ವಿಶ್ವ ದಾಖಲೆ ಸೃಷ್ಟಿಸಿದ ಭಾರತೀಯ ಸೇನಾ ಯೋಧರು| 17ಸಾವಿರ ಅಡಿ ಮೇಲೆ ಕೆಟ್ಟು ನಿಂತ ಹೆಲಿಕಾಪ್ಟರ್ ರಿಪೇರಿ| ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಪತನಗೊಂಡಿದ್ದ ಯುದ್ಧ ಹೆಲಿಕಾಪ್ಟರ್| ರಿಪೇರಿ ಮಾಡಿ ಬೇಸ್ ಕ್ಯಾಂಪ್ ವಾಪಸ್ ತಂದ ಸೇನಾ ಯೋಧರು

ನವದೆಹಲಿ(ಡಿ.26): ಯೋಧರು ಕಠಿಣ ಪರಿಸ್ಥಿತಿಯಲ್ಲೂ ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿ. 

17 ಸಾವಿರ ಅಡಿಗಳ ಮೇಲಿನ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಪತನಗೊಂಡಿದ್ದ ಯುದ್ಧ ಹೆಲಿಕಾಪ್ಟರ್‌ವೊಂದನ್ನು ಭಾರತೀಯ ಯೋಧರು ರಿಪೇರಿ ಮಾಡಿ ಬೇಸ್ ಕ್ಯಾಂಪ್ ವಾಪಸ್ ತರುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. 

1984ರ ಏಪ್ರಿಲ್ 13ರಂದು ಆಪರೇಷನ್ ಮೇಘದೂತ್‌ನ್ನು ಪ್ರಾರಂಭಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಸರಿ ಸುಮಾರು 40 ಹೆಲಿಕಾಪ್ಟರ್‌ಗಳು ಗ್ಲೇಸಿಯರ್‌ನಲ್ಲಿ ಕೆಟ್ಟು ನಿಂತಿವೆ ಅಥವಾ ಅಪಘಾತಕ್ಕೀಡಾಗಿವೆ. 

ಈ ಹೆಲಿಕಾಪ್ಟರ್‌ಗಳನ್ನು ವಾಪಸ್ ತರಲು ಸಾಧ್ಯವಾಗಿರಲಿಲ್ಲ. ಇದೇ ಮೊದಲ ಬಾರಿಗೆ ಭಾರತೀಯ ಸೇನೆ ಯುದ್ಧ ಹೆಲಿಕಾಪ್ಟರ್ ರಿಪೇರಿ ಮಾಡುವ ಮೂಲಕ ವಿಶ್ವದಾಖಲೆ ಮಾಡಿದೆ.

ಕಳೆದ ಜನವರಿಯಲ್ಲಿ ಎಎಲ್ಎಚ್ ಧ್ರುವ ಹೆಲಿಕಾಫ್ಟರ್ ಸೈನಿಕರಿಗೆ ನಿತ್ಯ ಬಳಕೆಯ ವಸ್ತುಗಳನ್ನು ಪೂರೈಸಲು ಗ್ಲೇಸಿಯರ್ ಗೆ ತೆರಳಿತ್ತು. ಈ ಸಂದರ್ಭದಲ್ಲಿ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಪೈಲೆಟ್ ತಕ್ಷಣ ಹೆಲಿಕಾಪ್ಟರ್ ಅನ್ನು ಮಂಜಿನ ಮೇಲೆ ಇಳಿಸಿದ್ದರು. ಆ ನಂತರ ಹೆಲಿಕಾಪ್ಟರ್ ಹಿಮದಲ್ಲಿ ಸಿಲುಕಿತ್ತು. 

ಮೈನಸ್ 25ರಿಂದ 30 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುವ ಈ ಪ್ರದೇಶದಲ್ಲಿ ಹೆಲಿಕಾಪ್ಟರ್ ರಿಪೇರಿ ಮಾಡುವುದು ಸಾಧ್ಯವಾಗಿರಲಿಲ್ಲ. ಆದರೆ ಭಾರತೀಯ ಯೋಧರು ಛಲ ಬಿಡದೆ ಎಎಲ್ಎಚ್ ಸ್ಕ್ವಾಡ್ರನ್ 203 ನ ಪೈಲೆಟ್ ಗಳು ಮತ್ತು ತಂತ್ರಜ್ಞರು ಹೆಲಿಕಾಪ್ಟರ್ ಅನ್ನು ಕಳೆದ ಜುಲೈನಲ್ಲಿ ರಿಪೇರಿ ಮಾಡಿಲು ಯಶಸ್ವಿಯಾಗಿದ್ದರು. 

ಸದ್ಯ ಪೈಲೆಟ್‌ಗಳು ಹೆಲಿಕಾಪ್ಟರ್ ನ್ನು ಸುರಕ್ಷಿತವಾಗಿ ಸಿಯಾಚಿನ್ ಬೇಸ್ ಕ್ಯಾಂಪ್‌ಗೆ ತಂದಿದ್ದಾರೆ.