2022ರೊಳಗೆ ರೈತರ ಆದಾಯ ದ್ವಿಗುಣಗೊಳಿಸಲು ಕೈಗೊಳ್ಳಬೇಕಾದ ಪ್ರಾಯೋಗಿಕ ಪರಿಹಾರಗಳ ಕುರಿತಂತೆ ಕೃಷಿ ತಜ್ಞರು ಮತ್ತು ಸಂಬಂಧಪಟ್ಟವರೊಂದಿಗೆ ಸರ್ಕಾರ ಸೋಮವಾರ ಚರ್ಚೆ ನಡೆಸಿದೆ.

ನವದೆಹಲಿ: 2022ರೊಳಗೆ ರೈತರ ಆದಾಯ ದ್ವಿಗುಣಗೊಳಿಸಲು ಕೈಗೊಳ್ಳಬೇಕಾದ ಪ್ರಾಯೋಗಿಕ ಪರಿಹಾರಗಳ ಕುರಿತಂತೆ ಕೃಷಿ ತಜ್ಞರು ಮತ್ತು ಸಂಬಂಧಪಟ್ಟವರೊಂದಿಗೆ ಸರ್ಕಾರ ಸೋಮವಾರ ಚರ್ಚೆ ನಡೆಸಿದೆ.

ಈ ಕುರಿತ ವರದಿಯನ್ನು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಮುಂದೆ ಸಲ್ಲಿಸಲಾಗುತ್ತದೆ. ಕೃಷಿ ಸಚಿವಾಲಯ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ಮೋದಿ ಕೃಷಿಕರ ಸಮಸ್ಯೆಗಳನ್ನು ಉಲ್ಲೇಖಿಸಿ ಮಾತನಾಡಲಿದ್ದಾರೆ. ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಅಂತರ್‌ ಸಚಿವಾಲಯ ಸಮಿತಿಯ ಶಿಫಾರಸುಗಳು ಸಹಾಯಕವಾಗಲಿವೆ. ಸೋಮವಾರ ಈ ಸಮಾವೇಶವನ್ನು ಕೃಷಿ ಸಚಿವ ರಾಧಾ ಮೋಹನ್‌ ಸಿಂಗ್‌ ಉದ್ಘಾಟಿಸಿದ್ದಾರೆ.

2018-19ರ ಹಣಕಾಸು ವರ್ಷದ ಬಜೆಟ್‌ನಲ್ಲಿ ಕೃಷಿ ವಲಯದಲ್ಲಿ ಕೇಂದ್ರ ಸರ್ಕಾರ 58,080 ಕೋಟಿ ರು. ಮೀಸಲಿರಿಸಿದೆ. ಕಳೆದ ಬಜೆಟ್‌ನಲ್ಲಿ ಅದು 51,576 ಕೋಟಿ ರು. ಆಗಿತ್ತು. ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಸಾಕಷ್ಟುಅನುದಾನ ದೊರೆಯುವಂತೆ ಮಾಡಲಾಗಿದೆ.

ಏಳು ವಿಷಯಗಳನ್ನಾಧರಿಸಿ ಸಮಾವೇಶ ನಡೆಯುತ್ತಿದೆ. ಹಿಮಾಚಲ ಪ್ರದೇಶ ರಾಜ್ಯಪಾಲ ಆಚಾರ್ಯ ದೇವವೃತ, ಸಹಾಯಕ ಕೃಷಿ ಸಚಿವ ಪರ್ಷೋತ್ತಮ್‌ ರುಪಾಲ, ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌, ಕೃಷಿ ಕಾರ್ಯದರ್ಶಿ ಎಸ್‌.ಕೆ. ಪಟ್ಟನಾಯಕ್‌ ಉಪಸ್ಥಿತರಿದ್ದರು.