ಚೆನ್ನೈ(ಡಿ.12): ವಾರ್ಧಾ ಚಂಡಮಾರುತ ಈಗಾಗಲೇ ತಮಿಳುನಾಡಿಗೆ ಅಪ್ಪಳಿಸಿದ್ದು, ತನ್ನ ರೌದ್ರಾವತಾರ ತೋರಿಸುತ್ತಿದೆ. ಬಿರುಗಾಳಿಯ ರಭಸಕ್ಕೆ ಬಂಡೆಗಳು ಚಿಂದಿಯಾಗಿದ್ದು, ಇದರ ವೇಗ ಎಷ್ಟಿದೆ ಎಂಬುವುದನ್ನು ನಾವು ಅಂದಾಜು ಮಾಡಬಹುದಾಗಿದೆ. ಸದ್ಯ ಇಲ್ಲಿನ ಜನರು ಆತಂಕದಲ್ಲಿದ್ದು ಮುಂದೇನು ಎಂಬ ಭೀತಿಯಲ್ಲಿದ್ದಾರೆ. ಇಂತಹ ಸಮಯದಲ್ಲಿ ಜನರು ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳು ಏನು? ಏನೆಲ್ಲಾ ಮಾಡಬಾರದು ಈ ಕುರಿತಾದ ಕೆಲವು ಟಿಪ್ಸ್

* ಚಂಡಮಾರುತದ ಪರಿಣಾವಮವಾಗಿ ಧಾರಕಾರ ಗಾಳಿ ಮಳೆ ಸುರಿಯುತ್ತಿರುವುದರಿಂದ ಜನರು ತಮ್ಮ ಮನೆಯ ಬಾಗಿಲು ಹಾಗೂ ಕಿಟಕಿಗಳನ್ನು ಸಾಧ್ಯವಾದಷ್ಟು ಭದ್ರಪಡಿಸಿಕೊಳ್ಳುವುದು ಒಳಿತು. ಇದರಿಂದ ಪ್ರವಾಹ ಬಂದರೂ ಮನೆಯೊಳಗೆ ನೀರು ಬಾರದಂತೆ ತಡೆಯಬಹುದು.

* ಮಳೆ ಬರುವ ಸಮಯದಲ್ಲಿ ಹೊರ ಹೋಗದಿರಿ ಹಾಗೂ ಮಕ್ಕಳನ್ನು ಹೊರಹೋಗದಂತೆ ನೋಡಿಕೊಳ್ಳಿ. ಇದಕ್ಕಿದಂತೆ ಮಳೆ ನಿಂತರೆ ಹೊರಹೋಗದಿರಿ, ಚಂಡಮಾರುತದ ವೇಳೆ ಗಾಳಿ ಮಳೆ ನಿಂತರೂ ಅಪಾಯ ತಪ್ಪುವುದಿಲ್ಲ. ಮಳೆ ನಿಂತರೂ ಮರುಕ್ಷಣವೇ ಗಾಳಿ ಮಳೆ ಬರುವ ಸಾಧ್ಯತೆಗಳಿರುತ್ತವೆ.

* ಸಾಧ್ಯವಾದಷ್ಟು ಆಹಾರ ಪದಾರ್ಥಗಳನ್ನು ಅದರಲ್ಲೂ ಢ್ರೈ ಫ್ರೂಟ್ಸ್'ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಸಿ. ಇದರೊಂದಿಗೆ ಅಕ್ಕಿ ಹಾಗೂ ಕಾಳುಗಳನ್ನೂ ಕೊಂಡುಕೊಳ್ಳಿ.

* ಪ್ರಥಮ ಚಿಕಿತ್ಸೆಗೆ ಬೇಕಾದ ಔಷಧಿ, ಕುಡಿಯುವ ನೀರನ್ನು ಇಟ್ಟುಕೊಳ್ಳಿ.

* ಗಾಳಿ ಮಳೆಯಿರುವುದರಿಂದ ವಿದ್ಯುತ್ ಸಂಪರ್ಕ ಕಡಿತಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ ಹೀಗಾಗಿ ಮೊದಲೇ ನಿಮ್ಮ ಮೊಬೈಲ್ ಫೋನ್ ಹಾಗೂ ಬ್ಯಾಟರಿಗಳನ್ನು ಚಾರ್ಜ್ ಮಾಡಿಕೊಳ್ಳಿ. ಇದರೊಂದಿಗೆ ಕ್ಯಾಂಡಲ್'ಗಳನ್ನು ತಂದಿಟ್ಟುಕೊಳ್ಳಿ.

* ಸಾಧ್ಯವಾದಷ್ಟು ಬೇಗ ಪರಿಹಾರ ಕೇಂದ್ರಕ್ಕೆ ತೆರಳಿ ಅಲ್ಲಿನ ಅಧಿಕಾರಿಗಳು ಸೂಚಿಸುವ ಸ್ಥಳಕ್ಕೆ ತೆರಳಿ ಅಪಾಯದಿಂದ ಪಾರಾಗಬಹುದು.

* ಗಾಳಿ ಮಳೆಯ ರಭಸಕ್ಕೆ ಈ ಮೊದಲೇ ಜನರು ಕಂಗಾಲಾಗಿರುತ್ತಾರೆ ಹೀಗಾಗಿ ವದಂತಿಗಳನ್ನು ಹಬ್ಬಿಸಬೇಡಿ, ಹಾಗೂ ವದಂತಿಗಳಿಗೆ ಕಿವಿಗೊಡಬೇಡಿ.

* ಆತಂಕಪಟ್ಟುಕೊಳ್ಳಬೇಡಿ ಹಾಗೂ ಶಾಂತರಾಗಿರಲು ಪ್ರಯತ್ನಿಸಿ. ಭಯಪಟ್ಟುಕೊಂಡವರಿಗೆ ಧೈರ್ಯ ತಿಳಿಸಿ.

ಈ ಮೇಲಿನ ಕ್ರಮಗಳನ್ನು ಅನುಸರಿಸಿ ಸುರಕ್ಷಿತರಾಗಿ