ಸೈನಿಕರಿಗೆ ಕೇಂದ್ರ ಸರ್ಕಾರದ ಖಡಕ್ ಸೂಚನೆ: ರಾಜನಾಥ್ ಪಾಕ್‌ನಿಂದ ಒಂದು ಗುಂಡು ಒಳಗೆ ಬಂದ್ರೂ ಸುಮ್ಮನಿರಲ್ಲ
ಬೆಂಗಳೂರು: ದೇಶದ ಗಡಿಯೊಳಗೆ ಪಾಕಿಸ್ತಾನದಿಂದ ಒಂದೇ ಒಂದು ಗುಂಡು ಬಂದರೂ ಅದಕ್ಕೆ ಪ್ರತಿಯಾಗಿ ಲೆಕ್ಕ ಇಡದೇ ಗುಂಡು ಹಾರಿಸುವಂತೆ ದೇಶದ ಸೈನಿಕರಿಗೆ ಖಡಕ್ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಪಾಕಿಸ್ತಾನವು ಆಗಾಗ್ಗೆ ಕದನ ವಿರಾಮ ಉಲ್ಲಂಘನೆ, ಗುಂಡಿನ ದಾಳಿ ನಡೆಸುತ್ತಿದ್ದರೂ ನಮ್ಮ ಯೋಧರು ಏಕಾಏಕಿ ಗುಂಡು ಹಾರಿಸುವುದಿಲ್ಲ. ಶತ್ರು ರಾಷ್ಟ್ರದಿಂದ ಒಂದು ಗುಂಡು ಬಂದರೂ ನಾವು ತಕ್ಕ ಉತ್ತರ ನೀಡದೆ ಬಿಡುವುದಿಲ್ಲ ಎಂದೂ ಅವರು ಗುಡುಗಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿ ನಡೆದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಒಂಭತ್ತನೇ ರಾಜ್ಯ ಮಟ್ಟದ ವಿಶ್ವಕರ್ಮ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಶಾಂತಿ ಸೌಹಾರ್ದತೆಗೆ ಭಾರತವು ಆದ್ಯತೆ ನೀಡುತ್ತಿದೆ. ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದರೂ ತಾಳ್ಮೆಯನ್ನು ಕಾಯ್ದುಕೊಳ್ಳಲಾಗುತ್ತಿದೆ. ಪಾಕಿಸ್ತಾನವು ಭಾರತದ ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ಗಡಿಯಲ್ಲಿ ಪ್ರಚೋದನ ಕಾರಿ ಚಟುವಟಿಕೆಗಳನ್ನು ನಡೆಸುತ್ತಿದೆ. ಪ್ರತಿ ನಿತ್ಯ ದೇಶದ ನಾಲ್ಕೈದು ಯೋಧರನ್ನು ಭಯೋತ್ಪಾದಕರು ಹತ್ಯೆ ಮಾಡುತ್ತಿದ್ದಾರೆ.
ದೇಶವನ್ನು ವಿಭಜಿಸುವ ದುರುದ್ದೇಶದಿಂದ ಗಡಿಯಲ್ಲಿ ಉಗ್ರರನ್ನು ನುಗ್ಗಿಸುವುದನ್ನು ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದೆ. ಇದನ್ನು ತಡೆಯುವ ಉದ್ದೇಶದಿಂದ ಗಡಿ ಭಾಗದಲ್ಲಿ ಸೈನಿಕರ ನಿಯೋಜನೆ ಹೆಚ್ಚು ಮಾಡಿದ್ದು, ಭದ್ರತೆಗೆ
ಹೆಚ್ಚಿನ ಒತ್ತು ನೀಡಲಾಗುತ್ತಿದೆ. ದೇಶಕ್ಕೆ ತೊಂದರೆ ಕೊಡುವುದನ್ನೇ ಕಾಯಕ ಮಾಡಿಕೊಂಡಿರುವ ಪಾಕಿಸ್ತಾನಕ್ಕೆ ತಿರುಗೇಟು ನೀಡುವ ಕಾರ್ಯವನ್ನು ಯೋಧರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದು ಹೇಳಿದರು.
ಭ್ರಷ್ಟಾಚಾರ, ಹಸಿವು, ಭಯೋತ್ಪಾದನೆಯನ್ನು ಬಿಜೆಪಿ ಎಷ್ಟು ದ್ವೇಷಿಸುತ್ತದೆಯೋ, ಜಾತಿವಾದ, ಕೋಮುವಾದವನ್ನು ಸಹ ವಿರೋಧಿಸುತ್ತದೆ. ಕಳೆದ ಮೂರುವರೆ ವರ್ಷದಲ್ಲಿ ಎನ್ಡಿಎ ಸರ್ಕಾರದ ಒಂದೇ ಒಂದು ಹಗರಣವೂ ನಡೆದಿಲ್ಲ. ಆದರೆ, ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಸಾಲು ಸಾಲು ಹಗರಣಗಳು ನಡೆದಿರುವ ಉದಾಹರಣೆಗಳಿವೆ ಎಂದು ತಿಳಿಸಿದರು.
ಕಾರ್ಯ ಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯೂರಪ್ಪ, ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್, ಅನಂತಕುಮಾರ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಸಂಸದೆ ಶೋಭಾ ಕರಂದ್ಲಾಜೆ, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ.ನಂಜುಂಡಿ, ನಟ ರವಿಚಂದ್ರನ್ ಭಾಗವಹಿಸಿದ್ದರು.
