ಕರ್ನಾಟಕ ಖಾಸಗಿ ವೈದ್ಯಕೀಯ ತಿದ್ದುಪಡಿ ಕಾಯ್ದೆ 2017ವನ್ನು ಜಾರಿ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಖಾಸಗಿ ಮತ್ತು ಸರ್ಕಾರಿ ವೈದ್ಯರು ನಾಳೆ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.
ಬೆಂಗಳೂರು: ಕರ್ನಾಟಕ ಖಾಸಗಿ ವೈದ್ಯಕೀಯ ತಿದ್ದುಪಡಿ ಕಾಯ್ದೆ 2017ವನ್ನು ಜಾರಿ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಖಾಸಗಿ ಮತ್ತು ಸರ್ಕಾರಿ ವೈದ್ಯರು ನಾಳೆ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.
ಈ ನೂತನ ಕಾಯ್ದೆ ಪ್ರಕಾರ ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ ಚಿಕಿತ್ಸಾ ದರಕ್ಕಿಂತ ಹೆಚ್ಚು ದರ ವಸೂಲಿ ಮಾಡುವಂತಿಲ್ಲ. ಒಂದು ವೇಳೆ ಹೆಚ್ಚು ದರ ವಸೂಲಿ ಮಾಡಿದ್ದು ಕಂಡುಬಂದಲ್ಲಿ 5 ಲಕ್ಷ ರೂಪಾಯಿ ದಂಡ ಹಾಗೂ 3 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.
ಇದಲ್ಲದೆ ವೈದ್ಯರ ತಪ್ಪುಗಳ ಕುರಿತು ದೂರು ಸಲ್ಲಿಸಲು ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ಕೌಂಟರ್ ತೆರೆಯುವುದಕ್ಕೂ ಈ ನೂತನ ಕಾಯ್ದೆಯಲ್ಲಿ ಉಲ್ಲೇಖಿಸಿದ್ದು, ಇದಕ್ಕೂ ಖಾಸಗಿ ವೈದ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.
ರಾಜ್ಯದಾದ್ಯಂತ ನಡೆಯಲಿರುವ ಪ್ರತಿಭಟನೆಯಲ್ಲಿ 15 ಸಾವಿರಕ್ಕೂ ಹೆಚ್ಚು ವೈದ್ಯರು ಭಾಗಿಯಾಗಲಿದ್ದು, ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನಾ ಜಾಥಾ ನಡೆಯಲಿದೆ.
ತುರ್ತು ಸೇವೆ ಹೊರತುಪಡಿಸಿ ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಖಾಸಗಿ ವೈದ್ಯರ ಜತೆ ಖಾಸಗಿ ವೈದ್ಯರು ಕೈಜೋಡಿಸುವ ಸಾಧ್ಯತೆ ಇರುವುದರಿಂದ ವೈದ್ಯಕೀಯ ಸೇವೆ ಅಸ್ತವ್ಯಸ್ಥಗೊಳ್ಳಲಿದೆ.
ಆರೋಗ್ಯ ಸಚಿವರು ಖಾಸಗಿ ವೈದ್ಯರನ್ನು ದರೋಡೆಕೋರರು, ಸುಲಿಗೆದಾರರು ಎಂದು ಕರೆದಿರುವುದು ಖಂಡನೀಯ. ಒಬ್ಬ ಸಚಿವರಿಂದ ಇಂತಹ ಮಾತುಗಳನ್ನು ನಾವು ನಿರೀಕ್ಷಿರಲಿಲ್ಲ. ಸರ್ಕಾರ ಮಂಡಿಸಲು ಹೊರಟಿರುವ ಕರ್ನಾಟಕ ಖಾಸಗಿ ವೈದ್ಯಕೀಯ (ತಿದ್ದುಪಡಿ) ಕಾಯ್ದೆ 2017 ರಲ್ಲಿ ಸರ್ಕಾರ ನಿರ್ಧರಿಸುವ ದರದಲ್ಲಿ ವೈದ್ಯಕೀಯ ವೆಚ್ಚ ತಗೆದುಕೊಳ್ಳಬೇಕು ಎಂದು ಹೇಳಿರುವುದನ್ನು ನಾವು ವಿರೋಧಿಸುತ್ತೇವೆ.
ಹಾಗೆಯೇ ಈ ಕಾಯ್ದೆಯನ್ನು ವಿಧಾನಸಭೆಯಲ್ಲಿ ಮಂಡಿಸಲು ಬಿಡುವುದಿಲ್ಲ. ಕರ್ನಾಟಕ ಖಾಸಗಿ ವೈದ್ಯಕೀಯ (ತಿದ್ದುಪಡಿ) ಕಾಯ್ದೆ 2017 ಬದಲಾಗಿ ಕರ್ನಾಟಕ ಕ್ಲಿನಿಕ್ ಎಸ್ಟಾಬ್ಲಿಷ್ಮೆಂಟ್ ಕಾಯ್ದೆ ಜಾರಿಗೆ ತರಲಿ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಡಾ. ಪ್ರಭಾಕರ್ ಸುವರ್ಣ ನ್ಯೂಸ್ ಗೆ ತಿಳಿಸಿದ್ದಾರೆ.
