ಕಿಮ್ ಜಾಂಗ್ ಊನ್, ಡೋನಾಲ್ಡ್ ಟ್ರಂಪ್ ಭೇಟಿಸಿಂಗಾಪುರದ ಸೆಂಟೋಸಾ ದ್ವೀಪದಲ್ಲಿ ಮಾತುಕತೆವಿಶ್ವ ರಾಜಕೀಯಕ್ಕೆ ಸಿಗಲಿದೆಯಾ ಹೊಸ ತಿರುವು?ಉ.ಕೊರಿಯಾ, ಅಮೆರಿಕ ಐತಿಹಾಸಿಕ ಶೃಂಗಸಭೆ
ಸಿಂಗಾಪುರ(ಜೂ.12): ವಿಶ್ವ ರಾಜಕೀಯ ಇತಿಹಾಸದಲ್ಲಿ ಇಂದಿನ ದಿನವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಘಟನೆ ಇದು. ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಊನ್ ಮತ್ತು ಅಮೆರಿಕ ಅಧ್ಯಕ್ ಡೋನಾಲ್ಡ್ ಟ್ರಂಪ್ ಇಂದು ಸಿಂಗಾಪುರದಲ್ಲಿ ಯಶಸ್ವಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಉ.ಕೊರಿಯಾ ಮತ್ತು ಅಮೆರಿಕ ಅಭಿವೃದ್ಧಿ, ದ್ವಿಪಕ್ಷೀಯ ಸಂಬಂಧ ವೃದ್ಧಿ, ಶಾಂತಿ ಪ್ರಸರಣೆ, ಸಹಬಾಳ್ವೆ, ವಿಶ್ವದ ಭದ್ರತೆಗಾಗಿ ಜಂಟಿಯಾಗಿ ಕಾರ್ಯ ನಿರ್ವಹಿಸುವ ಕುರಿತು ಉಭಯ ನಾಯಕರು ನಿರ್ಣಯ ಕೈಗೊಂಡರು.
ಸಿಂಗಾಪುರದ ಸೆಂಟೋಸಾ ದ್ವೀಪದಲ್ಲಿರುವ ಕ್ಯಾಪೆಲ್ಲಾ ಹೋಟೆಲ್ನಲ್ಲಿ ನಡೆದ ಮಹತ್ವದ ಶೃಂಗಸಭೆಯಲ್ಲಿ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಜಂಟಿ ಹೇಳಿಕೆ ನೀಡಿದರು. ಈ ವೇಳೆ 'ಶಾಂತಿ, ಸಹಬಾಳ್ವೆ, ವಿಶ್ವದ ಭದ್ರತೆಗಾಗಿ ಅಮೆರಿಕ-ಉತ್ತರ ಕೊರಿಯಾ ಜಂಟಿಯಾಗಿ ಕಾರ್ಯ ನಿರ್ವಹಣೆ ಮಾಡಲಿವೆ ಎಂದು ಹೇಳಿದರು.
ಒಟ್ಟು ನಾಲ್ಕು ಪ್ರಮುಖ ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಹಾಕಿದ್ದು, ಈ ಪೈಕಿ, ಕೊರಿಯಾ ಆವರಣದಲ್ಲಿ ಸಂಪೂರ್ಣ 'ಅಣ್ವಸ್ತ್ರ ನಿಶ್ಯಸ್ತ್ರೀಕರಣಗೊಳಿಸುವ ಮಹತ್ವದ ಒಪ್ಪಂದಕ್ಕೆ ಉಭಯ ನಾಯಕರು ಸಹಿಹಾಕಿದ್ದಾರೆ. ಧನಾತ್ಮಕ ಹಾದಿಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿ, ಎಲ್ಲರೂ ನಿರೀಕ್ಷಿಸಿದಕ್ಕಿಂತ ಉತ್ತಮ ಕೆಲಸ ಮಾಡಿ ಉಭಯ ರಾಷ್ಟ್ರಗಳು ಮುಂಚೂಣಿಯಲ್ಲಿರುವಂತೆ ನೋಡಿಕೊಳ್ಳಲು ನಾವು ಸಹಿ ಮಾಡುತ್ತಿರುವುದಾಗಿ ಕೊರಿಯನ್ ಪರ್ಯಾಯ ದ್ವೀಪದ ಮೇಲಿನ ಪರಮಾಣು ಬಿಕ್ಕಟ್ಟನ್ನು ಅಂತ್ಯಗೊಳಿಸುವ ಮಾರ್ಗಗಳ ಕುರಿತು ಚರ್ಚೆ ನಡೆಸಿದ್ದೇವೆ ಎಂದು ಟ್ರಂಪ್ ತಿಳಿಸಿದರು.
ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ ಪರಸ್ಪರ ದ್ವಿಪಕ್ಷೀಯ ಸಂಬಂಧ ಉತ್ತಮಗೊಳಿಸಲು ಬದ್ಧವಾಗಿದ್ದು, ಸೌಹಾರ್ಧ ಸಂಬಂಧ ವೃದ್ದಿಗೆ ಶ್ರಮಿಸುವ ನಿರ್ಧಾರಕ್ಕೆ ಬಂದಿವೆ. ಉಭಯ ದೇಶಗಳ ಪ್ರಜೆಗಳು ಶಾಂತಿ ಮತ್ತು ಸಮೃದ್ಧಿ ಜೀವನ ನಡೆಸಲು ಪರಸ್ಪರ ಸಹಾಕಾರ ನೀಡುತ್ತೇವೆ ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ. ಕೊರಿಯಾ ಪರ್ಯಾಯ ದ್ವೀಪದಲ್ಲಿ ಶಾಂತಿ ಮತ್ತು ಸಹಬಾಳ್ವೆಗೆ ಅನುಕೂಲಕರ ವಾತಾವರಣ ನಿರ್ಮಾಣಕ್ಕೆ ಉಭಯ ದೇಶದಳು ಬದ್ಧವಾಗಿವೆ ಎಂದು ಟ್ರಂಪ್ ಮಾಹಿತಿ ನೀಡಿದರು..
2018 ಏಪ್ರಿಲ್ 27ರ ಪನ್ಮುಂಜಮ್ ನಿರ್ಣಯದ ಅನ್ವಯ ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ ಸಂಪೂರ್ಣ ಅಣ್ವಸ್ತ್ರ ನಿಶ್ಯಸ್ತ್ರೀಕರಣಕ್ಕಾಗಿ ಕಾರ್ಯ ನಿರ್ವಹಿಸಲಿದೆ. ದಕ್ಷಿಣ ಕೊರಿಯಾ ಪುನಶ್ಛೇತನ ಕಾರ್ಯದಲ್ಲಿ ಉತ್ತರ ಕೊರಿಯಾ ಸಹಕಾರದ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಒಟ್ಟಾರೆ ಸಿಂಗಾಪುರ ಶೃಂಗಸಭೆ 7 ದಶಕಗಳ ವೈಷಮ್ಯಕ್ಕೆ ತೆರೆ ಎಳೆಯು ಪ್ರಯತ್ನ ಎಂದು ಬಣ್ಣಿಸಲಾಗುತ್ತಿದೆ.
ಇನ್ನು ಉ.ಕೊರೊಯಾ ಸರ್ವಾಧಿಕಾರಿ ಕಿಮ್ ಜಾಂಗ್ ಊನ್ ಮತ್ತು ಅಮೆರಿಕ ಅಧ್ಯಕ್ಷರ ನಡುವಿನ ಮಾತುಕತೆಯನ್ನು, ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೆ ಇನ್ ಇಡೀ ರಾತ್ರಿ ನಿದ್ದೆ ಮಾಡದೆ ವೀಕ್ಷಿಸಿದರು ಎಂದು ಮೂಲಗಳು ತಿಳಿಸಿವೆ. ಈ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಉತ್ತರ ಕೊರಿಯಾದ ಬದ್ದ ವೈರಿ ಮತ್ತು ಅಮೆರಿಕದ ಸ್ನೇಹ ರಾಷ್ಟ್ರ ದಕ್ಷಿಣ ಕೊರಿಯಾ ತುದಿಗಾಲಲ್ಲಿ ನಿಂತಿತ್ತು. ಸ್ವತಃ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ-ಇನ್ ಈ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಇಡೀ ರಾತ್ರಿ ನಿದ್ದೆ ಗೆಟ್ಟಿದ್ದಾರಂತೆ.
