ಬೆಂಗಳೂರು : ಕಾಂಗ್ರೆಸ್ ನಲ್ಲಿ ದಿನದಿನಕ್ಕೂ ಕೂಡ ಅತೃಪ್ತ ನಾಯಕರ ಸಂಖ್ಯೆ ಹೆಚ್ಚುತ್ತಲಿದೆ. ರಾಮಲಿಂಗಾ ರೆಡ್ಡಿ ಹಾಗೂ ರೋಷನ್ ಬೇಗ್ ಅವರು ಅಸಮಾಧಾನ ಹೊರಹಾಕಿದ್ದು, ಈ ಅಸಮಾಧಾನದ ಹಿಂದೆ  ಬಿಜೆಪಿ ನಾಯಕರೋರ್ವರು ಇದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ. 

ತಮ್ಮ ಆಪ್ತ ನಾಯಕರನ್ನು ಬಿಜೆಪಿಗೆ ಸೆಳೆಯುವ ಯತ್ನದಲ್ಲಿ ಎಸ್. ಎಂ.ಕೃಷ್ಣ ತೆರೆಮರೆಯಲ್ಲಿ ಪ್ರಯತ್ನ ಮಾಡುತ್ತಿದ್ದಾರಾ ಎನ್ನಲಾಗಿದೆ. ಜೆಡಿಎಸ್ ನಲ್ಲಿ ಎಚ್. ವಿಶ್ವನಾಥ್ ಕೆಲವು ಆಂತರಿಕ ಅಸಮಾಧಾನದಿಂದ ರಾಜ್ಯಾಧ್ಯಕ್ಷ ಹುದ್ದೆ ತ್ಯಜಿಸಿದ್ದು, ಇತ್ತ ಕೈ ಹಿರಿಯ ನಾಯಕರಾದ ರೋಷನ್ ಬೇಗ್, ರಾಮಲಿಂಗಾ ರೆಡ್ಡಿ ಕೂಡ ಸಿಡಿದೇಳುತ್ತಿದ್ದಾರೆ. 

ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ವಿರುದ್ಧ ರೋಷನ್ ಬೇಗ್ ತಿರುಗಿಬಿದ್ದಿದ್ದು, ಬಂಡಾಯ ಏಳುವ ಮುನ್ಸೂಚನೆ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ  ಮೂವರನ್ನು ಬಿಜೆಪಿಗೆ ಸೆಳೆಯುವಲ್ಲಿ ಎಸ್.ಎಂ.ಕೃಷ್ಣ ಪ್ರಮುಖ ಪಾತ್ರ ವಹಿಸುತ್ತಿದ್ದಾರಾ ಎನ್ನಲಾಗಿದೆ. 

ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಕೇವಲ ಒಂದು ಸ್ಥಾನವನ್ನಷ್ಟೇ ಪಡೆದುಕೊಂಡಿದ್ದು, ಇದರಿಂದ ದೇಶದಲ್ಲಿ ಪಕ್ಷಕ್ಕೆ ಭವಿಷ್ಯವಿಲ್ಲ ಎಂದು ನಾಯಕರಿಗೆ ಕೃಷ್ಣ ತಿಳಿ ಹೇಳಿ ಸೆಳೆವ ಯತ್ನ ನಡೆಸಿದ್ದಾರಾ ಎನ್ನುವ ಚರ್ಚೆ ಹುಟ್ಟುಹಾಕಿದೆ.