Asianet Suvarna News Asianet Suvarna News

ಕಳೆದ ಬಾರಿ ಪರಾಭವಗೊಂಡ ಪರಮೇಶ್ವರ್’ಗೆ ಈ ಬಾರಿ ಟಿಕೆಟ್ ಎಲ್ಲಿಂದ..?

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಂಡ ಅತ್ಯಂತ ಸುದೀರ್ಘ ಅವಧಿಯ ಅಧ್ಯಕ್ಷ ಎಂಬ ಹಿರಿಮೆ ಡಾ| ಜಿ. ಪರಮೇಶ್ವರ್ ಅವರದ್ದು. ಕಳೆದ ಬಾರಿಯ ಚುನಾವಣೆಯಲ್ಲಿ ಅಚ್ಚರಿಯ ರೀತಿಯಲ್ಲಿ ಪರಾಭವಗೊಳ್ಳುವ ಮೂಲಕ, ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿದರೂ ರಾಜ್ಯಾಧಿಕಾರದ ಚುಕ್ಕಾಣಿಯನ್ನು ಅವರು ಸ್ವಲ್ಪದರಲ್ಲೇ ತಪ್ಪಿಸಿ ಕೊಂಡಿದ್ದರು.

Dr G Parameshwar to contest 2018 poll from Koratagere

ಕೊರಟಗೆರೆ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಂಡ ಅತ್ಯಂತ ಸುದೀರ್ಘ ಅವಧಿಯ ಅಧ್ಯಕ್ಷ ಎಂಬ ಹಿರಿಮೆ ಡಾ| ಜಿ. ಪರಮೇಶ್ವರ್ ಅವರದ್ದು. ಕಳೆದ ಬಾರಿಯ ಚುನಾವಣೆಯಲ್ಲಿ ಅಚ್ಚರಿಯ ರೀತಿಯಲ್ಲಿ ಪರಾಭವಗೊಳ್ಳುವ ಮೂಲಕ, ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿದರೂ ರಾಜ್ಯಾಧಿಕಾರದ ಚುಕ್ಕಾಣಿಯನ್ನು ಅವರು ಸ್ವಲ್ಪದರಲ್ಲೇ ತಪ್ಪಿಸಿ ಕೊಂಡಿದ್ದರು. ಈ ಬಾರಿ ಅವರು ಕೊರಟಗೆರೆ ಕ್ಷೇತ್ರ ತೊರೆಯುತ್ತಾರೆ, ಬೆಂಗಳೂರಿನ ಯಾವುದಾದರೂ ಸುರ ಕ್ಷಿತ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ವರದಿಗಳು ಬಂದಿದ್ದವು. ಆದರೆ ಕೊರಟಗೆರೆಯಲ್ಲೇ ಮತ್ತೊಮ್ಮೆ ಅವರು ಅಖಾಡಕ್ಕೆ ಧುಮುಕುತ್ತಿದ್ದಾರೆ. ಕಳೆದ ಎರಡು ತಿಂಗಳಿನಿಂದ ಕ್ಷೇತ್ರದಲ್ಲೇ ನೆಲೆಯೂರಿ ಪ್ರಚಾರವನ್ನು ಆರಂಭಿಸಿದ್ದಾರೆ.

ಪರಮೇಶ್ವರ್ ಈ ಹಿಂದೆ ಮಧುಗಿರಿ ಮೀಸಲು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದರು. ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಮಧುಗಿರಿ ಬದಲು ಕೊರಟಗೆರೆ ಮೀಸಲು ಕ್ಷೇತ್ರವಾಗಿ ಬದಲಾದ್ದರಿಂದ ಅವರು ಇಲ್ಲಿಗೆ ಬಂದರು. 2008ರ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದರು. ಆದರೆ ೨೦೧೩ರ ಚುನಾವಣೆಯಲ್ಲಿ ಜೆಡಿಎಸ್‌ನ ಸುಧಾಕರಲಾಲ್ ಎದುರು 18,155 ಮತಗಳ ಅಂತರದಿಂದ ಅವರು ಪರಾಭವಗೊಂಡರು. ಹೀಗಾಗಿ ಮುಖ್ಯಮಂತ್ರಿ ಹುದ್ದೆಗೇರುವ ಅವರ ಕನಸು ಭಗ್ನಗೊಂಡಿತು.

ಕ್ಷೇತ್ರಕ್ಕೆ ಬರುವುದಿಲ್ಲ, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಪರಮೇಶ್ವರ್ ಬಗ್ಗೆ ಆಗ ಸಾಕಷ್ಟು ದೂರುಗಳು ಇದ್ದವು. ಅದಾಗಲೇ ಮೂರು ಹೋಬಳಿಗಳಿಂದ ಜಿ.ಪಂ. ಸದಸ್ಯರಾಗಿ ಆಯ್ಕೆಯಾಗಿದ್ದ ಜೆಡಿಎಸ್‌ನ ಸುಧಾಕರಲಾಲ್ ತಮ್ಮ ಸೌಮ್ಯ ಸ್ವಭಾವದಿಂದಲೇ ಜನರ ನಡುವೆ ಗುರುತಿಸಿಕೊಂಡಿದ್ದರು. ಹೀಗಾಗಿ 2013ರ  ಚುನಾವಣೆಯಲ್ಲಿ ಪರಂ ಬದಲಿಗೆ ಜನರು ಸುಧಾಕರಲಾಲ್ ಅವರನ್ನು ಆಯ್ಕೆ ಮಾಡಿದರು. ಪರಾಭವಗೊಂಡ ಬಳಿಕ ಪರಮೇಶ್ವರ್ ಅವರು ಕ್ಷೇತ್ರಕ್ಕೆ ಬರುವುದು ಕಡಿಮೆಯಾಯಿತು. ಕೊನೆಗೆ ಕಾರ್ಯಕರ್ತರು ದುಂಬಾಲು ಬಿದ್ದಿದ್ದರಿಂದ ಕೊರಟಗೆರೆಯಲ್ಲೇ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಈ ಬಾರಿ ಪರಮೇಶ್ವರ್ ಸಾಕಷ್ಟು ತಯಾರಿ ನಡೆಸಿಯೇ ಅಖಾಡಕ್ಕೆ ಧುಮುಕಿದ್ದಾರೆ. ಶತಾಯಗತಾಯ ಗೆಲ್ಲಲೇಬೇಕೆಂದು ಹೊರಟಿದ್ದಾರೆ. ಸೋಲಿನ ಅನುಕಂಪ ನೆರವಾಗುತ್ತಾ?: ಕೊರಟಗೆರೆಯಲ್ಲಿ ಕಳೆದ ಬಾರಿ ಪರಾಭವಗೊಂಡಿದ್ದರಿಂದಾಗಿ ಪರಮೇಶ್ವರ್ ಅವರು ಮುಖ್ಯಮಂತ್ರಿ ಪಟ್ಟದಿಂದ ವಂಚಿತರಾಗಬೇಕಾಯಿತು ಎಂಬ ಬೇಸರ ಕಾರ್ಯಕರ್ತರಲ್ಲಿದೆ. ಹೀಗಾಗಿ ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಕಳೆದ ಬಾರಿಯ ಸೋಲಿನ ಅನುಕಂಪದ ಲಾಭ ಪಡೆದು ಪರಮೇಶ್ವರ್ ಅವರು ಗೆಲುವಿನ ದಡ ಮುಟ್ಟಬಹುದು ಎಂಬ ವಾದವನ್ನು ಅವರು ಮುಂದಿಡುತ್ತಿದ್ದಾರೆ.

ಅನುಕಂಪದ ಮತಗಳ ಜತೆಗೆ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಮತಗಳನ್ನು ಪರಮೇಶ್ವರ್ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಆದರೆ ಒಳಮೀಸಲಾತಿ ವಿರುದ್ಧವಾಗಿ ಪರಮೇಶ್ವರ್ ಇದ್ದಾರೆ ಎಂಬ ಆರೋಪವಿದ್ದು, ಅದು ಎಡಗೈ ಸಮುದಾಯದವರ ಅಸಮಾಧಾನಕ್ಕೆ ಕಾರಣವಾಗಿದೆ.

ಒಂದು ವೇಳೆ, ಎಡಗೈ ಸಮುದಾಯ ಕೈಕೊಟ್ಟರೆ, ಪರಮೇಶ್ವರ್ ಅವರು ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ಹೀಗಾಗಿ ಪರಮೇಶ್ವರ್ ತಾವು ಒಳಮೀಸಲಾತಿ ವಿರುದ್ಧವಾಗಿಲ್ಲ ಎಂದು ಸ್ಪಷ್ಟನೆ ಕೊಡುತ್ತಲೇ ಇದ್ದಾರೆ. ಈ ನಡುವೆ, ಪರಮೇಶ್ವರ್ ಅವರು ಗ್ರಾಮವಾಸ್ತವ್ಯ ಮಾಡುವ ಮೂಲಕ ಮತದಾರರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಜೆಡಿಎಸ್ ಮತ್ತೊಮ್ಮೆ ಸುಧಾಕರಲಾಲ್ ಅವರಿಗೇ ಟಿಕೆಟ್ ಘೋಷಣೆ ಮಾಡಿದೆ. ಪರಿಶಿಷ್ಟರಲ್ಲಿ ಸ್ಪಶ್ಯ ಜಾತಿಗಳು ಹಾಗೂ ಒಕ್ಕಲಿಗ ಸಮುದಾಯವನ್ನು ಅವರು ನಂಬಿದ್ದಾರೆ.

ಕ್ಷೇತ್ರದಲ್ಲಿ ಸುಧಾಕರಲಾಲ್ ಒಂದು ರೀತಿ ಅಜಾತಶತ್ರುವಿನ ರೀತಿ ಇದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ವೈ.ಹೆಚ್. ಹುಚ್ಚಯ್ಯ ಕಣಕ್ಕಿಳಿಯಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಈಗಾಗಲೇ ಘೋಷಿಸಿದ್ದಾರೆ. ಕಳೆದ ಬಾರಿ ಕೆಜೆಪಿ ಅಭ್ಯರ್ಥಿಯಾಗಿದ್ದ ವಾಲೆಚಂದ್ರು 15,738 ಮತ ಗಳಿಸಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಪೆಚ್ಚರಾಜು ಕೇವಲ 3068 ಮತ ಗಳಿಸಿದ್ದರು. ಮೇಲ್ನೋಟಕ್ಕೆ ಇಲ್ಲಿ ಬಿಜೆಪಿ ಅಷ್ಟೊಂದು ಬಲಿಷ್ಠವಾಗಿಲ್ಲ. ಆದರೆ ಈ ಬಾರಿ ವೈ.ಹೆಚ್. ಹುಚ್ಚಯ್ಯ ಅವರಿಗೆ ಟಿಕೆಟ್ ನೀಡಿದರೆ ಸಾಕಷ್ಟು ಮತಗಳನ್ನು ಪಡೆಯುವ ಸಂಭವ ಹೆಚ್ಚು. ಏಕೆಂದರೆ ಅವರು ಪರಿಶಿಷ್ಟ ಜಾತಿಯ ಎಡಗೈ ಪಂಗಡಕ್ಕೆ ಸೇರಿದವರು. ಕ್ಷೇತ್ರದಲ್ಲಿ ಆ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

Follow Us:
Download App:
  • android
  • ios