Asianet Suvarna News Asianet Suvarna News

ಬಿಬಿಎಂಪಿಯಲ್ಲಿ ಜೆಡಿಎಸ್‌ ಬೆಂಬಲ ವಾಪಸ್ ಪಡೆದರೆ ಸಮಸ್ಯೆಯಿಲ್ಲ : ಸಿಎಂ

ಶಾಸಕ ಅಶೋಕ್‌ ಖೇಣಿ ಕಾಂಗ್ರೆಸ್‌ ಸೇರ್ಪಡೆ ಅಥವಾ ರಾಜ್ಯಸಭಾ ಚುನಾವಣೆ ಕಾರಣಕ್ಕಾಗಿ ಬಿಬಿಎಂಪಿಯಲ್ಲಿ ಮಾಡಿಕೊಂಡಿರುವ ಮೈತ್ರಿಯನ್ನು ಜೆಡಿಎಸ್‌ ಹಿಂಪಡೆಯುವುದಾದರೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Dont Want JDS Support Says CM Siddaramaiah

ಮಂಡ್ಯ : ಶಾಸಕ ಅಶೋಕ್‌ ಖೇಣಿ ಕಾಂಗ್ರೆಸ್‌ ಸೇರ್ಪಡೆ ಅಥವಾ ರಾಜ್ಯಸಭಾ ಚುನಾವಣೆ ಕಾರಣಕ್ಕಾಗಿ ಬಿಬಿಎಂಪಿಯಲ್ಲಿ ಮಾಡಿಕೊಂಡಿರುವ ಮೈತ್ರಿಯನ್ನು ಜೆಡಿಎಸ್‌ ಹಿಂಪಡೆಯುವುದಾದರೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಡ್ಯದ ತೂಬಿನಕೆರೆ ಹೆಲಿಪ್ಯಾಡ್‌ನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಬಿಎಂಪಿಯಲ್ಲಿ ಮೈತ್ರಿ ಮುರಿಯುವ ಮಾತುಗಳನ್ನು ಜೆಡಿಎಸ್‌ನವರು ಆಡುತ್ತಿದ್ದಾರೆ. ಅವರು ಆ ನಿರ್ಧಾರ ತೆಗೆದುಕೊಂಡರೆ ನಾವು ಅದಕ್ಕೆ ಸಿದ್ಧರಾಗಿದ್ದೇವೆ. ಬಿಬಿಎಂಪಿಯಲ್ಲಿ ಅಧಿಕಾರ ಹಂಚಿಕೆ ಮಾಡಿಕೊಳ್ಳಲಾಗಿದೆ. ಆದರೂ ಮೈತ್ರಿ ಮುರಿಯುವ ಮಾತು ಆಡಿದರೆ ನಾವೇನು ಮಾಡಲು ಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ರಾಜಕೀಯ: ಲೋಕಾಯುಕ್ತರಿಗೆ ಚಾಕು ಇರಿತ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಲೋಕಾಯುಕ್ತರಿಗೆ ಭದ್ರತೆ ಇದೆ. ಗನ್‌ಮ್ಯಾನ್‌ ಕೊಡಲಾಗಿದೆ. ಆದರೂ ನಿನ್ನೆಯ ಘಟನೆ ನಡೆಯಬಾರದಿತ್ತು. ಆಗಿ ಹೋಗಿದೆ. ಕಚೇರಿಯಲ್ಲಿ ಭದ್ರತಾ ವೈಫಲ್ಯ ಆಗಿರಬಹುದು. ಇದರ ಬಗ್ಗೆ ಸಮಗ್ರ ತನಿಖೆಗೆ ನಡೆಸುವಂತೆ ಸೂಚನೆ ನೀಡಿದ್ದೇನೆ. ಗೃಹ ಕಾರ್ಯದರ್ಶಿಗಳಿಗೆ ತನಿಖೆ ಹೊಣೆ ಹೊರಿಸಲಾಗಿದೆ. ತನಿಖೆಯ ನಂತರ ಪ್ರಕರಣದಲ್ಲಿ ಲೋಪವಾಗಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಲೋಕಾಯುಕ್ತರಿಗೆ ಚೂರಿ ಇರಿತ ಪ್ರಕರಣವನ್ನು ಮುಂದಿಟ್ಟುಕೊಂಡು ತಮ್ಮ ರಾಜೀನಾಮೆ ಕೇಳಿರುವ ಹಾಗೂ ರಾಷ್ಟ್ರಪತಿ ಆಳ್ವಿಕೆಗೆ ಆಗ್ರಹಿಸಿರುವ ಬಿಜೆಪಿ ಹಾಗೂ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ವಿರುದ್ಧ ಸಿಎಂ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರಕರಣವನ್ನು ಮುಂದಿಟ್ಟುಕೊಂಡು ನನ್ನನ್ನು ರಾಜೀನಾಮೆ ಕೇಳಲು ಅವರು ಯಾರು? ಬಿಜೆಪಿಯವರಿಗೆ ಸಂವಿಧಾನ ಬಗ್ಗೆ ಏನೂ ಗೊತ್ತಿಲ್ಲ.

ಹಾಗಾಗಿ ರಾಷ್ಟ್ರಪತಿ ಆಳ್ವಿಕೆಗೆ ಆಗ್ರಹಿಸುತ್ತಿದ್ದಾರೆ ಎಂದರು. ಜತೆಗೆ, ಈಶ್ವರಪ್ಪಗೆ ಮಿದುಳಿಲ್ಲ. ಆತನೊಬ್ಬ ಮಹಾನ್‌ ಪೆದ್ದ ಎಂದು ಸಿಎಂ ಲೇವಡಿ ಮಾಡಿದರು. ಇದೇ ವೇಳೆ, ರಾಜ್ಯಸಭೆ ಚುನಾವಣೆಗೂ ಬಿಪಿಎಂಪಿ ಮೈತ್ರಿಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ ಸಿಎಂ, ನಮ್ಮ ಪಕ್ಷಕ್ಕೆ ರಾಜ್ಯಸಭೆಯಲ್ಲಿ ಮೂರು ಅಭ್ಯರ್ಥಿಗಳನ್ನು ಗೆಲ್ಲಿಸುವ ಅವಕಾಶವಿದೆ ಎಂದರು.

Follow Us:
Download App:
  • android
  • ios