ವಿಧೇಯಕದಲ್ಲಿ ಸಣ್ಣ ಪುಟ್ಟ ಬದಲಾವಣೆಗೆ ಸಮ್ಮತಿಸಿರುವ ಸಿಎಂ ತಪ್ಪಿತಸ್ಥ ವೈದ್ಯರಿಗೆ ಜೈಲು ಶಿಕ್ಷೆ ಅಂಶದ ಬದಲು ನೋಟಿಸ್, ಕೊನೆಗೆ ಆಸ್ಪತ್ರೆ ಲೈಸೆನ್ಸ್ ರದ್ದು ಅಂಶ ಸೇರ್ಪಡೆಯಾಗಲಿದೆ.

ಬೆಂಗಳೂರು(ನ.17): ಮುಷ್ಕರನಿರತ ವೈದ್ಯರನ್ನು ಮನವೊಲಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದು, ಮುಷ್ಕರ ಅಂತ್ಯಗೊಂಡಿದೆ.

ಆರೋಗ್ಯ ಸಚಿವ ಕೆ.ಆರ್. ರಮೇಶ್ ಕುಮಾರ್ ಉಪಸ್ಥಿತಿಯಲ್ಲಿ ವೈದ್ಯ ಸಂಘದ ಮುಖಂಡರೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿಗಳು ಮುಷ್ಕರ ನಿಲ್ಲಿಸುವಲ್ಲಿ ಸಫಲರಾಗಿದ್ದಾರೆ. ವಿಧೇಯಕದಲ್ಲಿ ಸಣ್ಣ ಪುಟ್ಟ ಬದಲಾವಣೆಗೆ ಸಮ್ಮತಿಸಿರುವ ಸಿಎಂ ತಪ್ಪಿತಸ್ಥ ವೈದ್ಯರಿಗೆ ಜೈಲು ಶಿಕ್ಷೆ ಅಂಶದ ಬದಲು ನೋಟಿಸ್, ಕೊನೆಗೆ ಆಸ್ಪತ್ರೆ ಲೈಸೆನ್ಸ್ ರದ್ದು ಅಂಶ ಸೇರ್ಪಡೆಯಾಗಲಿದೆ. ವಿಧೇಯಕದಿಂದ ಬಹುತೇಕ ಜೈಲು ಶಿಕ್ಷೆ ಅಂಶ ತೆಗೆದುಹಾಕುವ ಸಾಧ್ಯತೆಯಿದೆ.

ಇಂದು 10 ನಿಮಿಷದ ಗಡುವಿನ ನಂತರ ಎರಡನೇ ಬಾರಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಷ್ಕರ ವಾಪಸ್ ಪಡೆಯಲು ಆದೇಶಿಸಿದೆ. ವೈದ್ಯರ ಪರ ವಕೀಲ ಬಸವರಾಜ್ ಕೂಡ ಶೇ.99 ವಕೀಲರು ಸೇವೆಗೆ ಹಿಂತಿರುಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಖಾಸಗಿ ವೈದ್ಯರ ವಿಧೇಯಕ ವಿರೋಧಿಸಿ ಕಳೆದ 5 ದಿನಗಳಿಂದ ವೈದ್ಯರು ಮುಷ್ಕರ ನಡೆಸುತ್ತಿದ್ದರು. ನಿನ್ನೆ ಹೈಕೋರ್ಟ್ ಸೂಚನೆ ಮೇರೆಗೆ ಬೆಂಗಳೂರಿನ ಖಾಸಗಿ ವ್ಯದ್ಯರು ಹಾಗೂ ನರ್ಸಿಂಗ್ ಹೋಂ ಅಸೋಸಿಯೇಷನ್ (ಫಮಾ) ಮುಷ್ಕರವನ್ನು ಹಿಂತೆಗೆದುಕೊಂಡಿತ್ತು. ವೈದ್ಯರ ಅನಿಯಮಿತ ಮುಷ್ಕರದಿಂದಾಗಿ ರಾಜ್ಯದಾದ್ಯಂತ 30ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.