ಬೆಂಗಳೂರು :  ಹಿರಿಯ ವೈದ್ಯ ಲೇಖಕಿ ಲೀಲಾವತಿ ದೇವದಾಸ್‌(88) ಅವರು ಹೃದಯಾಘಾತದಿಂದ ನಗರದ ಬ್ಯಾಪ್ಟಿಸ್ಟ್‌ ಆಸ್ಪತ್ರೆಯಲ್ಲಿ ಭಾನುವಾರ ತಡರಾತ್ರಿ ನಿಧನರಾಗಿದ್ದು, ಸೋಮವಾರ ಅಂತ್ಯಸಂಸ್ಕಾರ ನಡೆಯಿತು.

ಕಳೆದ ಮೂರು ದಿನಗಳ ಹಿಂದೆ ಉಸಿರಾಟದ ತೊಂದರೆಯಿಂದ ಚಿಕಿತ್ಸೆಗೆಂದು ಬ್ಯಾಪ್ಟಿಸ್ಟ್‌ ಆಸ್ಪತ್ರೆಗೆ ದಾಖಲಾಗಿದ್ದ ಲೀಲಾವತಿ ದೇವದಾಸ್‌ ಅವರ ಆರೋಗ್ಯದಲ್ಲಿ ಭಾನುವಾರ ಚೇತರಿಕೆ ಕಂಡಿತ್ತು. ಬೆಳಗ್ಗಿನಿಂದ ರಾತ್ರಿವರೆಗೂ ಚಟುವಟಿಕೆಯಿಂದ ಇದ್ದ ಅವರಿಗೆ ಭಾನುವಾರ ತಡರಾತ್ರಿ 1.30ರ ಸುಮಾರಿಗೆ ಹೃದಯಾಘಾತವಾಗಿತ್ತು. ಕೂಡಲೇ ವೈದ್ಯರು ಚಿಕಿತ್ಸೆಗೆ ಮುಂದಾಗಿದ್ದರೂ ಚಿಕಿತ್ಸೆ ಫಲಕಾರಿಯಾದೆ ತಡರಾತ್ರಿ 2ರ ಸುಮಾರಿಗೆ ನಿಧನ ಹೊಂದಿದ್ದರು ಎಂದು ಅವರು ಕುಟುಂಬ ಮೂಲಗಳು ತಿಳಿಸಿವೆ. ಸೋಮವಾರ ಮಧ್ಯಾಹ್ನ ಕ್ರೈಸ್ತ ಧರ್ಮದ ವಿಧಿವಿಧಾನದಂತೆ ನಗರದ ಸೇಂಟ್‌ ಮಾರ್ಕ್ಸ್‌ ಕ್ಯಾಥಡ್ರಲ್‌ ಚಚ್‌ರ್‍ನ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ವೈದ್ಯೆ, ವೈದ್ಯಕೀಯ ಕಾಲೇಜು ಪ್ರಾಧ್ಯಾಪಕಿ, ಶಸ್ತ್ರ ಚಿಕಿತ್ಸಾ ಪರಿಣಿತೆಯಾಗಿ ಸೇವೆ ಸಲ್ಲಿಸಿರುವ ಲೀಲಾವತಿ ದೇವದಾಸ್‌ ಅವರು, ಸಾಹಿತ್ಯ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದ್ದರು. ಸುಮಾರು 55 ವೈದ್ಯ ಸಾಹಿತ್ಯ ಕೃತಿಗಳನ್ನು ಬರೆದಿರುವ ಅವರಿಗೆ ಕಿತ್ತೂರು ಚೆನ್ನಮ್ಮ ಪ್ರಶಸ್ತಿ, ವೈದ್ಯ ಸಾಹಿತ್ಯ ಶ್ರೀ, ವೈದ್ಯ ಸಾಹಿತ್ಯ ರತ್ನ, ಗೊರೂರು ಸಾಹಿತ್ಯ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ ಹಾಗೂ 2017ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿದ್ದವು.