ವೈದ್ಯರಿಂದ ಕೆಪಿಎಂಇ ತಿದ್ದುಪಡಿ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಮಸೂದೆಯಲ್ಲಿನ ಕೆಲ ಅಂಶಗಳನ್ನು ಕೈಬಿಡಲು ಗುರುವಾರ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಅವರು ಆರೋಗ್ಯ ಸಚಿವ ರಮೇಶ್ ಕುಮಾರ್ ಅವರಿಗೆ ಸೂಚಿಸಿದರಾದರೂ, ಇದಕ್ಕೆ ಸಚಿವ ರಮೇಶ್ ಕುಮಾರ್ ಒಪ್ಪಲಿಲ್ಲ ಎನ್ನಲಾಗಿದೆ.
ಬೆಳಗಾವಿ(ನ.17): ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಬೆಳಗಾವಿಯಲ್ಲಿ ಮುಷ್ಕರ ನಿರತ ಖಾಸಗಿ ವೈದ್ಯ ಸಂಘಟನೆಗಳ ಮುಖಂಡರ ಜತೆ ಸಭೆ ನಡೆಸಿದರು. ಆದರೆ, ಸರ್ಕಾರ ಮತ್ತು ವೈದ್ಯರ ನಡುವೆ ಸಹಮತ ಮೂಡದೆ ಸಭೆ ಇಂದಿಗೆ ಮುಂದೂಡಿಕೆಯಾಯಿತು.
ಈ ಮಧ್ಯೆ, ರಾಜ್ಯ ಹೈಕೋರ್ಟ್ ಮನವಿ ಮೇರೆಗೆ ‘ಫನಾ’ ಸಂಘಟನೆಯ ವೈದ್ಯರು ಬೆಂಗಳೂರಿನಲ್ಲಿ ಮುಷ್ಕರ ಹಿಂತೆಗೆದುಕೊಂಡರು. ಮುಖ್ಯಮಂತ್ರಿಗಳ ಜತೆ ಸಭೆ ನಡೆಸಿದ ಇನ್ನೊಂದು ಖಾಸಗಿ ವೈದ್ಯರ ಸಂಘಟನೆಯಾದ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಈ ಬಗ್ಗೆ ಇಂದು ಮತ್ತೊಮ್ಮೆ ಸಿಎಂ ಜೊತೆ ಸಭೆ ನಡೆಸುವುದಾಗಿ ತಿಳಿಸಿದೆ. ಆ ಸಭೆಯಲ್ಲಿ ವಿವಾದ ಇತ್ಯರ್ಥವಾಗುವ ಭರವಸೆಯನ್ನು ಐಎಂಎ ವ್ಯಕ್ತಪಡಿಸಿದೆ.
ಸಿಎಂ ಸೂಚನೆಗೆ ಒಪ್ಪದ ರಮೇಶ್: ವೈದ್ಯರಿಂದ ಕೆಪಿಎಂಇ ತಿದ್ದುಪಡಿ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಮಸೂದೆಯಲ್ಲಿನ ಕೆಲ ಅಂಶಗಳನ್ನು ಕೈಬಿಡಲು ಗುರುವಾರ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಅವರು ಆರೋಗ್ಯ ಸಚಿವ ರಮೇಶ್ ಕುಮಾರ್ ಅವರಿಗೆ ಸೂಚಿಸಿದರಾದರೂ, ಇದಕ್ಕೆ ಸಚಿವ ರಮೇಶ್ ಕುಮಾರ್ ಒಪ್ಪಲಿಲ್ಲ ಎನ್ನಲಾಗಿದೆ. ಇದೊಂದು ಜನಪರ ಕಾಯ್ದೆಯಾಗಿದೆ. ಉತ್ತಮ ಜನಬೆಂಬಲ ವ್ಯಕ್ತವಾಗಿದೆ. ವೈದ್ಯರ ವಿರುದ್ಧವೇ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ ವೈದ್ಯರ ಮುಷ್ಕರ ಕೂಡ ಕಡಿಮೆಯಾಗಿದೆ. ಈಗ ವೈದ್ಯರು ವಿರೋಧಿಸುತ್ತಿದ್ದಾರೆ ಎಂದು ಕೈಬಿಟ್ಟರೆ ಸರ್ಕಾರಕ್ಕೇ ಹಿನ್ನಡೆಯಾಗುತ್ತದೆ. ಸರ್ಕಾರ ಧಿಮಾಕಿನಿಂದ ಈ ಕಾಯಿದೆ ತಂದಿದೆ ಎಂಬ ಮಾತು ಬರೋದು. ಬೇಡ, ಇಂದು ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ನಿರ್ಧಾರ ಕೈಗೊಳ್ಳೋಣ. ಇದರಿಂದ ದೀರ್ಘ ಕಾಲದಲ್ಲಿ ಬಡವರ ಕೈಗೆಟುಕದಂತಾಗಲಿರುವ ಖಾಸಗಿ ಆಸ್ಪತ್ರೆಗಳ ಚಿಕಿತ್ಸೆಯನ್ನು ಜನರಿಗೆ ದೊರಕಿಸಿಕೊಡುವಂತಾಗಲಿದೆ ಎಂದು ಪಟ್ಟು ಹಿಡಿದರು.
ಅದಕ್ಕೆ ಸಿಎಂ, ಹೌದು ಅದೆಲ್ಲ ಸರಿ, ಆದ್ರೆ ಚುನಾವಣೆ ಹತ್ತಿರದಲ್ಲಿ ಯಾರಿಗೂ ಎದುರು ಹಾಕಿಕೊಳ್ಳುವುದು ಒಳ್ಳೆಯದಲ್ಲ. ಜತೆಗೆ ವಿಪಕ್ಷಗಳು ವೈದ್ಯರನ್ನು ಎತ್ತಿಕಟ್ಟಿ ರಾಜಕೀಯ ಲಾಭ ಪಡೆದುಕೊಳ್ಳಲು ಪ್ರಯತ್ನಿಸುತ್ತಿವೆ. ಜತೆಗೆ ಇಂತಹ ಕಾಯಿದೆಯನ್ನು ಸರ್ವಾಧಿಕಾರಿ ಧೋರಣೆಯಿಂದ ತರುವುದೂ ಸಹ ಒಳ್ಳೆಯದಲ್ಲ. ಹೀಗಾಗಿ ಕೆಲವು ತಿದ್ದುಪಡಿ ಮಾಡೋಣ, ವೈದ್ಯರು ಚಿಕಿತ್ಸೆ ನೀಡುವುದಕ್ಕೇ ಭಯ ಪಡುವ ರೀತಿಯೂ ಕಾನೂನು ಇರಬಾರದು. ಇದರಿಂದಲೂ ಸಹ ರೋಗಿಗಳಿಗೆ ನಷ್ಟವಾಗುತ್ತದೆ ಎಂದು ಹೇಳಿದರು. ಈ ಮಧ್ಯೆ, ಸಿಎಂ ಮಾತಿಗೆ ದನಿಗೂಡಿಸಿದ ಮಹದೇವಪ್ಪ ಮತ್ತು ಟಿ.ಬಿ.ಜಯಚಂದ್ರ ರಮೇಶ್ ಕುಮಾರ್ ಅವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು. ಹಾಗಾಗಿ ವೈದ್ಯರ ಪ್ರಮುಖ ಎರಡು ಅಥವಾ ಮೂರು ಬೇಡಿಕೆಗಳನ್ನು ಪರಿಗಣಿಸಲು ತೀರ್ಮಾನಿಸಲಾಗಿದೆ. ಇದನ್ನು ಇಂದು ವೈದ್ಯರ ಜತೆ ನಡೆಯಲಿರುವ ಸಭೆಯಲ್ಲಿ ಸಿಎಂ ಹೇಳುವ ಮೂಲಕ ಮನವೊಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
