ಕೇಂದ್ರ ಸರ್ಕಾರದ ಈ ತೀರ್ಮಾನದಿಂದ ತಮ್ಮ ಹಣವನ್ನೂ ಡ್ರಾ ಮಾಡಿಕೊಳ್ಳಲಾಗದೆ 100ಕ್ಕೂ ಹೆಚ್ಚು ಮಂದಿ ಬಡವರು ಸಾವನ್ನಪ್ಪಿದರು
ಬೆಂಗಳೂರು(ನ.08): ಕೇಂದ್ರ ಸರ್ಕಾರ ಜಾರಿಗೊಳಿಸಿದ ನೋಟು ಅಮಾನ್ಯೀಕರಣವು ದೇಶದ ದೊಡ್ಡ ಅನಾಹುತವಾಗಿದ್ದು, ನೂರಾರು ಬಡವರ ಪ್ರಾಣ ಹಾಗೂ ಲಕ್ಷಾಂತರ ಮಂದಿಯ ಉದ್ಯೋಗ ಕಿತ್ತುಕೊಂಡು ಬಡವರನ್ನು ಬೀದಿ ಪಾಲು ಮಾಡಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೀಗಾಗಿಯೇ ಪಕ್ಷದ ವತಿಯಿಂದ ನ.8ರಂದು ನೋಟು ಅಮಾನ್ಯೀಕರಣಕ್ಕೆ ಒಂದು ವರ್ಷವಾದ ಪ್ರಯುಕ್ತ ಕರಾಳ ದಿನಾಚರಣೆ ಮಾಡುತ್ತಿದ್ದೇವೆ. ನೋಟು ಅಮಾನ್ಯೀಕರಣದಿಂದ ತಾವು ಸಾಧಿಸುತ್ತೇವೆ ಎಂದು ಮೋದಿ ಹೇಳಿಕೊಂಡ ಯಾವುದೇ ಉದ್ದೇಶ ಈಡೇರಿಲ್ಲ ಎಂದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಈ ತೀರ್ಮಾನದಿಂದ ತಮ್ಮ ಹಣವನ್ನೂ ಡ್ರಾ ಮಾಡಿಕೊಳ್ಳಲಾಗದೆ 100ಕ್ಕೂ ಹೆಚ್ಚು ಮಂದಿ ಬಡವರು ಸಾವನ್ನಪ್ಪಿದರು. ಆರ್ಥಿಕ ವ್ಯವಸ್ಥೆ ಹಾಳಾಗಿ
ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡರು. ನಮ್ಮ ಹಣ ಇದೇ ರೀತಿ ಖರ್ಚು ಮಾಡಬೇಕು ಎಂದು ಶೋಷಣೆ ಮಾಡಿದರು. ಡಿಜಿಟಲ್ ಮನಿ ಹೆಸರಿನಲ್ಲಿ ಖಾಸಗಿ ಕಂಪನಿಗಳಿಗೆ ನಮ್ಮ ಹಣದಿಂದ ಕಮೀಷನ್ ಕೊಡಿಸಿ ಲೂಟಿ ಹೊಡೆದರು. ಸ್ವತಂತ್ರ ಭಾರತದಲ್ಲಿ ಎಲ್ಲಾ ಸ್ವಾತಂತ್ರ್ಯವನ್ನೂ ಕಿತ್ತುಕೊಂಡು ಶೋಷಣೆ ಮಾಡಿದರು ಎಂದು ಡಿ.ಕೆ.ಶಿವಕುಮಾರ್ ದೂರಿದರು.
2 ಲಕ್ಷ ರು. ಮೇಲಿನ ವೆಚ್ಚಕ್ಕೆ ಚೆಕ್ ಕಡ್ಡಾಯ ಎನ್ನುತ್ತಾರೆ. ಹಿಂದೂ ಸಂಪ್ರದಾಯದಲ್ಲಿ ದೊಡ್ಡ ಸಂಭ್ರಮವಾಗಿರುವ ಬಡ ಹಾಗೂ ಮಧ್ಯಮ ವರ್ಗದ ಕುಟುಂಬದಲ್ಲಿ ಮಕ್ಕಳ ಮದುವೆ ಹೇಗೆ ಮಾಡಬೇಕು? ನಮ್ಮ ದುಡ್ಡು ಖರ್ಚು ಮಾಡಲು ಸಹ ಪ್ರತಿಯೊಂದಕ್ಕೂ ಸರ್ಕಾರಕ್ಕೆ ಲೆಕ್ಕ ಕೊಡಬೇಕೆ? ಎಂದು ಪ್ರಶ್ನಿಸಿದರು.
