟು ಸೊಗಸಾಗಿ ನಟಿಸಿದ ಶ್ರೀದೇವಿ ಈ ಚಿತ್ರದ ಯಶಸ್ಸು.

ಅತ್ಯುತ್ತಮ ನಟರು ದೇವರಿದ್ದಂತೆ.ದೇವರು ದಂಡಿಯಾಗಿ ಕೊಡುತ್ತಾನೆ. ಶ್ರೀದೇವಿ ಕೂಡ ಹಾಗೆಯೇ. ಕೇಳಿದ್ದರ ನೂರುಪಟ್ಟು ಕೊಡಬಲ್ಲ ನಟಿ. ಶ್ರೀದೇವಿ ಮದುವೆಯಾಗಿ ಹೋದಾಗ ಚಿತ್ರರಂಗ ಅಷ್ಟೇನೂ ದುಃಖಿಸಲಿಲ್ಲ. ಆಕೆ ಮರಳಿ ಬಂದಾಗ ಚಿತ್ರರಂಗ ಅದೊಂದು ಸಾಮಾನ್ಯ ಚಿತ್ರವಾಗುತ್ತದೆ ಎಂದು ಭಾವಿಸಿತ್ತು. ಆದರೆ ಇಂಗ್ಲಿಷ್ ವಿಂಗ್ಲಿಷ್ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳ ಸಾಕ್ಷಿಪ್ರಜ್ಞೆಯಂತೆ ಕೆಲಸ ಮಾಡಿತು. ಇಂಗ್ಲಿಷ್ ಬರ ದ ಲಕ್ಷಾಂತರ ಹೆಣ್ಮಕ್ಕಳು ಆ ಚಿತ್ರದಲ್ಲಿ ತಮ್ಮನ್ನು ಕಂಡುಕೊಂಡರು.

ಮೂನ್ರಾಂಪಿರೈ ಚಿತ್ರದಲ್ಲೊಂದು ದೃಶ್ಯವಿದೆ. ಚಿತ್ರದ ನಾಯಕಿ ವಿಜಯಲಕ್ಷ್ಮೀ ನೆನಪಿನ ಶಕ್ತಿ ಕಳಕೊಂಡು ನಾಯಕ ಚೀನು ಬಳಿ ಬರುತ್ತಾಳೆ. ಆಕೆಯನ್ನು ಅವನು ಮಗುವಿನಂತೆ ಪೊರೆಯುತ್ತಾನೆ. ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಾನೆ. ಕೊನೆಯಲ್ಲಿ ಆಕೆಗೆ ನೆನಪು ಮರಳಿ ಬರುತ್ತದೆ. ಆಕೆ ತನ್ನನ್ನು ಹುಡುಕಿಕೊಂಡು ಬಂದ ತನ್ನ ಹೆತ್ತವರೊಂದಿಗೆ ಹೊರಟು ಹೋಗುತ್ತಾಳೆ. ಈ ನಡುವೆ ತನಗೇನಾಗಿದೆ ಅನ್ನುವುದು ಆಕೆಗೆ ಮರೆತುಹೋಗಿದೆ.

ಆಕೆ ರೈಲಿನಲ್ಲಿ ಹೋಗುತ್ತಿರುವಾಗ ಓಡೋಡಿ ಬರುವ ಚೀನು, ಆಕೆ ತನ್ನನ್ನು ನೆನಪಿಸಿಕೊಳ್ಳಲಿ ಎಂದುಕೊಂಡು ಅವಳು ವಿಸ್ಮತಿಯಲ್ಲಿದ್ದಾಗ ಮಾಡುತ್ತಿದ್ದ ಚೇಷ್ಟೆಗಳನ್ನು ಮಾಡುತ್ತಾ, ಕೋತಿಯಂತೆ ಕುಣಿಯುತ್ತಾ, ಅಳುತ್ತಾ ರೈಲಿನುದ್ದಕ್ಕೂ ಓಡಿ ಬರುತ್ತಾನೆ. ಆಕೆ ಅವನನ್ನು ಗುರುತಿಸದೇ ಹೊರಟು ಬಿಡುತ್ತಾಳೆ. ಈಗಲೂ ಅದೇ ಆಗಿದೆ. ಶ್ರೀದೇವಿಯನ್ನು ಆರಾಧಿಸಿದ ಲಕ್ಷಾಂತರ ಮಂದಿಯ ಮನಸ್ಸು ಅವರ ಹಿಂದೆ ಚೇಷ್ಟೆ ಮಾಡುತ್ತಾ ಅವರನ್ನು ಮರಳಿ ಕರೆತರಲು ಹವಣಿಸುತ್ತಾ, ಆಕೆ ಮತ್ತೆ ತಮ್ಮತ್ತ ಬರಲಿ ಎಂದು ಹಂಬಲಿಸುತ್ತಾ ಚಿತ್ರವಿಚಿತ್ರವಾಗಿ ವರ್ತಿಸುತ್ತಾ ಕಾಲದ ರೈಲುಗಾಡಿ ಹಿಂದೆ ಓಡುತ್ತಿದೆ. ಶ್ರೀದೇವಿ ವಿಸ್ಮತಿಯಿಂದ ಪಾರಾಗಿ ಯಾರನ್ನೂ ಗುರುತಿಸದೇ ಹೋಗುತ್ತಲೇ ಇದ್ದಾರೆ.

loader