ಸಾಗರ(ಜು.03): ನಾಯಿ ಮನುಷ್ಯನ ಅತ್ಯಂತ ನಂಬಿಗಸ್ಥ ಪ್ರಾಣಿ ಅಂತಾರೆ. ಆದರೆ ಈ ಕತೆಯಲ್ಲಿ ಮನುಷ್ಯನೇ ನಾಯಿಯ ನಂಬಿಗಸ್ಥ ಮಿತ್ರನಾಗಿ ಪರಿವರ್ತನೆಗೊಂಡಿದ್ದಾನೆ.

ಕೊಲೆ ಪ್ರಕರಣವೊಂದರಲ್ಲಿ ಕುಟುಂಬದ ಸದಸ್ಯರೆಲ್ಲರೂ ಜೈಲು ಸೇರಿದ್ದು, ಅನಾಥವಾದ ಸಾಕುನಾಯಿಯನ್ನು ಪೊಲೀಸರೇ ಸಾಕುತ್ತಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ಸಾಗರದಲ್ಲಿ ನಡೆದಿದೆ.

ಹೌದು, ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಐದು ಜನರ ಕೊಲೆ ಪ್ರಕರಣವೊಂದರಲ್ಲಿ ಒಂದೇ ಕುಟುಂಬದ 6 ಸದಸ್ಯರನ್ನು ಬಂಧಿಸಲಾಗಿತ್ತು. ಈ ವೇಳೆ ಕುಟುಂಬದ ಸಾಕುನಾಯಿ ಸುಲ್ತಾನ್ ಅನಾಥವಾಗಿತ್ತು.

ಆದರೆ ತನ್ನ ಮಾಲೀಕನನ್ನು ಬಂಧಿಸಿದ ಛೋಟಾ ಬಜಾರಿಯಾ ಪೊಲೀಸ್ ಠಾಣೆಗೆ ಬಂದ ಸಾಕುನಾಯಿ ಸುಲ್ತಾನ್, ಪೊಲೀಸ್ ಠಾಣೆ ಬಿಟ್ಟು ಕದಲುತ್ತಿಲ್ಲ. ನಾಯಿಯ ಸ್ಥಿತಿ ಕಂಡು ಮರುಗಿದ ಠಾಣಾಧಿಕಾರಿ ಮನೀಶಾ ತಿವಾರಿ ಸುಲ್ತಾನ್’ನ ಪೋಷಣೆ ಮಾಡುತ್ತಿದ್ದಾರೆ.

ಪೊಲೀಸ್ ಠಾಣೆಯನ್ನೇ ತನ್ನ ಹೊಸ ವಾಸ್ತವ್ಯವನ್ನಾಗಿ ಮಾಡಿಕೊಂಡಿರುವ ಸುಲ್ತಾನ್, ಠಾಣೆಯ ಪೊಲೀಸರ ಸ್ನೇಹ ಸಂಪಾದಿಸಿದೆ. ಸುಲ್ತಾನ್ ಊಟ, ಉಪಚಾರವನ್ನು ಮನೀಶಾ ತಿವಾರಿ ಅವರೇ ನೋಡಿಕೊಳ್ಳುತ್ತಿದ್ದು, ಸುಲ್ತಾನ್ ಇದೀಗ ಠಾಣೆಯ ಓರ್ವ ಸದಸ್ಯನಾಗಿದ್ದಾನೆ ಎಂದು ನಗು ಬೀರುತ್ತಾರೆ.