, ‘‘ದಲಿತರು, ಹಿಂದುಳಿದ ವರ್ಗದ ಜನತೆಯ ಕಲ್ಯಾಣಕ್ಕಾಗಿ ಸಂಘಟನೆ ಮಾಡುತ್ತಿದ್ದೇನೆ. ಇಂಥ ಪರಿಸ್ಥಿತಿಯಲ್ಲಿ ಪಕ್ಷ ನೋಟಿಸ್ ನೀಡಿದರೂ ಹೆದರುವುದಿಲ್ಲ. ಯಾವುದೇ ಕಾರಣಕ್ಕೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಲ್ಲುವುದಿಲ್ಲ. ಇದು ದೊಡ್ಡ ಸಂಘಟನೆಯಾಗಿ ಹೊರಹೊಮ್ಮುವುದು ಶತಃಸಿದ್ಧ,’’

ಬೆಳಗಾವಿ(ಡಿ.7): ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಶಿಸ್ತು ಕ್ರಮದ ಎಚ್ಚರಿಕೆಯ ನಡುವೆಯೂ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸೆಡ್ಡು ಹೊಡೆದಿದ್ದಾರೆ. ಈ ಮೂಲಕ ರಾಯಣ್ಣ ಬ್ರಿಗೇಡ್‌ಗಾಗಿ ಪಕ್ಷದ ಯಾವುದೇ ನೋಟಿಸ್‌ಗೆ ಹೆದರುವುದಿಲ್ಲ ಎನ್ನುವ ಸಂದೇಶವನ್ನೂ ವರಿಷ್ಠರಿಗೆ ರವಾನಿಸಿದ್ದಾರೆ.

ಮಂಗಳವಾರ ಖಾನಾಪುರ ತಾಲೂಕಿನ ನಂದಗಡದ ಸಂಗೊಳ್ಳಿ ರಾಯಣ್ಣನನ್ನು ನೇಣಿಗೇರಿಸಿದ ಸ್ಥಳದಲ್ಲಿ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಚಾಲಕರ ಪ್ರತಿಜ್ಞಾವಿ ಸಮಾರಂಭದಲ್ಲಿ ಮಾತನಾಡಿದ ಅವರು, ‘‘ದಲಿತರು, ಹಿಂದುಳಿದ ವರ್ಗದ ಜನತೆಯ ಕಲ್ಯಾಣಕ್ಕಾಗಿ ಸಂಘಟನೆ ಮಾಡುತ್ತಿದ್ದೇನೆ. ಇಂಥ ಪರಿಸ್ಥಿತಿಯಲ್ಲಿ ಪಕ್ಷ ನೋಟಿಸ್ ನೀಡಿದರೂ ಹೆದರುವುದಿಲ್ಲ. ಯಾವುದೇ ಕಾರಣಕ್ಕೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಲ್ಲುವುದಿಲ್ಲ. ಇದು ದೊಡ್ಡ ಸಂಘಟನೆಯಾಗಿ ಹೊರಹೊಮ್ಮುವುದು ಶತಃಸಿದ್ಧ,’’ ಎಂದು ಗುಡುಗಿದರು.

‘‘ನಮ್ಮ ಬ್ರಿಗೇಡ್‌ಗೆ ರಾಜ್ಯದ ಎಲ್ಲೆಡೆಯಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಇಲ್ಲಿ ಸುಖಾಸುಮ್ಮನೆ ಪ್ರತಿಜ್ಞೆ ಸ್ವೀಕರಿಸಿಲ್ಲ. ದೇಶ ಕಟ್ಟುವ ಸಂಕಲ್ಪ ನಮ್ಮ ಮುಂದಿದೆ. ದೇಶದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿವೆ. ಭಾರತೀಯ ಸಂಸ್ಕೃತಿ ಮೇಲೆ ಆಘಾತವಾಗಿದೆ. ದಲಿತರು, ಹಿಂದುಳಿದ ವರ್ಗದ ಜನರನ್ನು ಉದ್ಧಾರ ಮಾಡುತ್ತೇವೆ ಎಂದು ಚುನಾವಣೆ ವೇಳೆ ಭಾಷಣ ಮಾಡುತ್ತಾರೆ. ಆದರೆ, 70 ವರ್ಷವಾದರೂ ದಲಿತರಿಗೆ ಸರಿಯಾಗಿ ಸೂರು, ಉದ್ಯೋಗ, ನೀರು ಸಿಕ್ಕಿಲ್ಲ.

ಶೋಷಿತ ವರ್ಗಕ್ಕೆ ನ್ಯಾಯ ಕೊಡಿಸುವ ಉದ್ದೇಶದಿಂದಲೇ ರಾಯಣ್ಣ ಬ್ರಿಗೇಡ್ ಹುಟ್ಟುಹಾಕಲಾಗಿದೆ. ಸಮುದ್ರ ಮಂಥನದಲ್ಲಿ ಕಿತ್ತಾಟವಾಗಿ ಮೊದಲು ಬಂದಿದ್ದು ವಿಷ. ಅದರಂತೆ ನನಗೆ ನೋಟಿಸ್ ಬರುತ್ತದೆ. ಆಮೇಲೆ ಅಮೃತ ಬರುತ್ತದೆ ಎಂದು ಈಶ್ವರಪ್ಪ ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಬ್ರಿಗೇಡ್‌ನ ಸಂಚಾಲಕರ ಸಮಾವೇಶಕ್ಕೆ ಯಾವುದೇ ಅಭ್ಯಂತರ ಇಲ್ಲ ಎಂದಿದ್ದರು. ನಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ನೋಟಿಸ್ ನೀಡುವುದಾಗಿ ಎಚ್ಚರಿಸಿದ್ದಾರೆ. ಈ ಕುರಿತು ನಾನು ಹೆಚ್ಚಿಗೇನೂ ಮಾತನಾಡುವುದಿಲ್ಲ ಎಂದರು.

ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಶಾಸಕ ಜಗದೀಶ ಮೆಟಗುಡ್, ಡಿ. ವೆಂಕಟೇಶ ಮೂರ್ತಿ, ಮಾದರ ಚನ್ನಯ್ಯ ಸ್ವಾಮೀಜಿ, ಅಮರೇಶ್ವರ ಮಹಾರಾಜ, ಚಿನ್ಮಯಾನಂದ ಸ್ವಾಮೀಜಿ, ಸೇವಾಲಾಲ ಸ್ವಾಮೀಜಿ, ಚಲನಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಮತ್ತಿತರರು ಪಾಲ್ಗೊಂಡಿದ್ದರು.