ಬಡವರು ಅರ್ಥಶಾಸ್ತ್ರದ ಉನ್ನತ ಶಿಕ್ಷಣ ಪಡೆಯಬೇಕೆಂಬ ಸದುದ್ದೇಶದಿಂದ ರಾಜ್ಯ ಸರ್ಕಾರ ಬೆಂಗಳೂರು ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಆರಂಭಿಸಿದ್ದು ಅ. 4ರಂದು ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್ ಈ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದಾರೆ.
ಬೆಂಗಳೂರು (ಸೆ. 28): ಬಡವರು ಅರ್ಥಶಾಸ್ತ್ರದ ಉನ್ನತ ಶಿಕ್ಷಣ ಪಡೆಯಬೇಕೆಂಬ ಸದುದ್ದೇಶದಿಂದ ರಾಜ್ಯ ಸರ್ಕಾರ ಬೆಂಗಳೂರು ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಆರಂಭಿಸಿದ್ದು ಅ. 4ರಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಈ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದಾರೆ.
ಈ ವರ್ಷ ಈ ಸಂಸ್ಥೆಯಲ್ಲಿ 1,100 ವಿದ್ಯಾರ್ಥಿಗಳು ಎಕನಾಮಿಕ್ಸ್'ನ ನಾನಾ ವಿಷಯಗಳ ಶಿಕ್ಷಣ ಪಡೆಯಲಿದ್ದು, ಬಡವರ ಮಕ್ಕಳು ಕೂಡ ಎಕನಾಮಿಕ್ಸ್'ನ ಉನ್ನತ ಶಿಕ್ಷಣ ಪಡೆಯಲು ಅನುವಾಗಲಿ ಎಂಬ ಉದ್ದೇಶದಿಂದ ಪ್ರಾರಂಭಿಸಲಾಗಿದೆ ಎಂದು ಹೇಳಿದರು. ಇನ್ನು ಈ ಸಂಸ್ಥೆಯಲ್ಲಿ ಸ್ಥಳೀಯರಿಗೆ ಶೇ 60 ರಷ್ಟು ಹಾಗೂ ಹೊರಗಿನವರಿಗೆ ಶೇ. 40 ರಷ್ಟು ಸೀಟ್'ಗಳು ಮೀಸಲಾಗಿರಲಿವೆ ಎಂದೂ ಸಚಿವರು ಮಾಹಿತಿ ನೀಡಿದರು. ಈಗಾಗಲೇ 50 ವಿದ್ಯಾರ್ಥಿಗಳ ಆಯ್ಕೆ ಆಗಿದ್ದು, ಈ ವಿದ್ಯಾರ್ಥಿಗಳ ಸರಾಸರಿ ಅಂಕ ಪ್ರಮಾಣ ಶೇ. 80 ಕ್ಕಿಂತ ಹೆಚ್ಚಿದೆ ಎಂದ ಸಚಿವರು, ಬೆಂಗಳೂರಿನಲ್ಲಿ ಅಂತರ್ ರಾಷ್ಟ್ರೀಯ ಮಟ್ಟದ ಆರ್ಥಿಕ ಶಿಕ್ಷಣ ಸಂಸ್ಥೆ ಹುಟ್ಟುಹಾಕುವ ಉದ್ದೇಶದಿಂದ ಸ್ಥಾಪನೆ ಮಾಡಲಾಗಿದೆ. ಈ ಸಂಸ್ಥೆಯ ಸೇರ್ಪಡೆಗೆ 50 ಸಾವಿರ ರೂಪಾಯಿ ವಾರ್ಷಿಕ ಶುಲ್ಕ ನಿಗದಿ ಮಾಡಿದ್ದೇವೆ. ಆದರೆ ಪ.ಜಾತಿ ಪಂಗಡದವರಿಗೆ ಸಂಪೂರ್ಣ ಉಚಿತವಾಗಿರಲಿದೆ ಎಂದು ಬಸವರಾಜ ರಾಯರಡ್ಡಿ ತಿಳಸಿದರು. ಕಾಲೇಜು ಶಿಕ್ಷಣ ಆಯುಕ್ತರು ಈ ಕಟ್ಟಡದ ಪ್ಲಾನ್'ಗೆ ಸಚಿವ ಸಂಪುಟದ ಒಪ್ಪಿಗೆ ಪಡೆದಿಲ್ಲ ಅಂತ ಆಕ್ಷೇಪ ಎತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಕಟ್ಟಡದ ಪ್ಲಾನ್ ಗೆ ಸಚಿವ ಸಂಪುಟದ ಒಪ್ಪಿಗೆ ಬೇಕಿಲ್ಲ, ಕಟ್ಟಡ ಕಾಮಗಾರಿಗೆ 150 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಇಷ್ಟು ಸಾಕು. ಕಾಲೇಜು ಶಿಕ್ಷಣ ಆಯುಕ್ತರು ತಪ್ಪು ಕಲ್ಪನೆಯಿಂದ ಆಕ್ಷೇಪ ಎತ್ತಿದ್ದಾರೆ ಎಂದೂ ಸಮಜಾಯಿಷಿ ನೀಡಿದರು.
ಬಿಎ, ಬಿಕಾಂ, ಬಿಎಸ್ಸಿ ಸೇರಿದಂತೆ ಮೊದಲ ವರ್ಷದ ಡಿಗ್ರಿ ಶಿಕ್ಷಣ ಪಡೆಯುತ್ತಿರುವ ಎಲ್ಲ ವರ್ಗಗಳ ವಿದ್ಯಾರ್ಥಿಗಳಿಗೆ ಒಂದು 1 ಲಕ್ಷದ 86 ಸಾವಿರ ಲ್ಯಾಪ್ ಟಾಪ್ ಗಳನ್ನ ಡಿಸೆಂಬರ್ ಮೊದಲ ವಾರದಲ್ಲಿ ವಿತರಣೆ ಮಾಡಲಿದ್ದೇವೆ ಅಂತ ಉನ್ನತ ಶಿಕ್ಷನ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದಾರೆ. ಇಂಟರ್ ನ್ಯಾಷನಲ್ ಬ್ರಾಂಡ್ನ ಲ್ಯಾಪ್ಟಾಪ್ಗಳನ್ನೇ ನೀಡಲಿದ್ದು, 375 ಕೋಟಿ ಅಂದಾಜು ಮೊತ್ತದ ಬಜೆಟ್ ನಿಗದಿ ಮಾಡಿದ್ದೇವೆ. ನಾಲ್ಕು ವಿಭಾಗಗಳಿಂದ ಟೆಂಡರ್ ಕರೆಯುತ್ತಿದ್ದು, ಅತ್ಯಂತ ಕಡಿಮೆ ಬೆಲೆಗೆ ಲ್ಯಾಪ್ಟಾಪ್ ನೀಡಲು ಮುಂದೆ ಬರುವವರ ಆಯ್ಕೆ ಮಾಡೋದಾಗಿ ತಿಳಿಸಿದರು. ಇದೇ ವೇಳೆ, ಕರ್ನಾಟಕ ಮುಕ್ತ ವಿವಿ ಬಹಳ ಸಮಸ್ಯೆಯಲ್ಲಿದೆ ಎಂದ ಸಚಿವರು, ಐಎಎಸ್ ಅಧಿಕಾರಿ ರತ್ನಪ್ರಭಾ ನೇತೃತ್ವದ ಸಮಿತಿ ರಚಿಸಿ ಅಲ್ಲಿನ ಅಕ್ರಮಗಳ ಬಗ್ಗೆ ವರದಿ ನೀಡಲು ಸೂಚಿಸಿದ್ದೇವೆ. ಅಕ್ರಮ ಎಸಗಿದವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಚಿಂತನೆ ನಡೆಸಿದ್ದೇವೆ ಎಂದೂ ಹೇಳಿದರು.
