25 ವರ್ಷದ ಮಹಿಳೆಯೋರ್ವಳ ಹೊಟ್ಟೆಯಿಂದ ಬರೋಬ್ಬರಿ 1.5 ಕೆ.ಜಿಯಷ್ಟು ಕೂದಲನ್ನು ಹೊರತೆಗೆದಿದ್ದಾರೆ. ಒಟ್ಟು 3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಕೂದಲನ್ನು ತೆಗೆಯಲಾಗಿದೆ.
ಇಂದೋರ್(ನ.22): ಕಳೆದ ಕೆಲ ದಿನಗಳ ಹಿಂದಷ್ಟೇ ಮುಂಬೈ ವೈದ್ಯರು ಮಹಿಳೆಯೋರ್ವರಿಗೆ ಶಸ್ತ್ರಚಿಕಿತ್ಸೆ ನಡೆಸಿ ಆಕೆಯ ಹೊಟ್ಟೆಯಿಂದ 750 ಗ್ರಾಂ ಕೂದಲನ್ನು ಹೊರತೆಗೆದಿದ್ದರು. ಇದೀಗ ಅದೇ ರೀತಿಯಾದ ಘಟನೆ ಮಧ್ಯ ಪ್ರದೇಶದ ಇಂದೋರ್'ನಲ್ಲಿ ವರದಿಯಾಗಿದೆ. 25 ವರ್ಷದ ಮಹಿಳೆಯೋರ್ವಳ ಹೊಟ್ಟೆಯಿಂದ ಬರೋಬ್ಬರಿ 1.5 ಕೆ.ಜಿಯಷ್ಟು ಕೂದಲನ್ನು ಹೊರತೆಗೆದಿದ್ದಾರೆ. ಒಟ್ಟು 3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಕೂದಲನ್ನು ತೆಗೆಯಲಾಗಿದೆ. ಇಲ್ಲಿನ ಮಹಾರಾಜ ಯಶವಂತರಾವ್ ಸರ್ಕಾರಿ ಆಸ್ಪತ್ರೆಯಲ್ಲಿ ಡಾ. ಮಾಥುರ್ ನೇತೃತ್ವದ ಐವರು ವೈದ್ಯರ ತಂಡ ಮಹಿಳೆಯನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿದೆ. ಅಲ್ಲದೇ ಇದೀಗ ಆಕೆಯ ಸ್ಥಿತಿ ಇದೀಗ ಸುಧಾರಿಸಿದೆ ಎಂದೂ ಕೂಡ ಹೇಳಿದ್ದಾರೆ.
ಈ ಮಹಿಳೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ವಿರಳವಾದ ರಾಪುಂಜೆಲ್ ಸಿಂಡ್ರೋಮ್'ನಿಂದ ಬಳಲುತ್ತಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಈ ಕಾಯಿಲೆಯಿಂದ ಬಳಲುವವರು ತಮ್ಮ ಕೂದಲನ್ನೇ ಕಿತ್ತು ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ ಎನ್ನಲಾಗಿದೆ. ಇದರಿಂದ ಹೊಟ್ಟೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಕೂದಲು ಸೇರಿಕೊಂಡಿರುತ್ತದೆ.
ಇದರಿಂದ ಸ್ವನಿಯಂತ್ರಣವನ್ನು ಕಳೆದುಕೊಳ್ಳುವುದು, ಹೊಟ್ಟೆ ನೋವಿನಿಂದ ಬಳಲಬೇಕಾಗುತ್ತದೆ. ಒಂದು ವೇಳೆ ಹೊಟ್ಟೆಯಿಂದ ಕೂದಲನ್ನು ಹೊರ ತೆಗೆಯದಿದ್ದಲ್ಲಿ ಅತ್ಯಂತ ಗಂಭೀರ ಸ್ಥಿತಿಗೆ ರೋಗಿಯು ತೆರಳುತ್ತಾರೆ ಎನ್ನುತ್ತಾರೆ ವೈದ್ಯ ಡಾ. ಮಾಥುರ್. ಕಳೆದ ಜೂನ್ ತಿಂಗಳಲ್ಲಿಯೂ ಕೂಡ ರಾಪುಂಜೆಲ್ ಸಿಂಡ್ರೋಮ್'ನಿಂದ ಬಳಲುತ್ತಿದ್ದ 15 ವರ್ಷದ ಬಾಲಕಿಗೆ ಥಾಣೆಯ ಛತ್ರಪತಿ ಶಿವಾಜಿ ಮಹಾರಾಜ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆಗ ಆಕೆಯ ಹೊಟ್ಟೆಯಿಂದ 2.5 ಕೆ.ಜಿ ತೂಕದ ಕೂದಲನ್ನು ಹೊರತೆಗೆಯಲಾಗಿತ್ತು.
