"ಬೆಟ್ಟವನ್ನು ಅಲ್ಲಾಡಿಸಬಹುದು; ಚೀನೀ ಸೇನೆಯನ್ನು ಕದಲಿಸಲು ಸಾಧ್ಯವಿಲ್ಲ""ಚೀನಾದ ಸೇನೆಯು ತನ್ನ ನೆಲವನ್ನು ಕಾಪಾಡಿಕೊಳ್ಳುವಷ್ಟು ಸಮರ್ಥವಾಗಿದೆ""ಅವಾಸ್ತವಿಕ ಭ್ರಮೆಗಳನ್ನಿಟ್ಟುಕೊಂಡು ಭಾರತವು ಅದೃಷ್ಟಪರೀಕ್ಷೆ ಮಾಡಿಕೊಳ್ಳದಿರುವುದು ಒಳ್ಳೆಯದು"

ಬೀಜಿಂಗ್(ಜುಲೈ 24): ತನ್ನ ನೆಲವನ್ನು ಕಾಪಾಡಿಕೊಳ್ಳುವುದು ಚೀನಾಗೆ ಚೆನ್ನಾಗಿ ಗೊತ್ತು. ಈ ವಿಚಾರದಲ್ಲಿ ಭಾರತವು ತನ್ನ ಭ್ರಮೆಯಿಂದ ಹೊರಬರಲಿ ಎಂದು ಚೀನಾ ಹೇಳಿದೆ. ಸಿಕ್ಕಿಂ ಗಡಿ ಬಿಕ್ಕಟ್ಟು ವಿಚಾರದಲ್ಲಿ ಇಂದು ಹೇಳಿಕೆ ನೀಡಿದ ಚೀನಾದ ರಕ್ಷಣಾ ಸಚಿವಾಲಯವು ಭಾರತಕ್ಕೆ ಮತ್ತೊಮ್ಮೆ ಕಟು ಎಚ್ಚರಿಕೆಯ ಸಂದೇಶ ರವಾನಿಸಿದೆ. ಅವಾಸ್ತವಿಕ ಭ್ರಮೆಗಳನ್ನಿಟ್ಟುಕೊಂಡು ಭಾರತವು ಅದೃಷ್ಟಪರೀಕ್ಷೆ ಮಾಡಿಕೊಳ್ಳದಿರುವುದು ಒಳ್ಳೆಯದು ಎಂದು ಚೀನಾ ವಾರ್ನಿಂಗ್ ಮಾಡಿದೆ.

ಬೆಟ್ಟ ಅಲ್ಲಾಡಿಸಬಹುದು...
ಚೀನಾದ ಸೇನೆಯು ತನ್ನ ನೆಲವನ್ನು ಕಾಪಾಡಿಕೊಳ್ಳುವಷ್ಟು ಸಮರ್ಥವಾಗಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ವು ಕಿಯಾನ್ ಹೇಳಿದ್ದಾರೆ. "ಬೆಟ್ಟವನ್ನು ಅಲುಗಾಡಿಸುವುದು ಸುಲಭ. ಆದರೆ, ಪೀಪಲ್ಸ್ ಲಿಬರೇಶನ್ ಆರ್ಮಿ(ಚೀನೀ ಸೇನೆ)ಯನ್ನು ಕದಲಿಸಲು ಸಾಧ್ಯವಿಲ್ಲ" ಎಂದು ವು ಕಿಯಾನ್ ಹೇಳಿದ್ದಾರೆ.

ಏನು ಗಡಿವಿವಾದ?
ಚೀನಾ, ಭಾರತ ಮತ್ತು ಭೂತಾನ್ ದೇಶಗಳ ಗಡಿಗಳು ಸೇರುವ ಡೋಕ್ಲಾಮ್ ಎಂಬಲ್ಲಿ ಚೀನಾ ದೇಶವು ರಸ್ತೆಗಳನ್ನು ನಿರ್ಮಿಸುತ್ತಿದೆ. ಈ ಡೋಕ್ಲಾಮ್ ತನಗೆ ಸೇರಿದ ಪ್ರದೇಶವಾಗಿದ್ದೆಂದು ಭೂತಾನ್ ವಾದಿಸುತ್ತಿದೆ. ಹೀಗಾಗಿ, ಇದು ಇನ್ನೂ ಗಡಿವಿವಾದದ ಬಿಕ್ಕಟ್ಟಿನಿಂದ ಮುಕ್ತವಾಗಿಲ್ಲ. ಹೀಗಾಗಿ, ಚೀನಾ ದೇಶವು ಈ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡುತ್ತಿರುವುದಕ್ಕೆ ಭೂತಾನ್ ಆಕ್ಷೇಪಿಸಿ ಭಾರತದ ಸಹಾಯ ಯಾಚಿಸಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸೈನಿಕರು ಚೀನೀಯರನ್ನ ಎದುರುಗೊಂಡು, ಡೋಕ್ಲಾಮ್'ನಿಂದ ಹಿಂದೆ ಸರಿಯುವಂತೆ ಹೇಳಿದ್ದಾರೆ. ಇದು ಚೀನಾ ದೇಶದ ಕೆಂಗಣ್ಣಿಗೆ ಕಾರಣವಾಗಿದೆ. ತನ್ನ ನೆಲದ ಮೇಲೆ ಏನಾದರೂ ಮಾಡಿಕೊಳ್ಳುತ್ತೇನೆ. ಭಾರತ ಇಲ್ಲಿ ತಲೆಹಾಕಬಾರದು. ಭಾರತೀಯ ಸೈನಿಕರು ಗಡಿಭಾಗದಿಂದ ಕೂಡಲೇ ವಾಪಸ್ ಹೋಗಬೇಕು ಎಂದು ಚೀನಾದವರು ಆಗಿನಿಂದಲೂ ಬಡಬಡಿಸುತ್ತಾ ಬಂದಿದ್ದಾರೆ. ಆದರೆ, ಚೀನಾ ಸೈನಿಕರು ಡೋಕ್ಲಾಮ್'ನಿಂದ ಹಿಂದೆ ಸರಿಯುವವರೆಗೆ ತಮ್ಮ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವುದಿಲ್ಲ ಎಂದು ಭಾರತವೂ ದಿಟ್ಟವಾಗಿ ಪ್ರತ್ಯುತ್ತರ ನೀಡುತ್ತಿದೆ.