ಇಂತಹ ವರ್ತನೆಯನ್ನು ಜನರು ಸಹಿಸುವುದಿಲ್ಲ. ಇಂತಹ ತಪ್ಪುಗಳಿಗೆ ಬಿಜೆಪಿ ಶೀಘ್ರವೇ ಪಾಠ ಕಲಿಯಲಿದೆ ಎಂದು ಎಚ್ಚರಿಕೆ ನೀಡಿದರು.

ಬೆಂಗಳೂರು(ಮಾ.13): ಗೋವಾ ವಿಧಾನಸಭೆಯ ಶಾಸಕರಲ್ಲದ ಮನೋಹರ್ ಪರ್ರಿಕರ್ ಅವರನ್ನು ಸರ್ಕಾರ ರಚನೆಗೆ ಆಹ್ವಾನಿಸುವ ಮೂಲಕ ಗೋವಾ ರಾಜ್ಯಪಾಲರು ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಾ ರಾಜ್ಯದಲ್ಲಿ ಅಲ್ಲಿನ ಜನತೆ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ. ಆದರೆ ರಾಜ್ಯಪಾಲರು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್‌ಗೆ ಆಹ್ವಾನ ನೀಡದೇ ಬಿಜೆಪಿಗೆ ಆಹ್ವಾನ ನೀಡಿ, 15 ದಿನ ಬಹುಮತ ಸಾಬೀತಿಗೆ ಕಾಲಾವಕಾಶ ನೀಡಿದ್ದಾರೆ. ಈ ಮೂಲಕ ಕುದುರೆ ವ್ಯಾಪಾರ ನಡೆಸಲು ತಾವೇ ಖುದ್ದಾಗಿ ಮುಂದಾಗುವ ಲಕ್ಷಣ ತೋರಿದ್ದಾರೆ ಎಂದು ಟೀಕಿಸಿದರು.

ಗೋವಾ ರಾಜ್ಯಪಾಲರ ವರ್ತನೆ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ. ರಾಜ್ಯಪಾಲರು ಕೇವಲ 13 ಸ್ಥಾನ ಗಳಿಸಿರುವ ಬಿಜೆಪಿಯನ್ನು ಸರ್ಕಾರ ರಚನೆಗೆ ಆಹ್ವಾನಿಸುವ ಮೂಲಕ ಅಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಇಂತಹ ವರ್ತನೆಯನ್ನು ಜನರು ಸಹಿಸುವುದಿಲ್ಲ. ಇಂತಹ ತಪ್ಪುಗಳಿಗೆ ಬಿಜೆಪಿ ಶೀಘ್ರವೇ ಪಾಠ ಕಲಿಯಲಿದೆ ಎಂದು ಎಚ್ಚರಿಕೆ ನೀಡಿದರು.

ಉತ್ತರ ಭಾರತದ ಜನರು ಬಿಜೆಪಿ ಆಡಳಿತ ನೋಡಿಲ್ಲ. ಹೀಗಾಗಿ ಉತ್ತರ ಪ್ರದೇಶದಲ್ಲಿ ಗೆಲ್ಲಿಸಿದ್ದಾರೆ. ಅಲ್ಲದೇ ಉತ್ತರ ಪ್ರದೇಶದಲ್ಲಿ ಜನರು ಬದಲಾವಣೆ ಬಯಸಿದ್ದರು. ಆದರೆ ಕರ್ನಾಟಕದಲ್ಲಿ ಈಗಾಗಲೇ ಬಿಜೆಪಿ ಆಡಳಿತ ನೋಡಿರುವ ಜನರು ಮುಂದೆಂದೂ ಬಿಜೆಪಿ ಗೆಲ್ಲಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ಮುಂದೆಯೂ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.